ಮಗು ಅಪಹರಣ ಪ್ರಕರಣ: ದೂರು ಬಂದ ಕೆಲವೇ ಗಂಟೆಯೊಳಗೆ ಪ್ರಕರಣ ಭೇದಿಸಿ, ಮಗುವನ್ನು ಹೆತ್ತವರ ಮಡಿಲು ಸೇರಿಸಿದ ಮಂಗಳೂರು ಪೊಲೀಸರು

ಕರಾವಳಿ

ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಗು ಅಪಹರಣ ಪ್ರಕರಣವನ್ನು ದೂರು ಬಂದ ಕೆಲವೇ ಗಂಟೆಯೊಳಗೆ ಭೇದಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿ, ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ‘ಆರೋಪಿಯನ್ನು ಕೇರಳ ಎರ್ನಾಕುಳಂ ಜಿಲ್ಲೆಯ ಪರವೂರ್‌ನ ಅನೀಶ್ ಕುಮಾರ್ ( 49) ಎಂದು ಗುರುತಿಸಲಾಗಿದೆ. ಮೂರು ಗಂಡು ಮಕ್ಕಳನ್ನು ಹೊಂದಿರುವ ಆತ ಹೆಣ್ಣು ಮಗು ಸಾಕಬೇಕೆಂಬ ಉದ್ದೇಶದಿಂದ ಮಗುವನ್ನು ಕರೆದುಕೊಂಡು ಹೋಗಿದ್ದೇನೆ’ ಎಂದು ತಿಳಿಸಿದ್ದಾನೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್‌ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

‘ಅಳಪೆ ಪಡೀಲ್ ಅರಣ್ಯ ಇಲಾಖೆಯ ಸಸ್ಯವನದಲ್ಲಿ ಕೆಲಸ ಮಾಡಿಕೊಂಡಿದ್ದ ಕೆಲಸಗಾರರ ಎರಡೂವರೆ ವರ್ಷದ ಹೆಣ್ಣು ಮಗು ಶನಿವಾರ ಸಂಜೆ 4.30 ಗಂಟೆಗೆ ಕಾಣೆಯಾಗಿತ್ತು. ಎಲ್ಲ ಕಡೆ ಹುಡುಕಾಡಿ ಸಂಜೆ 7.30 ಗಂಟೆಗೆ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಕಂಕನಾಡಿ ನಗರ ಪೊಲೀಸರು ಎಲ್ಲ ಕಡೆ ಮಾಹಿತಿ ಹಂಚಿಕೊಂಡಿದ್ದರು.’

‘ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳನ್ನು ಪರಿಶೀಲಿಸಿದಾಗ, ವ್ಯಕ್ತಿಯೊಬ್ಬರು ಮಗುವನ್ನು ಕರೆದೊಯ್ಯುತ್ತಿರುವುದು ಕಂಡು ಬಂದಿತ್ತು. ಆತ ಕೇರಳ ಕಡೆಗೆ ಹೋದ ರೈಲಿನಲ್ಲಿ ಪ್ರಯಾಣಿಸಿದ್ದನ್ನು ಕಂಡು, ಈ ಬಗ್ಗೆ ಕಾಸರಗೋಡು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅಲ್ಲಿಗೆ ತೆರಳಿದ ಮಂಗಳೂರಿನ ಪೊಲೀಸರು ಕಾಸರಗೋಡು ಪೊಲೀಸರ ಜತೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಮಗು ಸಹಿತವಾಗಿ ರಾತ್ರಿ 9.30ಕ್ಕೆ ವಶಕ್ಕೆ ಪಡೆದಿದ್ದಾರೆ. ಮಗು ಸುರಕ್ಷಿತವಾಗಿದ್ದು ಅದನ್ನು ಹೆತ್ತವರಿಗೆ ಒಪ್ಪಿಸಲಾಗಿದೆ. ಆರೋಪಿ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿದೆ. ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

“ಹೆಣ್ಣು ಮಗುವಿನ ಮೇಲಿನ ಆಸೆ’
ಆರೋಪಿ ಅನೀಶ್‌ ಕುಮಾರ್‌(59) ಎರ್ನಾಕುಲಂ ನಿವಾಸಿಯಾಗಿದ್ದು ಈತನನ್ನು ಪೊಲೀಸರು ವಿಚಾರಿಸಿದಾಗ “ನನಗೆ ಮೂವರು ಗಂಡು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳಿಲ್ಲ. ನಾನು ಮಗುವಿನ ಬಳಿ ಹೋದಾಗ ಅದು ನೋಡಿ ನಗಾಡಿತು. ಅದು ನನ್ನ ಹಿಂದೆ ಬಂತು. ನಾನು ಎತ್ತಿಕೊಂಡು ಬಂದೆ’ ಎಂದು ಉತ್ತರಿಸಿದ್ದಾನೆ ಎಂದು ತಿಳಿದುಬಂದಿದೆ.

ಆರೋಪಿ ಅನೀಶ್‌ ಕುಮಾರ್‌ ವಿವಿಧ ಕಡೆಗಳಿಗೆ ರೈಲಿನಲ್ಲಿ ತಿರುಗಾಡುತ್ತಿದ್ದು ಕೆಲವು ದಿನಗಳ ಹಿಂದೆ ಮುಂಬೈಗೆ ಹೋಗಿ ಬಂದಿದ್ದ. ಶನಿವಾರದಂದು ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣಕ್ಕೆ ಬಂದು ಇಳಿದಿದ್ದ. ಅಲ್ಲಿಂದ ನಗರದ ಕಡೆಗೆ ಬರುತ್ತಿದ್ದಾಗ ರೈಲ್ವೆ ನಿಲ್ದಾಣಕ್ಕೆ ಹತ್ತಿರವಿರುವ ಬಜಾಲ್‌ನಲ್ಲಿ ಮಗುವನ್ನು ಕಂಡು ಅದರ ಹತ್ತಿರ ಹೋಗಿದ್ದ. ಬಳಿಕ ಎತ್ತಿಕೊಂಡು ಬಂದಿದ್ದ. ಈತನ ವಿರುದ್ಧ ಈ ಹಿಂದೆ ಬೇರೆ ಯಾವುದೇ ಪ್ರಕರಣಗಳು ದಾಖಲಾಗಿರುವ ಮಾಹಿತಿ ದೊರೆತಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ