ಬೆಂಗಳೂರು: ಬಾಂಗ್ಲಾ ಮೂಲದ ಅಪ್ರಾಪ್ತ ಬಾಲಕಿಯರನ್ನು ಕರೆತಂದು ಹೊಂಗಸಂದ್ರದ ಮನೆಯಲ್ಲಿಟ್ಟು ವೇಶ್ಯಾವಾಟಿಕೆ ದಂಧೆ

ರಾಷ್ಟ್ರೀಯ

ಸಾಫ್ಟ್‌ವೇರ್‌ ಎಂಜಿನಿಯರ್‌ ಸುಬ್ರಹ್ಮಣ್ಯ ಶಾಸ್ತ್ರಿ ಅಪ್ರಾಪ್ತ ಹುಡುಗಿಯರನ್ನೇ ಬುಕ್‌ ಮಾಡುತ್ತಿದ್ದನಂತೆ.

ಬಾಂಗ್ಲಾದೇಶದಿಂದ ಹುಡುಗಿಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಬೆಂಗಳೂರಿನ ಹೊಂಗಸಂದ್ರ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದಾಗ ಬಾಂಗ್ಲಾದೇಶದ ಇಬ್ಬರು ಅಪ್ರಾಪ್ತ ಬಾಲಕಿಯರು ವೇಶ್ಯಾವಾಟಿಕೆಗೆ ಬಳಕೆಯಾಗುತ್ತಿರುವುದು ತಿಳಿದುಬಂದಿದೆ. ಕೂಡಲೇ ಸಿಸಿಬಿ ಪೊಲೀಸರು ಇಬ್ಬರೂ ಬಾಲಕಿಯರನ್ನು ರಕ್ಷಣೆ ಮಾಡಿದ್ದಾರೆ.

ಪ್ರಕರಣ ಸಂಬಂಧ ಮೂವರು ವ್ಯಕ್ತಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಸಿಬ್ಬಂದಿ ಈ ದಾಳಿ ನಡೆಸಿದೆ. ಬಂಧಿತರಲ್ಲಿ ಇಬ್ಬರು ಒರಿಸ್ಸಾದವರಾಗಿದ್ದು, ಮತ್ತೊಬ್ಬ ಸ್ಥಳೀಯ ಎಂದು ತಿಳಿದುಬಂದಿದೆ. ಸೂರಜ್‌ ಸಾಹಜಿ, ಸುಬ್ರಹ್ಮಣ್ಯ ಶಾಸ್ತ್ರಿ ಹಾಗೂ ಕರಿಷ್ಮಾ ಶೇಖ್‌ ಎಂಬುವವರೇ ಬಂದಿತ ಆರೋಪಿಗಳಾಗಿದ್ದಾರೆ. ಇವರಲ್ಲಿ ಸುಬ್ರಹ್ಮಣ್ಯ ಶಾಸ್ತ್ರಿ ಎಂಬಾತ ಸ್ಥಳೀಯನಾಗಿದ್ದು, ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುತ್ತಾನೆ.

ಸಾಫ್ಟ್‌ವೇರ್‌ ಎಂಜಿನಿಯರ್‌ ಸುಬ್ರಹ್ಮಣ್ಯ ಶಾಸ್ತ್ರಿ ಅಪ್ರಾಪ್ತ ಹುಡುಗಿಯರು ಬೇಕು ಎಂದು ಬುಕ್‌ ಮಾಡಿದ್ದನಂತೆ. ಹೀಗಾಗಿ ಇನ್ನಿತರ ಇಬ್ಬರು ಆರೋಪಿಗಳು ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಆತನ ಮನೆಗೆ ಕರೆದುಕೊಂಡು ಬಂದಿದ್ದರು ಎಂದು ತಿಳಿದುಬಂದಿದೆ. ಈ ವಿಷಯ ತಿಳಿದ ಪೊಲೀಸರು ಏಕಾಏಕಿ ದಾಳಿ ಮಾಡಿದ್ದಾರೆ. ವಿಚಾರಣೆ ನಡೆಸಿದಾಗಿ ಬಾಲಕಿಯರು ಬಾಂಗ್ಲಾದೇಶದವರು ಎಂದು ಗೊತ್ತಾಗಿದ್ದು, ಹೊಂಗಸಂದ್ರದ ಬಾಡಿಗೆ ಮನೆಯಲ್ಲಿಟ್ಟು ವೇಶ್ಯಾವಟಿಕೆ ನಡೆಸಲಾಗುತ್ತಿತ್ತು ಎಂದು ತಿಳಿದುಬಂದಿದೆ. 15 ಹಾಗೂ 16 ವರ್ಷದ ಬಾಂಗ್ಲಾ ಮೂಲದ ಹುಡುಗಿರಯರನ್ನು ಕರೆತಂದು ಹೊಂಗಸಂದ್ರದ ಮನೆಯಲ್ಲಿಟ್ಟು ಅವರಿಂದ ವೇಶ್ಯಾವಾಟಿಕೆ ದಂಧೆ ಮಾಡಿಸಲಾಗುತ್ತಿತ್ತು ಎಂಬುದು ಬಯಲಾಗಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.

ಇನ್ನೊಂದು ಕಡೆ ಹೊಟೇಲ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿ ನಾಲ್ವರನ್ನು ಬಂಧಿಸಿದ ಘಟನೆ ಉತ್ತರಕನ್ನಡದ ಮುರ್ಡೇಶ್ವರದಲ್ಲಿ ನಡೆದಿದೆ. ಮುರ್ಡೇಶ್ವರದ ಬಸ್ತಿಮಕ್ಕಿಯ ಐ ಲ್ಯಾಂಡ್ ಹೊಟೇಲ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡ ನಾಲ್ವರನ್ನು ಬಂಧಿಸಲಾಗಿದೆ.