ಮದುವೆ ನಿಶ್ಚಿತಾರ್ಥವಾಗಬೇಕಿದ್ದ ಟೆಕ್ಕಿಯೊಬ್ಬ ಸೋಮವಾರ ದಿನ ಸಿಸಿಬಿ ಪೊಲೀಸರು ವೇಶ್ಯಾವಾಟಿಕೆ ದಂಧೆ ಮೇಲೆ ದಾಳಿ ನಡೆಸಿದ್ದಾಗ ಸಿಕ್ಕಿಬಿದ್ದಿದ್ದ, ಈತ ದ.ಕ ಜಿಲ್ಲೆಯ ಬೆಳ್ತಂಗಡಿ ಪರಿಸರದ. ಇದೀಗ ಆತನ ನಿಶ್ಚಿತಾರ್ಥವೇ ರದ್ದಾಗಿದೆ. ಪ್ರಕರಣದ ಸಂಬಂಧ ಟೆಕ್ಕಿ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಹೊಂಗಸಂದ್ರದ ಮನೆಯಲ್ಲಿ ಕರಿಷ್ಮಾಶೇಖ್ ಅಲಿಯಾಸ್ ಮುಸ್ಕಾನ್, ಶಾಂತಿಪುರದ ಸೂರಜ್ ಶಾಹಜೀ ಹಾಗೂ ಬೆಳ್ತಂಗಡಿ ಮೂಲದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ದ ಟೆಕ್ಕಿ ಸುಬ್ರಮಣ್ಯ ಶಾಸ್ತ್ರಿ ಬಂಧಿತರು.
ಬಾಂಗ್ಲಾದೇಶ ಮೂಲದ ಅಪ್ರಾಪ್ತೆಯರನ್ನು ಕಳ್ಳಸಾಗಣೆ ಮೂಲಕ ನಗರಕ್ಕೆ ಕರೆತಂದು ವೇಶ್ಯಾವಾಟಿಕೆ ದಂಧೆಗೆ ದೂಡಿರುವ ಮಾಹಿತಿ ಮೇರೆಗೆ ಇತ್ತೀಚೆಗೆ ಸಿಸಿಬಿಯ ಮಹಿಳಾ ಸಂರಕ್ಷಣಾ ದಳ ಪೊಲೀಸರು ಬೊಮ್ಮನಹಳ್ಳಿ ಠಾಣೆ ವ್ಯಾಪ್ತಿಯ ಮನೆಯೊಂದರ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಿ 15 ಮತ್ತು 17 ವಯಸ್ಸಿನ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿದ್ದರು. ಹೊಂಗಸಂದ್ರದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ಬಗ್ಗೆ ಮಾಹಿತಿ ಪಡೆದು ಶುಕ್ರವಾರ ಸಿಸಿಬಿ ಡಿಸಿಪಿ ಅಬ್ದುಲ್ ಅಹದ್ ಮಾರ್ಗದರ್ಶನದಲ್ಲಿ ಮಹಿಳಾ ಸಂರಕ್ಷಣಾ ದಳದ ಎಸಿಪಿ ಎಚ್.ಎನ್.ಧರ್ಮೇಂದ್ರ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಕರಿಷ್ಮಾ ಹಾಗೂ ಸೂರಜ್ ಮೂಲತಃ ಪಶ್ಚಿಮ ಬಂಗಾಳದವರಾಗಿದ್ದು, ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಉದ್ಯೋಗ ಹರಿಸಿಕೊಂಡು ಬಂದು ನಗರದಲ್ಲಿಯೇ ಬಾಡಿಗೆ ಮನೆ ಪಡೆದು ಅಲ್ಲಿಯೇ ವೈಶ್ಯಾವಟಿಕೆ ದಂಧೆಯನ್ನು ನಡೆಸುತ್ತಿದ್ದರು. ಕೆಲ ದಿನಗಳ ಹಿಂದೆ ಬಾಂಗ್ಲಾ ದೇಶದ ಇಬ್ಬರು ಬಾಲಕಿಯರನ್ನು ಇವರು ಕರೆತಂದು ವೇಶ್ಯಾವಾಟಿಕೆ ದಂಧೆಗೆ ದೂಡಿದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಗ್ರಾಹಕ ಟೆಕ್ಕಿ ಸುಬ್ರಮಣ್ಯ ಕೂಡ ಸಿಕ್ಕಿಬಿದ್ದಿದ್ದ. ಇದೀಗ ಆತನ ನಿಶ್ಚಿತಾರ್ತವೇ ಹೆಣ್ಣಿನ ಕಡೆಯವರು ರದ್ದುಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.