ಶಿಕ್ಷಕರ ದಿನಾಚರಣೆ ಪ್ರಯುಕ್ತ ನೀಡಲ್ಪಡುವ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಮೂಡುಬಿದಿರೆ ತಾಲೂಕಿನ ಕೋಟೆ ಬಾಗಿಲು ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕಿ ಮೇಬಲ್ ಫೆರ್ನಾಂಡಿಸ್ ಭಾಜನರಾಗಿದ್ದಾರೆ.
ಕಳೆದ 30 ವರ್ಷಗಳಿಂದ ಶಿಕ್ಷಕರಾಗಿ ಸೇವೆಯಲ್ಲಿ ತೊಡಗಿಕೊಂಡಿರುವ ಮೇಬಲ್ ಫೆರ್ನಾಂಡಿಸ್ ಸಾವಿರಾರು ವಿದ್ಯಾರ್ಥಿಗಳನ್ನು ಸಮಾಜಕ್ಕೆ ಅರ್ಪಿಸಿದ್ದಾರೆ. ಜನಾನುರಾಯಿಯಾಗಿ ಗುರುತಿಸಿಕೊಂಡಿರುವ ಇವರಿಗೆ ಅರ್ಹವಾಗಿಯೇ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರಕಿದೆ.
ಪ್ರಸ್ತುತ ಕಳೆದ ಎರಡು ವರ್ಷಗಳಿಂದ ಕೋಟೆ ಬಾಗಿಲಿನ ಉರ್ದು ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಹಿಂದೆ 15 ವರ್ಷಗಳ ಕಾಲ ಬೋರುಗುಡ್ಡೆ ಶಾಲೆಯಲ್ಲಿ, 7 ವರ್ಷಗಳ ಕಾಲ ಪುಚ್ಚಮೊಗರು ಶಾಲೆಯಲ್ಲಿ, 6 ವರ್ಷಗಳ ಕಾಲ ಹೆಗ್ಡೆಬೈಲ್ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ತಮ್ಮ ಸೇವಾ ಅವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿದಕ್ಕಾಗಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.