ಆ ಭಾಗ್ಯ, ಈ ಭಾಗ್ಯ ಮೊದಲು ಕಟ್ಟಡ ಭಾಗ್ಯ ಕೊಡಲಿ..ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡದಿರಿ..
ವೇದಿಕೆ ಸಿಕ್ಕರೆ ಸಾಕು; ರಾಜಕಾರಣಿಗಳು ಸರಕಾರಿ ಶಾಲೆಯ ಬಗ್ಗೆ ಉದ್ದುದ್ದದ ಭಾಷಣ ಬಿಗಿಯುತ್ತಾರೆ. ನಾವು ಕೂಡ ಸರಕಾರಿ ಶಾಲೆಯಲ್ಲಿ ಕಲಿತದ್ದು ಎಂದು ಪುಂಗಿ ಊದುತ್ತಾರೆ. ಆದರೆ ಅದೇ ರಾಜಕಾರಣಿಗಳು ಶಾಸಕ, ಮಂತ್ರಿಯಾದರೂ ಅವರು ಕಲಿತ ಶಾಲೆಗೆ ಮಾಡಿದ್ದು ಯಾವುದೇ ಮಣ್ಣಾಂಗಟ್ಟಿ ಇಲ್ಲ. ಪ್ರತಿ ಚುನಾವಣೆ ಸಂದರ್ಭ ದೊಡ್ಡ ದೊಡ್ಡ ರಾಜಕಾರಣಿಗಳು ತಮ್ಮ ಬೂತಿಗೆ ಓಟು ಹಾಕಲು ಬಂದಾಗ ಅಲ್ಲಿನ ಸರಕಾರಿ ಶಾಲೆಯ ಅಸಲಿಯತ್ತು ದರ್ಶನವಾಗುತ್ತದೆ. ಸರಕಾರ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಿ ಎಂದು ಡಂಗುರ ಸಾರುತ್ತದೆ. ಆದರೆ ಸರಕಾರಿ ಶಾಲೆಯ ಕಟ್ಟಡ ನೋಡಿದಾಗ ಎದೆ ಚುರ್ರೆನ್ನುತ್ತದೆ. ಇಂತಹ ಶಿಥಿಲಾವಸ್ಥೆ ಕಟ್ಟಡದಲ್ಲಿ ಬಡವರ ಮಕ್ಕಳು ಕಲಿಯಬೇಕೇ.? ಶಿಥಿಲಾವಸ್ಥೆಯ ಶಾಲಾ ಕಟ್ಟಡ ಬಿದ್ದು ಬಡವರ ಮಕ್ಕಳು ಸಾಯಲಿ ಎಂಬ ಉದ್ದೇಶ ನಿಮ್ಮದೇ.! ಆ ಭಾಗ್ಯ, ಈ ಭಾಗ್ಯ ಅನ್ನುವ ಸರಕಾರಗಳು ಒಂದು ಜುಜುಬಿ ಶಾಲಾ ಕಟ್ಟಡದ ಭಾಗ್ಯ ನೀಡಲು ಸಾಧ್ಯವಿಲ್ಲವೆಂದಾದರೆ ಇವರೆಂತಹ ಜನನಾಯಕರು. ಕಳೆದ ಅರುವತ್ತು ವರ್ಷಗಳಿಂದ ನಮ್ಮನ್ನಾಳಿದ ಜನಪ್ರತಿನಿಧಿಗಳು ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳಿಗೆ ಬೇಕಾಗುವಷ್ಟು ದುಡ್ಡು ಕೂಡಿಟ್ಟರೇ ವಿನಹಃ ತಮ್ಮ ಕ್ಷೇತ್ರದ ಸರಕಾರಿ ಶಾಲೆಗೆ ಒಂದು ಸುಸಜ್ಜಿತ ಕಟ್ಟಡ ನಿರ್ಮಿಸಲು ಸಾಧ್ಯವಾಗಿಲ್ಲ ಅನ್ನುವುದೇ ಬೇಸರದ ಸಂಗತಿ. ಎಎಲ್ಎ, ಎಂಎಲ್ಸಿ ಗಳ ಕಛೇರಿಗಳನ್ನು ವಿನಹಃ ಕಾರಣ ಖರ್ಚು ಮಾಡಿ ಎಷ್ಟು ಚೆನ್ನಾಗಿ ಇಟ್ಟುಕೊಳ್ಳುತ್ತೀರಿ. ನೀವು, ನಿಮ್ಮ ಮರಿ ಮಕ್ಕಳು ಬದುಕಬೇಕು, ಬಡವರ ಮಕ್ಕಳು, ಕಲಿಯಬಾರದು, ಉಧ್ದಾರವಾಗಬಾರದು.
ಕೆಲವು ದಿನಗಳ ಹಿಂದೆಯಷ್ಟೇ ಕಡಬ ತಾಲೂಕಿನ ಕುಂತೂರಿನ ಸರಕಾರಿ ಶಾಲೆಯ ಕಟ್ಟಡ ಕುಸಿದು ನಾಲ್ಕರಿಂದ ಐದು ಮಕ್ಕಳು ಗಂಭೀರ ಗಾಯಗೊಂಡಿದ್ದರು. ಮಕ್ಕಳು ಶಾಲೆಯಲ್ಲಿ ಇದ್ದ ಸಂದರ್ಭದಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸಿದ ಪರಿಣಾಮ ಶಾಲೆ ಕುಸಿದಿತ್ತು. ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ತೋರಿಸಿತ್ತು.
ಇದೀಗ ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೋಣೆಗಳ ಮೇಲ್ಛಾವಣಿ ಭಾರೀ ಮಳೆಗೆ ಕುಸಿದಿದೆ. ಆದಿತ್ಯವಾರ ರಾತ್ರಿ ಶಾಲಾ ಕಟ್ಟಡ ಕುಸಿದ ಪರಿಣಾಮ ಅದೃಷ್ಟವಶಾತ್ ಮಕ್ಕಳಿಗೆ ಯಾವುದೇ ಹಾನಿಯಾಗಲಿಲ್ಲ. ಒಂದು ವೇಳೆ ತರಗತಿ ನಡೆಯುತ್ತಿರುವ ಸಂದರ್ಭದಲ್ಲಿ ದುರ್ಘಟನೆ ನಡೆದಿದ್ದರೆ ಇದಕ್ಕೆ ಯಾರು ಹೊಣೆ?
ಕಾಶಿಪಟ್ನ ಸರಕಾರಿ ಶಾಲೆಗೆ ಬರೋಬ್ಬರಿ 75 ವರ್ಷಗಳು ಸಂದಿವೆ. ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದರೂ ಇಲ್ಲಿನ ಶಾಸಕರು ಕಟ್ಟಡ ದುರಸ್ತಿ ಬಗ್ಗೆ ಈವರೆಗೂ ಕ್ರಮ ಕೈಗೊಂಡಿಲ್ಲ. ಜಿಲ್ಲೆಯಲ್ಲಿ 50 ರಿಂದ 100 ವರ್ಷ ಹಳೆಯದಾದ ಕಟ್ಟಡ ಹೊಂದಿರುವ ಹಲವಾರು ಶಾಲೆಗಳು ಈಗಲೂ ಕಾರ್ಯನಿರ್ವಹಿಸುತ್ತಿದ್ದು, ಅಧಿಕಾರಿಗಳು ಕಟ್ಟಡಗಳು ಡೇಂಜರ್ ಜೋನ್ ನಲ್ಲಿ ಇದೆಯೆಂದು ಜನಪ್ರತಿನಿಧಿಗಳು, ಸರಕಾರಕ್ಕೆ ಅಂಕಿಅಂಶ ನೀಡಿದರೂ ಸಂಬಂಧಪಟ್ಟವರ ನಿರ್ಲಕ್ಷ್ಯ ದಿಂದ ಡೇಂಜರ್ ಜೋನ್ ಕಟ್ಟಡದಲ್ಲೇ ಮಕ್ಕಳಿಗೆ ಪಾಠ ಮಾಡುವ ಅನಿವಾರ್ಯತೆ ಇದೆ. ಇಲ್ಲಿ ಏನಾದರೂ ಅನಾಹುತ ನಡೆದರೆ ಯಾರು ಹೊಣೆ? ಮಕ್ಕಳ ಭವಿಷ್ಯದ ಗತಿಯೇನು?
ಕಾಶಿಪಟ್ನ ಸರಕಾರಿ ಶಾಲೆ 1951 ರಲ್ಲಿ ಸ್ಥಾಪನೆಯಾಗಿದ್ದು, 75 ವರ್ಷಗಳನ್ನು ಪೂರೈಸಿದೆ. ಈ ವರ್ಷದಿಂದ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ಸರಕಾರ ಆದೇಶಿಸಿರುವುದರಿಂದ ಮಕ್ಕಳ ದಾಖಲಾತಿ ಸಂಖ್ಯೆಯಲ್ಲಿ ಗಣನೀಯವಾಗಿ ಏರಿದೆ. ಈ ಶಾಲೆಯಲ್ಲಿ 162 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ಅನುಮತಿ ಏನೋ ನೀಡಿದೆ, ಆದರೆ ಶಾಲಾ ಕಟ್ಟಡದ ದುರಸ್ತಿಗೆ ಮುಂದಾಗದೆ ಇರುವುದರಿಂದ ಶಾಲಾ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಮೊನ್ನೆ ಆದಿತ್ಯವಾರ ಶಾಲೆಗೆ ರಜೆ ಇದ್ದುದರಿಂದ ಶಾಲಾ ಕಟ್ಟಡ ಕುಸಿದು ಸಂಭಾವ್ಯ ಅನಾಹುತ ತಪ್ಪಿದೆ.
ಶಾಲಾ ಕಟ್ಟಡ ಕುಸಿತದಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗಿದ್ದು, ತಾತ್ಕಾಲಿಕವಾಗಿ ಅಲ್ಲಿಯೇ ಬೇರೆ ಕಡೆಯಲ್ಲಿ ಪಾಠ ಮಾಡುವ ಅನಿವಾರ್ಯತೆ ಉಂಟಾಗಿದೆ. ಕುಸಿದ ತರಗತಿಗಳ ದುರಸ್ತಿ ಹಾಗೂ 4 ನಾಲ್ಕು ಹೊಸ ತರಗತಿ ಕೋಣೆಗಳ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವಂತೆ ಶಾಲಾ ಅಧ್ಯಕ್ಷರು, ಮುಖ್ಯೋಪಾಧ್ಯಾಯರು ಶಾಸಕ ಹರೀಶ್ ಪೂಂಜಾ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಇದು ಕೇವಲ ಬೆಳ್ತಂಗಡಿ ಕಾಶಿಪಟ್ನ ಸರಕಾರಿ ಶಾಲೆಯೊಂದರ ಕಥೆಯಲ್ಲ. ಜಿಲ್ಲೆಯಾದ್ಯಂತ ನೂರಾರು ಇಂತಹ ಅಪಾಯವನ್ನು ಆಹ್ವಾನಿಸುವ ಶಾಲಾ ಕಟ್ಟಡವಿದೆ. ಏನಾದರೂ ಅನಾಹುತ ನಡೆದು ಜೀವಹಾನಿಯಾದರೆ ದೊಡ್ಡ ಸುದ್ದಿಯಾಗುತ್ತದೆ. ರಾಜಕಾರಣಿಗಳ ದಂಡು ಕ್ಯಾಮರಾ ಹಿಡಿದು ಹಿಂಬಾಲಕರೊಂದಿಗೆ ಭೇಟಿ ನೀಡುತ್ತಾರೆ. ಇವರಿಗೆ ಅನಾಹುತ ನಡೆದ ಮೇಲಷ್ಟೇ ಬುದ್ಧಿ ಬರುವುದು. ಜಿಲ್ಲಾಧಿಕಾರಿಗಳು ಶಾಲೆಗೆ ರಜೆ ಕೊಡುವುದಷ್ಟೇ ತಮ್ಮ ಕೆಲಸವಲ್ಲ. ಇಂತಹ ಅಪಾಯಕಾರಿ ಕಟ್ಟಡಗಳ ನೀಲನಕ್ಷೆ ತಯಾರಿಸಿ ಸರಕಾರಕ್ಕೆ ವರದಿ ಸಲ್ಲಿಸಬೇಕು. ಇನ್ನು ಜನಪ್ರತಿನಿಧಿಗಳು, ಸರಕಾರಗಳು ಹಗರಣಗಳ ಮೇಲೆ ಹಗರಣ ನಡೆಸುವುದಕ್ಕಷ್ಟೇ ನಿಮ್ಮನ್ನು ಆಯ್ಕೆ ಮಾಡಿದ್ದಲ್ಲ. ಕನಿಷ್ಠ ಪಕ್ಷ ತಮ್ಮ ವ್ಯಾಪ್ತಿಯ ಶಾಲಾ ಕಟ್ಟಡವನ್ನಾದರೂ ದುರಸ್ತಿ ಮಾಡುವ ಕೆಲಸ ಮಾಡಲಿ. ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡದಿರಿ.