ಹಿಮಾಚಲ ಪ್ರದೇಶದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮಾದರಿ ಮಸೂದೆಯೊಂದನ್ನು ಅಲ್ಲಿನ ವಿಧಾನಸಭೆಯಲ್ಲಿ ಅಂಗೀಕರಿಸಿದೆ. ಒಂದು ಪಕ್ಷದಿಂದ ಗೆದ್ದು ಮತ್ತೊಂದು ಪಕ್ಷಕ್ಕೆ ಜಿಗಿಯುವ ಶಾಸಕರು ಇನ್ನು ಮುಂದೆ ಪಿಂಚಣಿಯನ್ನು ಪಡೆಯುವುದಿಲ್ಲ. ಹೀಗಾಗಿ ಪಕ್ಷಗಳಿಗೆ ಪಕ್ಷಾಂತರ ಮಾಡುವ ಹಿಮಾಚಲ ಪ್ರದೇಶದ ಶಾಸಕರಿಗೆ ಪಿಂಚಣಿ ಸಿಗುವುದಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡ ಶಾಸಕರಿಗೆ ಇದು ಅನ್ವಯಿಸುತ್ತದೆ ಎಂದು ಹೊಸ ಕಾನೂನು ಹೇಳುತ್ತದೆ. ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಹೋದವರು ಹಾಗೂ ಇನ್ನು ಮುಂದೆ ಹೋಗುವವರಿಗೆ ಪಾಠ ಕಲಿಸಲೆಂದೇ ಅಲ್ಲಿನ ಕಾಂಗ್ರೆಸ್ ಹೊಸ ಮಸೂದೆಯನ್ನು ಜಾರಿ ಮಾಡಿದೆ.
ಹಿಮಾಚಲ ಪ್ರದೇಶ ಸರ್ಕಾರವು ಅಭೂತಪೂರ್ವ ಕ್ರಮವೊಂದರಲ್ಲಿ ಪಕ್ಷಾಂತರಿಗಳಿಗೆ ಪಿಂಚಣಿ ನಿಲ್ಲಿಸಲು ಹೊಸ ಮಸೂದೆಯನ್ನು ಇಂದು ವಿಧಾನಸಭೆಯಲ್ಲಿ ಅಂಗೀಕರಿಸಿತು. ಪಕ್ಷಾಂತರ ಮಾಡುವ ಶಾಸಕರ ಪಿಂಚಣಿಯನ್ನು ನಿಲ್ಲಿಸುವ ಮಸೂದೆಯನ್ನು ನಿನ್ನೆ ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು. ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ಹಿಮಾಚಲ ಪ್ರದೇಶ ವಿಧಾನಸಭೆ (ಸದಸ್ಯರ ಭತ್ಯೆ ಮತ್ತು ಪಿಂಚಣಿ) ತಿದ್ದುಪಡಿ ಮಸೂದೆ 2024 ಎಂಬ ಮಸೂದೆಯನ್ನು ಮಂಡಿಸಿದ್ದರು. “ಸಂವಿಧಾನದ 10 ನೇ ಶೆಡ್ಯೂಲ್ ಅಡಿಯಲ್ಲಿ ಯಾವುದೇ ಸಮಯದಲ್ಲಿ ಅನರ್ಹಗೊಂಡ ಶಾಸಕರು ಕಾಯ್ದೆಯಡಿ ಪಿಂಚಣಿ ಪಡೆಯಲು ಅರ್ಹನಾಗಿರುವುದಿಲ್ಲ” ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.