SSLC ನಕಲಿ ಅಂಕಪಟ್ಟಿ ಸಲ್ಲಿಸಿ, ರಾಜ್ಯದ ಆರೋಗ್ಯ ಇಲಾಖೆಯಲ್ಲಿ ನೌಕರಿ ಗಿಟ್ಟಿಸಿದ ಸಾವಿರಾರು ಅಭ್ಯರ್ಥಿಗಳು

ರಾಜ್ಯ

ನಕಲಿ ಅಂಕಪಟ್ಟಿ ಸಲ್ಲಿಸಿ ಸಾವಿರಾರು ಅಭ್ಯರ್ಥಿಗಳು ರಾಜ್ಯ ಆರೋಗ್ಯ ಇಲಾಖೆಯಲ್ಲಿ ಡಿ ಗ್ರೂಪ್ ನೌಕರಿ ಗಿಟ್ಟಿಸಿಕೊಂಡಿರುವುದು ಇದೀಗ ಬಯಲಾಗಿದೆ. ನಕಲಿ ಅಂಕಪಟ್ಟಿ ಸಲ್ಲಿಸಿ ಜಲಸಂಪನ್ಮೂಲ ಇಲಾಖೆಯ ಬ್ಯಾಕ್​ಲಾಗ್ ನೌಕರಿ ಗಿಟ್ಟಿಸಿದ ಪ್ರಕರಣ ಇನ್ನೂ ಜೀವಂತ ಇರುವಾಗಲೇ ಮತ್ತೊಂದು ಇಲಾಖೆಯಲ್ಲಿ ಇದೇ ರೀತಿ ನಕಲಿ ನಡೆದಿರುವುದು ಪ್ರತಿಭಾವಂತ ಮತ್ತು ಅರ್ಹ ವ್ಯಕ್ತಿಗಳಿಗೆ ಆಘಾತ ಉಂಟು ಮಾಡಿದೆ. ರಾಜ್ಯದಲ್ಲಿ ನಡೆದ ಪಿಎಸ್​ಐ, ಕೆಇಐ, ಕೆಪಿಟಿಸಿಎಲ್ ನೇಮಕ ಪರೀಕ್ಷಾ ಅಕ್ರಮಗಳಿಂದ ಪ್ರತಿಭಾವಂತರಿಗೆ ಪರೀಕ್ಷೆ ಮತ್ತು ನೇಮಕಾತಿ ಮೇಲಿನ ವಿಶ್ವಾಸಕ್ಕೆ ಬಲವಾದ ಪೆಟ್ಟು ಬಿದ್ದಿದೆ.

ಆರೋಗ್ಯ ಇಲಾಖೆಯಲ್ಲಿ ಖಾಲಿ ಇದ್ದ 1,582 ಡಿ ಗ್ರೂಪ್ ಹುದ್ದೆಗಳ ಭರ್ತಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ 2015 ರ ಮಾರ್ಚ್​ನಲ್ಲಿ ಅಧಿಸೂಚನೆ ಹೊರಡಿಸಿತ್ತು. ವಿದ್ಯಾರ್ಹತೆ 10ನೇ ತರಗತಿ ನಿಗದಿಪಡಿಸಲಾತ್ತು. ಆಯ್ಕೆಯಾದವರಿಗೆ ನವೆಂಬರ್​ನಲ್ಲಿ ಕೌನ್ಸೆಲಿಂಗ್ ಮೂಲಕ ನೇಮಕಾತಿ ಆದೇಶ ನೀಡಲಾಗಿತ್ತು. ನೇಮಕಗೊಂಡ ನೌಕರರು SSLC ನಕಲಿ ಅಂಕಪಟ್ಟಿ ಸಲ್ಲಿಸಿ ವಿಶೇಷ ನೇಮಕಾತಿ ಹೊಂದಿದ್ದಾರೆ ಎಂಬ ದೂರುಗಳು ಬಂದಿದ್ದವು. ಈ ಸಂಬಂಧ ಅಂಕಪಟ್ಟಿಯ ನೈಜತೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ ಆರೋಗ್ಯ ಇಲಾಖೆ ಸೂಚಿಸಿದೆ.