ಸರಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿವೆಯೇ ನಿಗಮ, ಮಂಡಳಿಗಳು.?
ಆಡಳಿತದಲ್ಲಿ ಕೇಂದ್ರೀಕರಣವಿರಬಾರದು, ವಿಕೇಂದ್ರಿಕರಣವಿರಬೇಕು ಎಂಬ ಉದ್ದೇಶದಿಂದ ನಿಗಮ ಮಂಡಳಿಗಳನ್ನು ರಚಿಸಲಾಗಿದೆ. ಆದರೆ ಈ ನಿಗಮ ಮಂಡಳಿಗಳೇ ಗಜಗಾತ್ರದಂತಾಗಿದ್ದು, ಇವುಗಳನ್ನು ಸಾಕುವುದೇ ಕಷ್ಟಕರ ಎಂಬ ಸ್ಥಿತಿ ಉದ್ಭವವಾಗಿದೆ. ಅಂದರೆ ಸದ್ಯ ನಿಗಮ, ಮಂಡಳಿಗಳ ಸಂಖ್ಯೆಯು ನೂರರ ಸನಿಹಕ್ಕೆ ಬಂದು ನಿಂತಿವೆ. ಅಧ್ಯಕ್ಷ, ಉಪಾಧ್ಯಕ್ಷ ಸದಸ್ಯರಲ್ಲದೆ, ಅಧಿಕಾರಿ, ಸಿಬಂದಿಯಿಂದ ತುಂಬಿ ತುಳುಕುವ ನಿಗಮ, ಮಂಡಳಿಗಳು ಆಡಳಿತಾತ್ಮಕ ಅನುಕೂಲಕ್ಕಿಂತ ಆಡಳಿತಾತ್ಮಕ ವೆಚ್ಚ ಹೆಚ್ಚಿಸುವ ಬಿಳಿಯಾನೆ ಎನಿಸಿಬಿಟ್ಟಿವೆ.
ರಾಜ್ಯದಲ್ಲಿ ಜಾತಿ ನಿಗಮಗಳ ಸಂಖ್ಯೆ ಹೆಚ್ಚಾಗಿದ್ದು, ಇದು ಆಡಳಿತಾತ್ಮಕ ವೆಚ್ಚದ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆ ನಿಗಮಗಳನ್ನು ವಿಲೀನ ಮಾಡಲು ಸರ್ಕಾರ ಚಿಂತನೆ ನಡೆಸಿದೆ. 23 ಕ್ಕೂ ಹೆಚ್ಚು ನಿಗಮಗಳು ನಿರ್ದಿಷ್ಟ ಸಮುದಾಯದ ಹಿತಾಸಕ್ತಿಗೆ ಬದಲಿಗೆ, ಸಾರ್ವಜನಿಕ ಬೊಕ್ಕಸಕ್ಕೆ ಹೊರೆಯಾಗಿ ಉಳಿದಿವೆ ಎನ್ನಲಾಗಿದೆ. ದೇವರಾಜ ಅರಸು, ಅಂಬೇಡ್ಕರ್, ಎಸ್‌ಟಿ ನಿಗಮಗಳಲ್ಲಿ ಸೇರಿಸಲು ಸರ್ಕಾರ ಚಿಂತನೆ. ಜನ್ಮ ದಿನಾಚರಣೆಗೆ ಸೀಮಿತವಾದ ಜಾತಿ ನಿಗಮಗಳಿಂದ ಆಡಳಿತಾತ್ಮಕ ವೆಚ್ಚದ ತಲೆಬಿಸಿ. ಸಮುದಾಯಗಳಿಗೆ ನಿರೀಕ್ಷೆಯಂತೆ ಯಾವ ಲಾಭವೂ ಆಗಿಲ್ಲಎಂಬ ಕಾರಣಕ್ಕೆ ಮರು ವಿಲೀನ ಸೂಕ್ತ ಎಂಬ ತೀರ್ಮಾನ.
ಚುನಾವಣೆ ರಾಜಕೀಯಕ್ಕಾಗಿ ಮತ ಕ್ರೋಢೀಕರಣ ಲೆಕ್ಕಾಚಾರದಲ್ಲಿ ರಾಜ್ಯದಲ್ಲಿ ಜಾತಿ, ಉಪ ಜಾತಿಗೊಂದರಂತೆ ರಚನೆಯಾಗಿರುವ ನಾನಾ ಅಭಿವೃದ್ಧಿ ನಿಗಮಗಳ ಮರು ವಿಲೀನಕ್ಕೆ ಸರ್ಕಾರ ಮುಂದಾಗಿದೆ. ಫಲಾನುಭವಿಗಳ ಆಯ್ಕೆ ಸಮಸ್ಯೆಯಿಂದ ಬಹುತೇಕ ನಿಗಮಗಳಲ್ಲಿ ಅನುದಾನ ವೆಚ್ಚವಾಗದೆ ಉಳಿಯುತ್ತಿದ್ದು, ಸಂಬಂಧಿತ ಸಮುದಾಯಗಳಿಗೆ ನಿರೀಕ್ಷೆಯಂತೆ ಯಾವ ಲಾಭವೂ ಆಗಿಲ್ಲಎಂಬ ಕಾರಣಕ್ಕೆ ಮರು ವಿಲೀನ ಸೂಕ್ತ ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿದೆ.
ಕ್ಷೇತ್ರಕ್ಕೆ ಒಂದಿಬ್ಬರು ಫಲಾನುಭವಿಗಳ ಆಯ್ಕೆಗೆ ಸೀಮಿತವಾದ ಕಾರಣ ಶಾಸಕರು ಆಯ್ಕೆ ಪಟ್ಟಿ ನೀಡುತ್ತಿಲ್ಲ. ಇದರಿಂದಾಗಿ ನಿಗಮಗಳ ಅನುದಾನ ವೆಚ್ಚವಾಗುತ್ತಿಲ್ಲ. ವ್ಯವಸ್ಥಾಪಕ ನಿರ್ದೇಶಕರು, ಸಿಬ್ಬಂದಿ ವರ್ಗ, ಕಚೇರಿ ನಿರ್ವಹಣೆ ವೆಚ್ಚಕ್ಕಷ್ಟೇ ಬಹುತೇಕ ನಿಗಮಗಳ ಸಾರ್ಥಕತೆ ಸೀಮಿತವಾಗಿದೆ. 23ಕ್ಕೂ ಹೆಚ್ಚು ನಿಗಮಗಳು ನಿರ್ದಿಷ್ಟ ಸಮುದಾಯದ ಹಿತಾಸಕ್ತಿಗೆ ಪೂರಕವಾಗುವ ಬದಲಿಗೆ, ಸಾರ್ವಜನಿಕ ಬೊಕ್ಕಸಕ್ಕೆ ಹೊರೆಯಾಗಿ ಉಳಿದಿವೆ ಎಂಬ ಹಣಕಾಸು ಇಲಾಖೆ ಆಕ್ಷೇಪದ ಹಿನ್ನೆಲೆಯಲ್ಲಿಸರ್ಕಾರ ಮರು ವಿಲೀನದ ಪ್ರಯತ್ನ ಆರಂಭಿಸಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ 12 ನಿಗಮಗಳನ್ನು ಡಿ.ದೇವರಾಜ ಅರಸು ನಿಗಮದಲ್ಲಿಸೇರಿಸುವುದು, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ 8 ನಿಗಮಗಳನ್ನು ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ವಿಲೀನಗೊಳಿಸುವುದು ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲೂ ಕೇಂದ್ರೀಕೃತ ವ್ಯವಸ್ಥೆ ಜಾರಿ ಮಾಡಲು ಪ್ರಸ್ತಾಪಿಸಲಾಗಿದೆ. ಈ ನಡುವೆ ಸರ್ಕಾರ ಸೌಲಭ್ಯ ಪಡೆಯುವುದು ಮತ್ತು ಸಾಲ ಮರು ಪಾವತಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿರುವ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ಮತ್ತು ಬ್ರಾಹ್ಮಣ ಅಭಿವೃದ್ಧಿ ನಿಗಮಗಳನ್ನು ಕಂದಾಯ ಇಲಾಖೆ ವ್ಯಾಪ್ತಿಯಲ್ಲೇ ಮುಂದುವರಿಸುವ ಲೆಕ್ಕಾಚಾರ ನಡೆದಿದೆ. ಸರ್ಕಾರ ಆದೇಶವಾದರೂ ಇನ್ನೂ ರಚನೆಯಾಗದ ಪಿಂಜಾರ ಅಭಿವೃದ್ಧಿ ನಿಗಮ, ಕಾಡುಗೊಲ್ಲ ಅಭಿವೃದ್ಧಿ ನಿಗಮ ಸೇರಿ ಇನ್ನೂ ಕೆಲವು ಸಮುದಾಯಗಳ ನಿಗಮಗಳ ರಚನೆ ಪ್ರಸ್ತಾವನೆಯನ್ನು ಕೈಬಿಡುವ ಗಂಭೀರ ಚಿಂತನೆಯೂ ನಡೆದಿದೆ ಎನ್ನಲಾಗಿದೆ.
ಈ ನಡುವೆ ಇಂತಹ ತೀರ್ಮಾನವು ನಾನಾ ಸಮುದಾಯಗಳ ವಿರೋಧಕ್ಕೂ ಕಾರಣವಾಗಬಹುದು ಎಂಬ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮರು ವಿಲೀನದ ಹಾದಿ ತುಳಿಯುವುದೋ ಅಥವಾ ಆಡಳಿತ ಸುಧಾರಣಾ ಆಯೋಗದ ವರದಿ ವರೆಗೂ ಕಾದು ನೋಡುವುದೋ ಎಂಬ ಗೊಂದಲವಿದೆ. ಪ್ರತ್ಯೇಕ ನಿಗಮ, ಅದಕ್ಕೊಬ್ಬ ಎಂಡಿ, ಸಿಬ್ಬಂದಿ ಏಕೆ ಬೇಕು ಎಂಬ ಪ್ರಶ್ನೆ ಎದ್ದಿದೆ. ನಿಗಮಗಳಿಂದ ಅನಗತ್ಯ ವೆಚ್ಚವೇ ಹೊರತು ಯಾವುದೇ ಪ್ರಯೋಜನ ಹಾಗೂ ಸಮುದಾಯದ ಹಿತಾಸಕ್ತಿ ಆಗುತ್ತಿಲ್ಲವೆಂದು ಹಣಕಾಸು ಇಲಾಖೆ ಖಚಿತ ಅಭಿಪ್ರಾಯ ನೀಡಿದೆ.