ಟಿ.ವಿ ವಾಲ್ಯೂಮ್ ವಿಚಾರದಲ್ಲಿ ಮಾತಿನ ಚಕಮಕಿ. ಆಕ್ರೋಶಗೊಂಡ ತಂದೆಯಿಂದ ಮಗನ ಮೇಲೆ ಕತ್ತಿಯಿಂದ ಹಲ್ಲೆ.

ಕರಾವಳಿ

ಪುಣಚ ಗ್ರಾಮದ ಕೊಲ್ಲಪದವು ನಿವಾಸಿ ಬಾಬು ಕೆ.ಎಂಬವರ ಮಗ ಅಶೋಕ್ ಕೆ (33) ಅವರು ಈ ಕುರಿತು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಅಶೋಕ್ ಮತ್ತು ಆತನ ತಂದೆ ಮಧ್ಯೆ ಮನೆಯಲ್ಲಿ ಆಗಾಗ ಜಗಳವಾಗುತ್ತಿದ್ದು, ಸೆ.3ರಂದು ರಾತ್ರಿ ಅಶೋಕ್ ಮನೆಯಲ್ಲಿರುವಾಗ ತಂದೆ ಟಿವಿ ನೋಡುತ್ತಿದ್ದರು.

ಟಿ.ವಿ ವಾಲ್ಯೂಮ್ ಕಡಿಮೆ ಮಾಡುವಂತೆ ಮಗ ಅಶೋಕ್ ಹೇಳಿದ್ದರಿಂದ ತಂದೆ ಆಕ್ರೋಶಗೊಂಡು ಶಬ್ದ ಕಡಿಮೆ ಮಾಡುವುದಿಲ್ಲ ಎಂದು ಹೇಳಿದ್ಜಲ್ಲದೇ “ನೀನು ಕೆಲಸಕ್ಕೂ ಹೋಗದೆ ಅಲ್ಲಿ ಇಲ್ಲಿ ಸುತ್ತಾಡಿ ನನ್ನ ಕುಟುಂಬದ ಮಾನ-ಮರ್ಯಾದೆ ತೆಗೆಯುತ್ತೀಯಾ. ಈಗ ನನಗೆ ಬುದ್ಧಿ ಹೇಳಲು ಬಂದಿಯಾ ಎಂದು ಪ್ರಶ್ನಿಸುತ್ತಾ ನಿನ್ನನ್ನು ಕತ್ತಿಯಿಂದ ಕಡಿದು ಕೊಲ್ಲುವುದಾಗಿ ಹೇಳಿ ಮನೆಯ ಜಗಲಿಯಲ್ಲಿದ್ದ ಕತ್ತಿಯನ್ನು ತೆಗೆದುಕೊಂಡು ಬಂದು ಕುತ್ತಿಗೆಗೆ ಹಾಗೂ ಎಡಭುಜಕ್ಕೆ ಬೀಸಿದ್ದರೆನ್ನಲಾಗಿದೆ.

ಆ ಸಂದರ್ಭ ಅಶೋಕ್ ತಪ್ಪಿಸಿಕೊಂಡು ಒಳಗೆ ಹೋಗಿದ್ದು, ಹಲ್ಲೆಯಿಂದಾಗಿ ನನ್ನ ಎಡಭುಜಕ್ಕೆ ಹಾಗೂ ಕುತ್ತಿಗೆ, ಎಡಬದಿಯ ಹಿಂಭಾಗಕ್ಕೆ ಗಾಯವಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ವಿಟ್ಲ ಠಾಣೆಯಲ್ಲಿ ಕಲಂ 352,118(1),109 (1) BNS ಆಕ್ಟ್ 2024ಯಂತೆ ಪ್ರಕರಣ (ಅ.ಕ್ರ.139/2024) ದಾಖಲಾಗಿದೆ.