ಉಡುಪಿ: ಗ್ರಾಹಕ ಸ್ಥಿರಾಸ್ತಿ ಅಡಮಾನ ಸಾಲ ಪಡೆದು ಸುಸ್ತಿದಾರನಾದಾಗ, ಅದೇ ಸಂಸ್ಥೆಯಲ್ಲಿ ಅಡಮಾನವಿರಿಸಿದ ಬಂಗಾರದ ಸಾಲ ಸಂದಾಯ ಮಾಡಿದರೂ, ಅಡವಿರಿಸಿದ ಬಂಗಾರ ಹಿಂದೆ ಪಡೆಯಲು ಅರ್ಹನಲ್ಲ ಎಂದು ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ತರ ತೀರ್ಪು ನೀಡಿದೆ. ಉಡುಪಿಯ ವಿವಿಧೋದ್ದೇಶ ಸಹಕಾರ ಸಂಘದ ಕೇಂದ್ರ ಕಚೇರಿಯ ಶಾಖೆಯಲ್ಲಿ ಸಂಸ್ಥೆಯ ಗ್ರಾಹಕರೊಬ್ಬರು 25 ಲಕ್ಷ ರೂಪಾಯಿ ಆಸ್ತಿ ಸಾಲ ಪಡೆದಿದ್ದರು. ಈ ಸಾಲವು ಸುಸ್ತಿಯಾಗಿ, ಸಂಸ್ಥೆಯು ಸಾಲ ವಸೂಲಾತಿಗಾಗಿ ಕ್ರಮ ಕೈಗೊಂಡಿತ್ತು. ಈ ಬಗ್ಗೆ ಸಹಕಾರ ಸಂಘಗಳ ಉಪನಿಬಂಧಕರ ನ್ಯಾಯಾಲಯದಲ್ಲಿ ಅಸಲು ಮತ್ತು ಬಡ್ಡಿ ಪಾವತಿಸಲು ಸಾಲಗಾರನ ವಿರುದ್ಧ ಆದೇಶವಾಗಿದ್ದು, ಈ ಪ್ರಕರಣವು ಅಮಲ್ಜಾರಿ ಪ್ರಕ್ರಿಯೆಯಲ್ಲಿದೆ.
ಇದೇ ಗ್ರಾಹಕರು ಇದೇ ಸಹಕಾರಿ ಸಂಘದಲ್ಲಿ ಸರಿಸುಮಾರು 630 ಗ್ರಾಂ. ತೂಕದ ಒಡವೆಗಳನ್ನು ಅಡಮಾನವಿರಿಸಿ ಸರಿ ಸುಮಾರು 16 ಲಕ್ಷ ರೂ. ಸಾಲ ಪಡೆದು, ಸಾಲವನ್ನು ಚುಕ್ತ ಮಾಡಿ, ಅಡವಿರಿಸಿದ ಬಂಗಾರವನ್ನು ತನಗೆ ನೀಡಬೇಕೆಂದು ಕೋರಿಕೊಂಡರು. ಆದರೆ ಸಂಸ್ಥೆಯು ಆಸ್ತಿ ಅಡಮಾನ ಸಾಲ ಸಂಪೂರ್ಣ ಸಂದಾಯ ಮಾಡಿದರೆ ಮಾತ್ರ ಅಡವಿರಿಸಿದ ಬಂಗಾರವನ್ನು ಹಿಂಪಡೆಯಲು ಅವಕಾಶವಿದೆ ಎಂದು ಹೇಳಿ ಗ್ರಾಹಕನ ಬೇಡಿಕೆಯನ್ನು ತಿರಸ್ಕರಿಸಿತ್ತು. ಈ ಬಗ್ಗೆ ಗ್ರಾಹಕನು ಉಡುಪಿಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಅಧ್ಯಕ್ಷರ ಮೇಲೆ ದೂರು ದಾಖಲಿಸಿ, ತಾನು ಅಡಮಾನವಿಸಿರಿದ ಬಂಗಾರವನ್ನು ಹಿಂದಿರುಗಿಸಬೇಕು ಮತ್ತು ತನಗೆ 3 ಲಕ್ಷ ರೂ. ನಷ್ಟ ಪರಿಹಾರ ಹಾಗೂ 10,000 ರೂಪಾಯಿ ನೋಟಿಸಿನ ಖರ್ಚು ನೀಡಬೇಕೆಂದು ಕೇಳಿಕೊಂಡಿದ್ದರು.
ವಾದಿ- ಪ್ರತಿವಾದಿಗಳ ವಾದಗಳನ್ನು ಆಲಿಸಿದ ಆಯೋಗವು ದೂರುದಾರರು ಅಡವಿರಿಸಿದ ಚಿನ್ನಾಭರಣವನ್ನು ಸಂಸ್ಥೆಯಿಂದ ಹಿಂದೆ ಪಡೆಯಲು ಅರ್ಹರಲ್ಲವೆಂದು ಆ ದೂರನ್ನು ವಜಾಗೊಳಿಸಿ ಆದೇಶ ನೀಡಿದೆ. ಭಾರತೀಯ ಕರಾರು ಅಧಿನಿಯಮ ಕಲಂ 171ರಂತೆ ಯಾವುದೇ ಹಣಕಾಸು ಸಂಸ್ಥೆಯಲ್ಲಿ ಗ್ರಾಹಕನು ಸಾಲ ಪಡೆದು ಸುಸ್ತಿದಾರನಾದರೆ ಅಂತಹ ವ್ಯಕ್ತಿಗೆ ಸೇರಿದ ಚರ ಸೊತ್ತುಗಳನ್ನು ಕಾನೂನು ರೀತಿಯಲ್ಲಿ ಮುಟ್ಟಗೋಲು ಹಾಕಲು ಸಾಲ ನೀಡಿದ ಸಂಸ್ಥೆಗೆ ಅಧಿಕಾರವಿದೆ.