2028 ಕ್ಕೆ ದ.ಕ ಜಿಲ್ಲೆಯಲ್ಲಿ 10 ವಿಧಾನಸಭಾ ಕ್ಷೇತ್ರಗಳು.!

ರಾಜ್ಯ

ಮೂಲ್ಕಿ, ಕಡಬ ಹೊಸ ವಿಧಾನಸಭಾ ಕ್ಷೇತ್ರಗಳು.?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 8 ವಿಧಾನಸಭಾ ಕ್ಷೇತ್ರಗಳಿದ್ದು, 2028 ರ ವಿಧಾನಸಭಾ ಚುನಾವಣೆ ವೇಳೆಗೆ ಈ ಸಂಖ್ಯೆ 10 ಕ್ಕೇರಳಿದೆ ಎಂಬ ಮಾಹಿತಿಯೊಂದು ಅಧಿಕಾರಿ ವಲಯಗಳಲ್ಲಿ ಹರಿದಾಡುತ್ತಿದ್ದು, ‌ಶಾಸಕರ ಎದೆಗಳಲ್ಲಿ ಢವ ಢವ ಉಂಟು ಮಾಡಿದೆ. ಮುಂದಿನ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಸಂದರ್ಭ ಬಹುತೇಕ ಕ್ಷೇತ್ರಗಳು ಪುನರ್ವಿಂಗಡನೆಯಾಗಲಿದ್ದು, ಹಲವು ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಹೊಸದಾಗಿ ಸೇರ್ಪಡೆಯಾಗಲಿದೆ. ಇದರ ಜೊತೆಗೆ ಮುಂದಿನ ವಿಧಾನಸಭಾ ಚುನಾವಣೆ ಹೊತ್ತಿಗೆ ಕ್ಷೇತ್ರ ಪುನರ್ ವಿಂಗಡಣೆ ಯಾಗಲಿದ್ದು, ಹಾಲಿ ಕ್ಷೇತ್ರಗಳಲಿದ್ದ ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಅದಲು ಬದಲಾಗುವ ಸಾಧ್ಯತೆ ಇದ್ದು, ಇದರ ಜೊತೆಗೆ ಎರಡು ಹೊಸ ಕ್ಷೇತ್ರಗಳು ಸೇರ್ಪಡೆಯಾಗಲಿದೆ ಅನ್ನುವ ಮಾಹಿತಿಗಳು ಹರಿದಾಡುತ್ತಿದೆ. ಬಲ್ಲ ಮೂಲಗಳ ಪ್ರಕಾರ ಈಗಾಗಲೇ ಅಸ್ತಿತ್ವದಲ್ಲಿರುವ ಮೂಲ್ಕಿ -ಮೂಡಬಿದ್ರೆ ಕ್ಷೇತ್ರ ಗಳಲ್ಲಿ ಮೂಲ್ಕಿ ಪ್ರತ್ಯೇಕ ಕ್ಷೇತ್ರವಾಗಲಿದ್ದು, ಇದರ ಜೊತೆಗೆ ಕಡಬ ಹೊಸ ವಿಧಾನಸಭಾ ಕ್ಷೇತ್ರವಾಗಲಿದೆ ಅನ್ನುವ ಮಾಹಿತಿಯೂ ಇದೆ.

ಈಗಾಗಲೇ ಜಿಲ್ಲೆಯಲ್ಲಿ ಉಳ್ಳಾಲ, ಮೂಲ್ಕಿ, ಕಡಬ ಹೊಸ ತಾಲೂಕಾಗಿ ಪರಿವರ್ತನೆಯಾಗಲಿದ್ದು, ಈಗಾಗಲೇ ಉಳ್ಳಾಲ ತಾಲೂಕು ಮಂಗಳೂರು ವಿಧಾನಸಭಾ ಕ್ಷೇತ್ರವಾಗಿ ಈ ಹಿಂದಿನಿಂದ ಚಾಲ್ತಿಯಲ್ಲಿದ್ದು, ಮೂಲ್ಕಿ, ಕಡಬ ಮುಂದಿನ ಚುನಾವಣೆ ಹೊತ್ತಿಗೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಲಿದೆ.

ಮೂಡಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ದೂರದ ಸೂರಿಂಜೆ, ಬಾಳ ಮುಂತಾದ ಪ್ರದೇಶಗಳು ಮೂಲ್ಕಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಸಾಧ್ಯತೆ ಇದೆ. ಕಿನ್ನಿಗೋಳಿ, ನಿಡ್ಡೋಡಿ ಯವರೆಗಿನ ಪ್ರದೇಶಗಳು ಕೂಡ ಮೂಲ್ಕಿ ವ್ಯಾಪ್ತಿಗೆ ಸೇರಲಿದೆ. ಇತ್ತ ವೇಣೂರು ಹೋಬಳಿ, ನಾರಾವಿ ಪ್ರದೇಶದ ಕೆಲವು ಗ್ರಾಮಗಳು, ಎಡಪದವು, ಕೈಕಂಬವರೆಗಿನ ಪ್ರದೇಶಗಳು ಕೂಡ ಮೂಡಬಿದಿರೆ ಕ್ಷೇತ್ರಕ್ಕೆ ಒಳಪಡಲಿದೆ ಎನ್ನಲಾಗುತ್ತಿದೆ.

ಇತ್ತ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ಗ್ರಾಮಗಳು ಮೂಡುಬಿದಿರೆ, ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಹಂಚಿ ಹೋದರೆ ಇತ್ತ ಜೋಕಟ್ಟೆ, ಬಜಪೆ, ಬೆಂಗರೆಯ ಕೆಲವು ಪ್ರದೇಶಗಳು ಕೂಡ ಮಂಗಳೂರು ಉತ್ತರ ವ್ಯಾಪ್ತಿಗೆ ಸೇರಲಿದೆ. ಗುರುಪುರ ವ್ಯಾಪ್ತಿಯ ಕೆಲವು ಗ್ರಾಮಗಳು ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಸಾಧ್ಯತೆ ಇದೆ.

ಬಂಟ್ವಾಳ, ಪುತ್ತೂರು ವಿಧಾನಸಭಾ ಕ್ಷೇತ್ರಗಳಲ್ಲಿದ್ದ ಕೆಲವು ಭಾಗಗಳು ಸೇರಿ ಪ್ರತ್ಯೇಕ ಕಡಬ ಕ್ಷೇತ್ರವಾಗಿ ಪುನರ್ ವಿಂಗಡಣೆ ಆಗಲಿದೆ. ಜನಸಂಖ್ಯೆ, ಜನರ ಅನುಕೂಲಕ್ಕೆ ತಕ್ಕಂತೆ ಕ್ಷೇತ್ರ ಪುನರ್ ವಿಂಗಡಣೆ ಆಗಲಿದ್ದು ಯಾವ ಪ್ರದೇಶಗಳು ಯಾವ ಕ್ಷೇತ್ರಕ್ಕೆ ಸೇರಲಿದೆ ಅನ್ನುವ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರ ಬರಬೇಕಾಗಿದೆ. ಈ ನಡುವೆ ರಾಜಕೀಯ ಪಕ್ಷಗಳು, ಮುಖಂಡರು ಪುನರ್ ವಿಂಗಡಣೆ ಆದರೆ ನಮಗೆ ಯಾವ ಲಾಭ -ನಷ್ಟ ವಿದೆ ಅನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಒಟ್ಟಾರೆ ಹಾಲಿ ಶಾಸಕರುಗಳಿಗೆ ಕ್ಷೇತ್ರ ಪುನರ್ ವಿಂಗಡಣೆ ಯಿಂದ ಕೆಲವರಿಗೆ ನಷ್ಟವಾಗುವ ಸಾಧ್ಯತೆ ಕೂಡ ಇದೆ. ತಮ್ಮ ಸೇಫ್ ಸ್ಥಾನಕ್ಕಾಗಿ ಈಗಾಗಲೇ ಟವೆಲ್ ಹಾಕಲು ಸಿದ್ಧರಾಗಿದ್ದಾರೆ. ಇದರ ನಡುವೆ ಈ ಕ್ಷೇತ್ರ ತಮಗೆ ಸೇಫ್ ಎಂದುಕೊಂಡು ಇನ್ನೂ ಕೆಲವು ನಾಯಕರು ಈಗಿಂದೀಗಲೇ ತಯಾರಿ ನಡೆಸುತ್ತಿದ್ದು, ಹೊಸ ರಾಜಕೀಯ ಲೆಕ್ಕಾಚಾರಕ್ಕೆ ಕಾರಣವಾಗಿದೆ. ಈಗಾಗಲೇ ಸುಳ್ಯ ಪರಿಶಿಷ್ಟ ಜಾತಿ,ಪಂಗಡ ಗಳ ಮೀಸಲು ಕ್ಷೇತ್ರವಾಗಿದ್ದು, ಹೊಸ ಎರಡು ಕ್ಷೇತ್ರವಾದರೆ ಅದರಲ್ಲಿ ಒಂದು ಮಹಿಳಾ ಮೀಸಲು ಕ್ಷೇತ್ರವಾಗಲಿದೆ. 2028 ರ ಹೊತ್ತಿಗೆ ಯಾರಿಗೆ ಬಂಪರ್ ಹೊಡೆಯಬಹುದು ಅನ್ನುವುದು ಈಗಲೇ ತೀರ್ಮಾನಕ್ಕೆ ಬರುವುದು ಕಷ್ಟ. ಆದರೆ ರಾಜಕೀಯ ಲೆಕ್ಕಾಚಾರಗಳು ಬಿರುಸಿನಿಂದ ನಡೆಯುತ್ತಿರುವುದಂತೂ ಸ್ಪಷ್ಟ.