ನ್ಯಾಯಾಲಯದಲ್ಲಿ ಕೆಲಸ ಕೊಡಿಸೋದಾಗಿ ನಂಬಿಸಿ, ನ್ಯಾಯಾದೀಶರ ಸಹಿಯನ್ನು ನಕಲು ಮಾಡಿ ವಂಚನೆ ಮಾಡುತ್ತಿದ್ದ ಆರೋಪದಡಿ ಸಿದ್ದಲಿಂಗಯ್ಯ ಹಿರೇಮಠ ಎಂಬವನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಸಿದ್ದಲಿಂಗಯ್ಯ ಹಿರೇಮಠ ಎಂಬವ ನ್ಯಾಯಾಲಯದಲ್ಲಿ ಪ್ರೋಸೆಸ್ ಸರ್ವರ್, ಜವಾನ ಹುದ್ದೆ ಖಾಲಿ ಇದೆ ಎಂದು ಜನರಿಗೆ ನಂಬಿಸಿ, ಉದ್ಯೋಗ ಕೊಡಿಸುತ್ತೇನೆ ಎಂದು ಪ್ರತಿಯೊಬ್ಬರ ಬಳಿ 7 ಲಕ್ಷ ರೂ. ಹಣ ವಸೂಲಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿ ಹಣ ಪಡೆದವರಿಗೆ ನಕಲಿ ನೇಮಕಾತಿ ಪತ್ರ ಕೊಟ್ಟಿದ್ದಾನೆ. ಅಲ್ಲದೇ ನೇಮಕಾತಿ ಪತ್ರದಲ್ಲಿ ನ್ಯಾಯಮೂರ್ತಿಗಳ ಸಹಿಯನ್ನು ನಕಲಿ ಮಾಡಿದ್ದಾನೆ. ರಾಜ್ಯದ ಹಲವೆಡೆ ಇಂತಹ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಬೆಂಗಳೂರು ಮೂಲದ ಅಬ್ದುಲ್ ರಜಾಕ್ ಎಂಬವರು ಸಿದ್ದಲಿಂಗಯ್ಯ ವಿರುದ್ಧ ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿದಿದೆ.