ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ರಾಜ್ಯಪಾಲರ ಒಪ್ಪಿಗೆಯನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದ ಕ್ರಮವನ್ನು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಪ್ರತಿಕ್ರಿಯಿಸಿ, ಬಿಜೆಪಿಯನ್ನು ಟೀಕಿಸಿದ್ದಾರೆ. ಬಿಜೆಪಿಯವರು ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಮತ್ತು ಬೀಳಿಸಲು ಮೋಸದ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ರಾಜ್ಯ ಸರ್ಕಾರಗಳನ್ನು ಉರುಳಿಸಲು ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದು ಒಕ್ಕೂಟ ರಚನೆಗೆ ವಿರುದ್ಧವಾಗಿರುವುದರಿಂದ ಎಲ್ಲ ವಿರೋಧ ಪಕ್ಷಗಳು ಇದರ ವಿರುದ್ಧ ದನಿ ಎತ್ತಬೇಕು. ಈ ರೀತಿಯ ರಾಜ್ಯಪಾಲರನ್ನು ತೆಗೆದುಹಾಕಬೇಕು ಮತ್ತು ಅದರ ವಿರುದ್ಧ ರಾಷ್ಟ್ರೀಯ ಚಳವಳಿಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯಪಾಲರು ಪ್ರಾಸಿಕ್ಯೂಷನ್ ಅನ್ನು ಅನುಮೋದಿಸಬಹುದು ಎಂದು ಸಂವಿಧಾನದಲ್ಲಿ ಎಲ್ಲಿಯೂ ಬರೆಯಲಾಗಿಲ್ಲ. ಸಿಎಂ ವಿರುದ್ಧ ಪ್ರಕರಣವಿದ್ದರೆ ರಾಜ್ಯಪಾಲರು ಒಪ್ಪಿಗೆ ನೀಡಲು ಸಮರ್ಥರು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಉಲ್ಲಂಘನೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ ಎಂದು ಅವರು ಹೇಳಿದರು.
ಯಾವುದೇ ಮ್ಯಾಜಿಸ್ಟ್ರೇಟ್ ವಿಚಾರಣೆಯಿಲ್ಲದೆ ಆರೋಪಿಗಳ ವಿರುದ್ಧದ ಆರೋಪಗಳು ನಿಜವೇ ಎಂದು ರಾಜ್ಯಪಾಲರು ಹೇಗೆ ನಿರ್ಧರಿಸುತ್ತಾರೆ.? ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಲು ಮತ್ತು ಕ್ರಿಮಿನಲ್ ಅಪರಾಧ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ರಾಜ್ಯಪಾಲರಿಗೆ ಸಾಂವಿಧಾನಿಕ ಹಕ್ಕು ಇಲ್ಲ. ಮೊದಲು ತನಿಖೆ ನಡೆಸಿ ನಂತರ ಅನುಮೋದನೆ ನೀಡಬೇಕು.
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ‘ಎಕ್ಸ್’ ನಲ್ಲಿ ಪೋಸ್ಟ್ ಹಾಕಿರುವ ಸಿಬಲ್, ಕರ್ನಾಟಕದ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಮತ್ತು ಉರುಳಿಸಲು ಬಿಜೆಪಿಯ ಕಪಟ ವಿಧಾನಗಳನ್ನು ಅನುಸರಿಸುತ್ತಿದೆ. ಶಾಸಕರಿಗೆ ಆಮಿಷವೊಡ್ಡುವುದು, ಹತ್ತನೇ ಶೆಡ್ಯೂಲ್ ಅನ್ನು ದುರ್ಬಳಕೆ ಮಾಡುವುದು, ಭಯವನ್ನು ಸೃಷ್ಟಿಸುವುದು (ಇಡಿ, ಸಿಬಿಐ) ಮತ್ತು ರಾಜ್ಯಪಾಲರು ತಮ್ಮ ಸಾಂವಿಧಾನಿಕ ಜವಾಬ್ದಾರಿಗಳನ್ನು ಮೀರಿ ವರ್ತಿಸುವುದನ್ನು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.