8 ಬಸ್.. 56 ಟ್ರಿಪ್ ಗೆ ಅಸ್ತು.. ಖಾಸಗಿ ಬಸ್ಸಿನವರ ಧಾವಂತಕ್ಕೆ ಇನ್ನಾದರೂ ಬ್ರೇಕ್ ಬೀಳಲಿದೆಯಾ..?
ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ನ ತವರೂರು ಎಂದು ಕರೆಯಲ್ಪಡುವುದಿದ್ದರೆ ಅದು ಮೂಡಬಿದಿರೆ ಮಾತ್ರ. ಜಿಲ್ಲೆಯಲ್ಲಿ ಓಡುತ್ತಿರುವ ಹೆಚ್ಚಿನ ಎಲ್ಲಾ ಖಾಸಗಿ ಬಸ್ ನ ಮಾಲಕರು ಇರುವ ಊರು ಕೂಡ ಮೂಡಬಿದಿರೆ ಆಗಿದೆ. ಮಂಗಳೂರು -ಮೂಡಬಿದಿರೆ ರೂಟಿಗೆ ಈವರೆಗೂ ಸರಕಾರಿ ಬಸ್ ಬಂದಿಲ್ಲ. ಖಾಸಗಿ ಬಸ್ಸಿನವರ ಲಾಬಿ ಆ ಮಟ್ಟಿಗೆ ಸ್ಟ್ರಾಂಗ್ ಆಗಿದೆ. ಇದೀಗ ಖುದ್ದು ನ್ಯಾಯಾಲಯವೇ ಸರಕಾರಿ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಬಹುಕಾಲದ ಬೇಡಿಕೆಯಾಗಿದ್ದ ಮಂಗಳೂರು -ಮೂಡಬಿದಿರೆ ನಡುವಿನ ಸರಕಾರಿ ಬಸ್ ಸಂಚಾರಕ್ಕೆ ಕೊನೆಗೂ ನ್ಯಾಯಾಲಯದಿಂದಲೇ ಅವಕಾಶ ದೊರೆತಿದೆ. ಜಿಲ್ಲೆಯ ಬೇರೆಲ್ಲ ರೂಟಿನಲ್ಲಿ ಒಂದಾ ಅಥವಾ ಎರಡೋ ಬಸ್ ಓಡಾಡಿ ಸರಕಾರದ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಕೈಗೆ ಸಿಗುತ್ತಿದ್ದವು. ಆದರೆ ಮಂಗಳೂರು -ಮೂಡಬಿದಿರೆ ರೂಟಿನಲ್ಲಿ ಖಾಸಗಿ ಬಸ್ಸಿನವರ ದರ್ಬಾರ್ ನಡೆಯುತ್ತಿದ್ದುದರಿಂದ ಸರಕಾರಿ ಬಸ್ ಓಡಾಟ ಮರೀಚಿಕೆಯಾಗಿತ್ತು. ಒಂದೊಂದು ಬಸ್ ಪ್ರಯಾಣಿಕರಿಂದ ಬೇಕಾಬಿಟ್ಟಿ ದರ ವಸೂಲಿ ಮಾಡುವ ಆರೋಪವು ಕೇಳಿ ಬರುತ್ತಿದ್ದವು. ಟೈಮಿಂಗ್ ವಿಚಾರದಲ್ಲಿ ಕೆಲವೊಂದು ಬಸ್ಸಿನ ಸಿಬ್ಬಂದಿಗಳು ಪ್ರಯಾಣಿಕರೊಂದಿಗೆ ನಡೆಸುವ ದುರ್ವತನೆಯೂ ಮಿತಿ ಮೀರಿತ್ತು.
ಮಂಗಳೂರು -ಮೂಡಬಿದಿರೆ ಮಾರ್ಗದ ಗುರುಪುರ ಸೇತುವೆ ದುರ್ಬಲವಾಗಿದೆ ಎಂದು ನೆಪವೊಡ್ಡಿ ಜಿಲ್ಲಾಡಳಿತ ಎಂಟು ಕೆಎಸ್ಸಾರ್ಟಿಸಿ ಬಸ್ ಪರವಾನಿಗೆಯನ್ನು ತಡೆಹಿಡಿಯಲಾಗಿತ್ತು. ಹೊಸ ಸೇತುವೆ ನಿರ್ಮಾಣದ ಬಳಿಕ ಪರವಾನಿಗೆ ನೀಡುವುದಾಗಿ ಭರವಸೆ ನೀಡಲಾಗಿತ್ತು. ಹೊಸ ಸೇತುವೆ ನಿರ್ಮಾಣದ ಬಳಿಕ ಎಂಟು ಕೆಎಸ್ಸಾರ್ಟಿಸಿ ಬಸ್ 56 ಟ್ರಿಪ್ ಓಡಿಸಲು ಅವಕಾಶ ಕೋರಲಾಗಿತ್ತು. ಆದರೆ 24 ಟ್ರಿಪ್ ಓಡಿಸಲು ಮಾತ್ರ ಅವಕಾಶ ನೀಡಲಾಗಿತ್ತು. ಇದರ ವಿರುದ್ಧ ಕೆಎಸ್ಸಾರ್ಟಿಸಿ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯವು ಕೆಎಸ್ಸಾರ್ಟಿಸಿ ಪರ ತೀರ್ಪು ನೀಡಿದೆ. ಆರ್ ಟಿ ಓ, ಪೊಲೀಸ್ ಇಲಾಖೆ, ಜಿಲ್ಲಾಡಳಿತ ನೀಡಿದ್ದ ನಿರ್ಣಯವನ್ನು ಅಸಿಂಧುಗೊಳಿಸಿದೆ. ಕೆಎಸ್ಸಾರ್ಟಿಸಿಯ ಎಂಟು ಬಸ್ ಗಳಿಗೆ 56 ಟ್ರಿಪ್ ಓಡಿಸಲು ಪರವಾನಿಗೆ ನೀಡುವಂತೆ ಆದೇಶಿಸಿದೆ. ಸದ್ಯ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮುಂದಿನ ತಿಂಗಳ ಬಳಿಕ ಸಮಿತಿಯಿಂದ ಕೆಎಸ್ಸಾರ್ಟಿಸಿ ಬಸ್ ಓಡಾಟಕ್ಕೆ ಪರವಾನಗಿ ಲಭಿಸುವ ಸಾಧ್ಯತೆ ಇದೆ.