ದೀಪಾವಳಿ ಪಟಾಕಿಯಂತೆ ನೂರಾರು ಖಂಡಾಂತರ ಕ್ಷಿಪಣಿ ಗಳನ್ನು ಇಸ್ರೇಲ್ ಗೆ ನುಗ್ಗಿಸಿ ಕೇಕೆ ಹಾಕಿತ್ತು ಇರಾನ್. ಇಸ್ರೇಲ್ ಗೆ ಇದರಿಂದ ದೊಡ್ಡ ನಷ್ಟ ಏನೂ ಆಗದಿದ್ದರೂ ಅವರ ಜಂಭಾಬಲವನ್ನು ಕುಗ್ಗಿಸುವಂತೆ ಮಾಡಿತ್ತು. ಇದೇ ಮೊದಲ ಬಾರಿಗೆ ಇಸ್ರೇಲ್ ಗಡಗಡ ನಡುಗುವಂತೆ ಮಾಡಿದ್ದು ಬೇರಾರು ಅಲ್ಲ. ಇರಾನ್ ನ 85 ರ ಪ್ರಾಯದ ಸುಪ್ರೀಂ ನಾಯಕ ಅಯತೊಲ್ಲಾ ಖಮೇನಿ.
ಇಸ್ರೇಲ್ ದಾಳಿಗೆ ಖಮೇನಿ ಬಂಕರ್ ನಲ್ಲಿ ಅಡಗಿ ಕೂತಿದ್ದಾರೆ ಎಂದು ಜಗತ್ತಿನ ಮಾಧ್ಯಮಗಳು ಸುದ್ದಿ ಬಿತ್ತರಿಸಿದ ಹೊತ್ತಿಗೆ ಶುಕ್ರವಾರದ ಪವಿತ್ರ ದಿನದಂದು ಜುಮ್ಮಾ ನಮಾಝಿನ ನೇತೃತ್ವ ವಹಿಸಿ ಸಾವಿರಾರು ಜನರ ಮುಂದೆಯೇ ಖುದ್ದು ಅಯತೊಲ್ಲಾ ಖಮೇನಿ ಶಪಥ ಮಾಡಿದ್ದಾರೆ.

ಹಿಜ್ಬುಲ್ಲಾ ನಾಯಕ ನಸ್ರಾನಿ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಬಹಿರಂಗವಾಗಿಯೇ ಗುಡುಗಿದ್ದಾರೆ. ಇಸ್ರೇಲ್ ಮೇಲೆ ಮಿಸೈಲ್ ದಾಳಿ ಮಾಡಿರುವ ಇರಾನ್ ಮುಂದಿನ ದಿನದಲ್ಲೂ ಅಗತ್ಯ ಬಿದ್ದರೆ ದಾಳಿ ಮಾಡಲು ಹಿಂಜರಿಯಲ್ಲ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ನಾವು ಹಿಂದೆ ಸರಿಯುವ ಮಾತೇ ಇಲ್ಲ, ಇಸ್ರೇಲಿಗೆ ಉಳಿಗಾಲವಿಲ್ಲ. ನಾನು ಇಸ್ರೇಲಿಗೆ ಹೆದರುವ ಮಗನೇ ಅಲ್ಲ ಎಂದಿದ್ದಾರೆ. ಈವರೆಗೂ ದುರ್ಬಲ ರಾಷ್ಟ್ರದೆದುರು ಸೆಣಸಾಡುತ್ತಾ ಗರ್ವದಿಂದ ಬೀಗುತ್ತಿದ್ದ ಇಸ್ರೇಲ್ ಗೆ ನಿಜವಾದ ಅಗ್ನಿಪರೀಕ್ಷೆ ಎದುರಾಗಿದೆ. ಹಿಜ್ಬುಲ್ಲಾ ಬಂಡುಕೋರ ಪಡೆಯನ್ನು ಕಟ್ಟಿ ಬೆಳೆಸಿದ್ದು ಇರಾನ್. ತಾನು ಸಾಕಿ ಬೆಳೆಸಿದ ಸಂಘಟನೆಯ ನಾಯಕರ ಬಲಿದಾನವನ್ನು ಕಣ್ಣಿದ್ದು ಕುರುಡರಂತೆ ನೋಡಿ ಸುಮ್ಮನೆ ಇರಲು ಬಯಸುವುದಿಲ್ಲ ಎಂದು ಹೇಳಿದೆ.
ಖಮೇನಿ ವಾರ್ನಿಂಗ್ ಮೂರನೇ ಮಹಾಯುದ್ಧಕ್ಕೆ ಕಾರಣವಾಗುತ್ತಾ ಅನ್ನುವ ಮಾತುಗಳು ಈಗ ಕೇಳಿ ಬರತೊಡಗಿದೆ. ಇಸ್ರೇಲ್ ಬೆನ್ನಿಗೆ ಅಮೆರಿಕ ನಿಂತಿದೆ. ಇರಾನ್ ಗೆ ಪರೋಕ್ಷವಾಗಿ ರಷ್ಯಾ, ಚೀನಾ ಬೆನ್ನಿಗಿದೆ. ಯುದ್ದ ನಡೆದರೆ ಅದು ಘನಘೋರವಾಗಲಿದೆ. ಎರಡು ರಾಷ್ಟ್ರಗಳ ಸಾವಿರಾರು ನಾಗರಿಕರ ಮಾರಣಹೋಮ ನಡೆಯಲಿದೆ.

ವಿಶ್ವಸಂಸ್ಥೆಯ ನಿಯಮಗಳನ್ನು ಗಾಳಿಗೆ ತೂರಿ ಇಸ್ರೇಲ್ ಪ್ಯಾಲೆಸ್ತೀನ್ ಮುಗ್ಧ ಕಂದಮ್ಮಗಳ ಮೇಲೆ ಬಾಂಬ್ ಸುರಿಸಿ ಕ್ರೂರತೆ ಮೆರೆದಿತ್ತು. ಇದೀಗ ಲೆಬನಾನ್ ಮೇಲೆ ರಾಸಾಯನಿಕ ಅಸ್ತ್ರ ಪ್ರಯೋಗಿಸಿ ಇಸ್ರೇಲ್ ಅಟ್ಟಹಾಸ ಮೆರೆಯುತ್ತಿದೆ. ಈ ಹಿಂದೆ ಡ್ರೋನ್ ದಾಳಿ ನಡೆಸಿ ಅಮೆರಿಕ ಇರಾನ್ ಸೈನ್ಯ ಮುಖ್ಯಸ್ಥ ಸುಲೈಮಾನಿಯನ್ನು ಕೊಂದು ಮುಗಿಸಿತ್ತು. ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಇರಾನ್ ಮೇಲೆ ದಾಳಿಗೆ ಮುಂದಾದರೆ ಅವರ ರುಂಡ ಚೆಂಡಾಡುತ್ತೇವೆ ಎಂದು ಬಹಿರಂಗವಾಗಿಯೇ ಸವಾಲು ಹಾಕಿದೆ. ಮಧ್ಯ ಪ್ರಾಚ್ಯ ದಲ್ಲಿ ಯುದ್ಧದ ಕಾರ್ಮೋಡ ಆವರಿಸಿದೆ.
ಈವರೆಗೂ ಸಣ್ಣ ಸಣ್ಣ ಗುಂಪುಗಳ ಮೇಲೆ ಬಾಂಬ್ ಸುರಿಸಿ ಜಗತ್ತಿನ ದೊಡ್ಡಣ್ಣ ರೀತಿ ವರ್ತಿಸುತ್ತಿರುವ ಇಸ್ರೇಲ್ ಗೆ ನಿಜವಾದ ಅಗ್ನಿಪರೀಕ್ಷೆ ಎದುರಾಗಿರುವುದು ಇದೇ ಮೊದಲು. ತನ್ನ ರಾಷ್ಟ್ರಕ್ಕೆ ಸೊಳ್ಳೆ ನುಸುಳಲು ಬಿಡುವುದಿಲ್ಲ ಎಂದಿದ್ದ ಇಸ್ರೇಲ್ ಅಹಂಕಾರವನ್ನು ಇರಾನ್ ಕ್ಷಿಪಣಿಗಳ ಮೂಲಕ ಗರ್ವಭಂಗ ಮಾಡಿತ್ತು. ಇದೀಗ ರಾಜಪ್ರಭುತ್ವಕ್ಕೆ ಅಂತ್ಯ ಹಾಡಿ ಇಸ್ಲಾಮಿಕ್ ಕ್ರಾಂತಿಗೆ ಮುನ್ನುಡಿ ಬರೆದ ಐತಿಹಾಸಿಕ ಮಸೀದಿ ಮುಂದೆಯೇ ಖಮೇನಿ ಶಪಥ ಜಗತ್ತನ್ನು ದಂಗುಬಡಿಸಿದೆ.