ತನಿಖೆಗೊಳಗಾದವರ ನಿದ್ರಿಸುವ ಹಕ್ಕನ್ನು ಗೌರವಿಸುವುದು ಮಹತ್ವದ್ದು; ಹೊತ್ತಲ್ಲದ ಹೊತ್ತಿನಲ್ಲಿ ಹೇಳಿಕೆ ದಾಖಲಿಸಿ ವ್ಯಕ್ತಿಯ ನಿದ್ರೆಯ ಹಕ್ಕನ್ನು ಇ.ಡಿ ಕಸಿಯುವಂತಿಲ್ಲ: ಬಾಂಬೆ ಹೈಕೋರ್ಟ್

ರಾಷ್ಟ್ರೀಯ

ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿ ಸಮನ್ಸ್‌ ಪಡೆದವರ ಹೇಳಿಕೆಗಳನ್ನು ತಡರಾತ್ರಿಯವರೆಗೂ ಪಡೆದುಕೊಳ್ಳುವ ಬದಲು ಕಚೇರಿ ಅವಧಿಗ ಸೀಮಿತಗೊಳಿಸಲು ಎಲ್ಲಾ ಯತ್ನ ಮಾಡುವಂತೆ ಜಾರಿ ನಿರ್ದೇಶನಾಲಯ ತನ್ನ ಅಧಿಕಾರಿಗಳಿಗೆ ಸೂಚಿಸಿದೆ.
ಕಳೆದ ಏಪ್ರಿಲ್‌ನಲ್ಲಿ ಬಾಂಬೆ ಹೈಕೋರ್ಟ್‌ ನೀಡಿದ್ದ ನಿರ್ದೇಶನದಂತೆ ಸುತ್ತೋಲೆ ಹೊರಡಿಸಿರುವ ಇ.ಡಿ ತನಿಖೆಗೊಳಗಾದವರ ನಿದ್ರಿಸುವ ಹಕ್ಕನ್ನು ಗೌರವಿಸುವುದು ಮಹತ್ವದ್ದು ಎಂದಿದೆ. ಹೊತ್ತಲ್ಲದ ಹೊತ್ತಿನಲ್ಲಿ ಹೇಳಿಕೆ ದಾಖಲಿಸಿ ವ್ಯಕ್ತಿಯ ನಿದ್ರೆಯ ಹಕ್ಕನ್ನು ಇ ಡಿ ಕಸಿಯುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

ತನ್ನ ಅಕ್ರಮ ಬಂಧನ ಪ್ರಶ್ನಿಸಿ 64 ವರ್ಷದ ಉದ್ಯಮಿ ರಾಮ್ ಇಸ್ರಾನಿ ಅವರ ಅರ್ಜಿಯನ್ನು ಕಳೆದ ಏಪ್ರಿಲ್ 15 ರಂದು ವಜಾಗೊಳಿಸಿದ್ದ ಇದೇ ಪೀಠ ಹೇಳಿಕೆ ದಾಖಲಿಸುವುದಕ್ಕಾಗಿ ಕಚೇರಿಯಲ್ಲಿ ಉದ್ಯಮಿಯನ್ನು ಕಾಯುವಂತೆ ಮಾಡಿದ್ದಕ್ಕೆ ತರಾಟೆಗೆ ತೆಗೆದುಕೊಂಡಿತ್ತು. ಹೀಗೆ ಮಾಡುವುದು ಇಸ್ರಾನಿ ಅವರ ನಿದ್ರಿಸುವ ಹಕ್ಕನ್ನು ಉಲ್ಲಂಘಿಸಿದಂತೆ ಎಂದು ಅದು ಆಗ ಹೇಳಿತ್ತು.

“ನಿದ್ರಿಸುವ ಹಕ್ಕು ಮನುಷ್ಯನ ಮೂಲಭೂತ ಹಕ್ಕಾಗಿದೆ. ನಿದ್ರಿಸುವ ಹಕ್ಕು ನೀಡದಿದ್ದರೆ ವ್ಯಕ್ತಿಯ ಮಾನವ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ. ಇದು ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಆತನ ಮಾನಸಿಕ ಸಾಮರ್ಥ್ಯ ಹಾಗೂ ಗ್ರಹಿಕೆಯ ಕೌಶಲ್ಯ ಇತ್ಯಾದಿಗಳನ್ನು ದುರ್ಬಲಗೊಳಿಸಬಹುದು. ಹೀಗೆ ಹೊತ್ತಲ್ಲದ ಹೊತ್ತಿನಲ್ಲಿ ಹೇಳಿಕೆ ದಾಖಲಿಸಿಕೊಳ್ಳಲು ಕರೆಸಿಕೊಂಡು ವ್ಯಕ್ತಿಯ ಮೂಲಭೂತ ಹಕ್ಕನ್ನು ಅಂದರೆ ನಿದ್ರಿಸುವ ಹಕ್ಕನ್ನು ವಂಚಿಸುವಂತಿಲ್ಲ. ಹೇಳಿಕೆಗಳನ್ನು ಸೂಕ್ತ ಸಮಯದಲ್ಲಿಯೇ ದಾಖಲಿಸಿಕೊಳ್ಳಬೇಕೆ ವಿನಾ ವ್ಯಕ್ತಿಯ ಗ್ರಹಿಕೆಯ ಕೌಶಲ್ಯಗಳು ದುರ್ಬಲಗೊಂಡಿರುವ ರಾತ್ರಿ ಹೊತ್ತಿನಲ್ಲಿ ಅಲ್ಲ” ಎಂದು ನ್ಯಾಯಾಲಯ ಆಗ ಎಚ್ಚರಿಕೆ ನೀಡಿತ್ತು.