ಹೊಸ ಮೇಯರ್ ಗೆ ಅಧಿಕಾರದ ಭಾಗ್ಯ ಇನ್ನೂ ಸಿಕ್ಕಿಲ್ಲ; ಅಧಿಕಾರಿಗಳದ್ದೇ ದರ್ಬಾರ್, ಆರೇಳು ತಿಂಗಳಿಗೆ ಹೊಸ ಮೇಯರ್

ಕರಾವಳಿ

ಇದು ಮಂಗಳೂರು ಮಹಾನಗರ ಪಾಲಿಕೆಯ ದುರಂತ ಅವಸ್ಥೆ. ಮಹಾನಗರ ಪಾಲಿಕೆ ಚುನಾವಣೆಗೆ ಆರು ತಿಂಗಳು ಬಾಕಿ ಇರುವಾಗಲೇ ನೂತನ ಮೇಯರ್ ಆಯ್ಕೆ ನಡೆದಿದೆ. ಆರೇಳು ತಿಂಗಳಿಗೆ ಹೊಸ ಮೇಯರ್ ಆಯ್ಕೆ ನಡೆದಿದರೂ, ಹೊಸ ಮೇಯರ್ ಗೆ ಅಧಿಕಾರದ ಭಾಗ್ಯ ಇನ್ನೂ ಸಿಕ್ಕಿಲ್ಲ. ಅಧಿಕಾರಿಗಳದ್ದೇ ದರ್ಬಾರ್ ನಡೆಯುತ್ತಿದೆ.

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿದ್ದ ಸುಧೀರ್ ಶೆಟ್ಟಿ ಕಣ್ಣೂರು ಅಧಿಕಾರಾವಧಿ ಸೆಪ್ಟೆಂಬರ್ ತಿಂಗಳಿಗೆ ಮುಗಿದಿದ್ದು, ಮುಂದಿನ ಆರು ತಿಂಗಳಿಗೆ ಮನೋಜ್ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಅಧಿಕಾರಾವಧಿ ಇರುವುದು ಇನ್ನು ಬರೀ ಆರು ತಿಂಗಳು ಮಾತ್ರ. ಈ ಮಧ್ಯೆ ವಿಧಾನಪರಿಷತ್ ಚುನಾವಣೆಯ ನೀತಿ ಸಂಹಿತೆ ಅಕ್ಟೋಬರ್ ಕೊನೆಯವರೆಗೂ ಜಾರಿಯಾದ ಕಾರಣ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಮುಂದೂಡಲ್ಪಟ್ಟಿದೆ. ಅಧಿಕಾರಾವಧಿ ಪಡೆಯುವಾಗ ಎರಡು ತಿಂಗಳು ಹಾಗೋ ಹೀಗೋ ಮುಗಿದುಹೋಗಿರುತ್ತದೆ. ಬರೀ ನಾಲ್ಕು ತಿಂಗಳಿಗೆ ಹೊಸ ಮೇಯರ್ ಆಯ್ಕೆ ಅಗತ್ಯವಿತ್ತಾ? ನಾಲ್ಕು ತಿಂಗಳ ಅವಧಿಯಲ್ಲಿ ಅವರು ಏನನ್ನು ಮಾಡಲು ಸಾಧ್ಯ? ಇನ್ನು ಉಳಿದಿರುವುದು ಸಣ್ಣ ಅವಧಿ ಮಾತ್ರ. ಇದಕ್ಕೆ ಹೊಸ ಮೇಯರ್ ಆಯ್ಕೆ ಅಗತ್ಯವಿತ್ತಾ? ಹಿಂದಿನ ಮೇಯರ್ ಅವರನ್ನೇ ಮುಂದುವರಿಸಬಾರದಿತ್ತೇ ಎಂಬ ಮಾತುಗಳು ಸಾರ್ವಜನಿಕ ವಲಯಗಳಿಂದ ಕೇಳಿ ಬರುತ್ತಿದೆ.

ಮೇಯರ್ ಅವಧಿ ಒಂದು ವರ್ಷಕ್ಕೆ ಸೀಮಿತವಾಗಿರುವುದು ಕೂಡಾ ತಕರಾರಿಗೆ ಕಾರಣವಾಗಿದೆ. ಒಬ್ಬ ಮೇಯರ್ ಆದವನಿಗೆ ಕನಿಷ್ಠ ಎರಡೂವರೆ ವರ್ಷದ ಅವಧಿಯನ್ನಾದರೂ ನೀಡಬೇಕು. ಅಷ್ಟೊಂದು ಸಮಯಾವಕಾಶ ಸಿಕ್ಕರೆ ತಾನು ಅಂದುಕೊಂಡಂತೆ ಏನಾದರೂ ಮಿರಾಕಲ್ ಮಾಡಲು ಸಾಧ್ಯ. ಒಂದು ವರ್ಷದ ಅವಧಿಯಲ್ಲಿ ಎರಡು ತಿಂಗಳು ಹಾರ, ತುರಾಯಿಯ ಹಿಂದೆನೇ ಹೋಗಿ ಸಮಯ ಕಳೆಯುತ್ತಾರೆ. ಮೂರು ತಿಂಗಳು ಆ ಮೀಟಿಂಗ್, ಈ ಮೀಟಿಂಗ್ ಎಂದೇಳಿ ಸಮಯ ಕಳೆಯುತ್ತಾರೆ. ಎರಡು ತಿಂಗಳು ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಮಯ ಮುಗಿದು ಹೋಗುತ್ತದೆ. ಎಲ್ಲಾ ಕಲಿತು ಅಧಿಕಾರ ಚಲಾಯಿಸುವಾಗ ಅವಧಿಯೇ ಮುಗಿದುಹೋಗಿರುತ್ತದೆ. ಇದೊಂತರ ರಬ್ಬರ್ ಸ್ಟಾಂಪ್ ಆಗಿ ಬಿಟ್ಟಿದೆ. ಈ ಪುರುಷಾರ್ಥಕ್ಕೆ ಮೇಯರ್ ಆಗಬೇಕಾ ಅನ್ನುವ ಮಾತುಗಳು ಹರಿದಾಡುತ್ತಿದೆ. ಅದರಲ್ಲೂ ನೂತನ ಮೇಯರ್ ರದ್ದು ಇನ್ನಷ್ಟು ಶೋಚನೀಯ ಪರಿಸ್ಥಿತಿ. ಮೇಯರ್ ಹೆಸರು ತಿಳಿಯುವ ಮುನ್ನವೇ ಅವಧಿ ಮುಗಿದು ಹೋಗುತ್ತದೆ. ಸರಕಾರ ಈ ಬಗ್ಗೆ ಇನ್ನಾದರೂ ಚಿಂತಿಸುವ ಅಗತ್ಯವಿದೆ.