ಬೈಕಂಪಾಡಿ ಬೀದಿ ವ್ಯಾಪಾರಿಗಳ ತೆರವು, ಪಟಾಕಿ ಅಂಗಡಿಗಳಿಗೆ ಅನುಮತಿ, ಪಾಲಿಕೆ ವಿರುದ್ಧ ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆ

ಕರಾವಳಿ

ಸುರತ್ಕಲ್: ನಗರಪಾಲಿಕೆಗೆ ಸೇರದ ರಾಷ್ಟ್ರೀಯ ಹೆದ್ದಾರಿ ಜಾಗವನ್ನು ಕಾನೂನು ಬಾಹಿರವಾಗಿ ಏಲಮ್ ಮಾಡಿ ಬಡ ಬೀದಿಬದಿ ವ್ಯಾಪಾರಿಗಳನ್ನು ಅಮಾನುಷವಾಗಿ ಬುಲ್ಡೋಜರ್ ಬಳಸಿ ಎಬ್ಬಿಸಿದ ಪಾಲಿಕೆಯ ಕ್ರಮ ಖಂಡಿಸಿ ಇಂದು ದಕ್ಷಿಣಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಬೈಕಂಪಾಡಿ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಸಂಘದ ಗೌರವಾಧ್ಯಕ್ಷ ಬಿಕೆ ಇಮ್ತಿಯಾಜ್ ಮಾತನಾಡುತ್ತಾ ನಗರಪಾಲಿಕೆ ಅಧಿಕಾರಿಗಳು ಕಾನೂನು ಬಾಹಿರವಾಗಿ ಧಾಳಿ ನಡೆಸಿ ಬಡ ಬೀದಿ ವ್ಯಾಪಾರಿಗಳಿಗೆ ಅನ್ಯಾಯ ಮಾಡಿದೆ. ಮತ್ತೊಂದೆಡೆ ಪಾಲಿಕೆಗೆ ಸೇರದ ಜಾಗವನ್ನು, ಪಟಾಕಿ ಮಾರಾಟ ಮಾಡಲು ಸುರಕ್ಷಿತವಲ್ಲದ ಪೆಟ್ರೋಲಿಯಂ ಮತ್ತು ಗ್ಯಾಸ್ ಕಂಪೆನಿಗಳ ಪೆಟ್ರೋಲ್ ಮತ್ತು ಗ್ಯಾಸ್ ಪೈಪ್ ಲೈನ್ ಹಾದುಹೋಗಿರುವ ಜಾಗದಲ್ಲಿ ಪಟಾಕಿ ಮಾರಾಟ ಮಳಿಗೆಗೆ ಅವಕಾಶ ನೀಡಿ ಅನಾಹುತಕ್ಕೆ ದಾರಿ ಮಾಡಿಕೊಟ್ಟಿದೆ. ಮಾರುಕಟ್ಟೆ , ಜನನಿಬಿಡ ಪ್ರದೇಶದಿಂದ ದೂರ ಇರಬೇಕಿದ್ದ ಸುಡು ಮದ್ದು ಮಾರಾಟವನ್ನು ಜನಸಂದಣಿಯ ನಡುವೆ ತಂದು ಹಾಕಿರುವುದು ವಿಪರ್ಯಾಸ ಎಂದು ಟೀಕಿಸಿದ ಅವರು ಬೀದಿಬದಿ ವ್ಯಾಪಾರಿಗಳ ವಿರುದ್ಧ ಕಾನೂನು ಬಾಹಿರ ಕಾರ್ಯಾಚರಣೆ ಮುಂದುವರಿದರೆ ಸುರತ್ಕಲ್ ಪಾಲಿಕೆಯ ವಲಯ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಆರ್ ಎಸ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ಶಿವಪ್ಪ, ಧನಂಜಯ ಸುರತ್ಕಲ್, ಹನೀಫ್ ಇಡ್ಯಾ,
ಐ ಮೊಹಮ್ಮದ್,ಸಲಾಂ ಸುರತ್ಕಲ್, ಹರೀಶ, ಎಮ್ ಎಸ್ ಮೊಯ್ದೀನ್,ಯಶೋಧರ ಬಂಗೇರ,ವೀಣಾ,ಶೈಲಾ ಸಿಕ್ವೇರಾ, ಸುನಿಲ್ ಮತ್ತಿತರರು ಉಪಸ್ಥಿತರಿದ್ದರು