ಚೆಕ್ ಅಮಾನ್ಯ ಪ್ರಕರಣ: ದೂರುದಾರ ಒಪ್ಪಿದರೆ ಮಾತ್ರ ರಾಜಿ; ಏಕಪಕ್ಷೀಯವಾಗಿ ಕೇಸ್ ರದ್ದುಪಡಿಸಲಾಗದು: ಸುಪ್ರೀಂ ಕೋರ್ಟ್

ರಾಷ್ಟ್ರೀಯ

ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ತೀರ್ಪೊಂದರಲ್ಲಿ, ದೂರುದಾರ ಒಪ್ಪಿದರೆ ಮಾತ್ರ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಸಿ.ಟಿ. ರವಿಕುಮಾರ್ ಹಾಗೂ ಸಂಜಯ್ ಕರೋಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.

ಚೆಕ್ ಅಮಾನ್ಯ ಪ್ರಕರಣದ ಫಿರ್ಯಾದಿ ರಾಜಿ ಇತ್ಯರ್ಥಕ್ಕೆ ಒಪ್ಪಿಗೆ ಸೂಚಿಸದೇ ಇದ್ದಾಗ ಹೈಕೋರ್ಟ್‌ ಸಿಆರ್‌ಪಿಸಿ ಸೆಕ್ಷನ್ 482 ಪ್ರಕಾರ ತನ್ನ ಅಂತರ್ಗತ ಅಧಿಕಾರ ಬಳಸಿ ಚೆಕ್ ಅಮಾನ್ಯ ಪ್ರಕರಣವನ್ನು ರದ್ದುಗೊಳಿಸಲಾಗದು ಎಂದು ನ್ಯಾಯಪೀಠ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಆರೋಪಿ ರಾಜಿಗೆ ಒಪ್ಪಿದರೂ ಫಿರ್ಯಾದಿಯ ಸಮ್ಮತಿ ಇದ್ದರೆ ಮಾತ್ರ ಚೆಕ್‌ ಅಮಾನ್ಯ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಬಹುದು ಎಂಬುದನ್ನು ಸ್ಪಷ್ಟಪಡಿಸಿದ ನ್ಯಾಯಪೀಠ, ನೆಗೋಷಿಯೆಬಲ್ ಇನ್ಸ್‌ಟ್ರುಮೆಂಟ್ಸ್ ಆಕ್ಟ್‌ ಸೆಕ್ಷನ್ 147 ಮತ್ತು ಸಿಆರ್‌ಪಿಸಿಯ ಸೆಕ್ಷನ್ 482 ಎರಡು ವಿಭಿನ್ನ ಆಯಾಮವನ್ನು ಹೊಂದಿವೆ. ನ್ಯಾಯದ ದುರುಪಯೋಗ ತಡೆಯಲು ಮತ್ತು ನ್ಯಾಯವನ್ನು ದೊರಕಿಸಿಕೊಡಲು ಸಿಆರ್‌ಪಿಸಿಯ ಸೆಕ್ಷನ್ 482ಅನ್ನು ಬಳಸಬಹುದಾಗಿದೆ. ಆದರೆ, ನೆಗೋಷಿಯೆಬಲ್ ಇನ್ಸ್‌ಟ್ರುಮೆಂಟ್ಸ್ ಆಕ್ಟ್‌ ವಿಶೇಷ ಕಾಯ್ದೆಯಾಗಿದ್ದು, ದೂರುದಾರ ಒಪ್ಪಿಗೆ ನೀಡಿದರೆ ಮಾತ್ರ ರಾಜಿ ಮಾಡಲು ಸಾಧ್ಯ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.

ರಾಜ್ ರೆಡ್ಡಿ ಕಲ್ಲೇಮ್ Vs ಹರ್ಯಾಣ ಸರ್ಕಾರ ಪ್ರಕರಣ ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಈ ಪ್ರಕರಣದಲ್ಲಿ ನ್ಯಾಯಪೀಠ ಫಿರ್ಯಾದಿಯ ಸಮ್ಮತಿ ಕಡ್ಡಾಯ ಎಂಬುದನ್ನು ಸ್ಪಷ್ಟಪಡಿಸಿತ್ತು ಎಂಬುದನ್ನು ನೆನಪಿಸಿದೆ. ದೂರುದಾರರಿಗೆ ನ್ಯಾಯಯುತ ಪರಿಹಾರ ಪಾವತಿಸಲಾಗಿದೆ ಎಂಬ ಆಧಾರದ ಹೈಕೋರ್ಟ್ ತೀರ್ಪನ್ನು ಒಪ್ಪಲಾಗದು ಎಂದು ಸ್ಪಷ್ಟಪಡಿಸಿದೆ. ದೂರುದಾರರಿಗೆ ನ್ಯಾಯಯುತ ಪರಿಹಾರ ಪಾವತಿಸಿದಾಗ ರಾಜಿಗೆ ದೂರುದಾರರ ಸಮ್ಮತಿ ಕಡ್ಡಾಯವಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಅಭಿಪ್ರಾಯ ಸಮರ್ಥನೀಯವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.