22 ಮಂದಿ ಪೊಲೀಸರ ತಂಡದ ಕಾರ್ಯಾಚರಣೆ, 500 ಕ್ಕೂ ಅಧಿಕ ಸಿಸಿ ಟಿವಿ ಪರಿಶೀಲನೆ, ಆರೋಪಿಗಳ ಹೆಡೆಮುರಿ ಕಟ್ಟಿದ ಕೊಡಗಿನ ಪೊಲೀಸರು
ಹೈದರಾಬಾದ್ ನಿವಾಸಿ ರಮೇಶ್‌ಕುಮಾರ್ ಎಂಬವರ ಮೃತ ದೇಹವು ಸುಟ್ಟ ಸ್ಥಿತಿಯಲ್ಲಿ ಸುಂಟಿಕೊಪ್ಪದಲ್ಲಿ ಪತ್ತೆಯಾಗಿದ್ದು, ಇದು ಒಂದು ಪೂರ್ವ ನಿಯೋಜಿತ ಕೊಲೆಕೃತ್ಯವಾದ ಹಿನ್ನಲೆಯಲ್ಲಿ ಅವರ ಎರಡನೇ ಪತ್ನಿ ತೆಲಂಗಾಣದ ನಿಹಾರಿಕಾ ಮತ್ತು ಆಕೆಯ ಗೆಳೆಯರಾದ ಹರಿಯಾಣದ ಅಂಕೂರ್ ರಾಣಾ, ಬೆಂಗಳೂರಿನ ಪಶುವೈದ್ಯ ನಿಖಿಲ್ ಮೈರೆಡ್ಡಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಶವ ಸುಟ್ಟ ಆಸುಪಾಸಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಬೆಂಚ್ ಕಾರೊಂದು ಪತ್ತೆಯಾಯಿತು. ಅದು ಕೊಡಗಿಗೆ ಬಂದ ಹಾದಿಯ ಸುಮಾರು 500ಕ್ಕೂ ಅಧಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಾ ಹೋದಂತೆ ಆ ಕಾರು ರಮೇಶ್ ಅವರದ್ದು ಎಂಬುದು ಖಚಿತಗೊಂಡಿತು. ನಂತರ, ತನಿಖೆ ಕೈಗೊಂಡಾಗ ಆರೋಪಿಗಳ ಸುಳಿವೂ ಪತ್ತೆಯಾಗಿದೆ.

ನಿಹಾರಿಕಾಲಿಗೆ ರಮೇಶ್ 3ನೇ ಪತಿ. ಮೊದಲ ಪತಿಗೆ ವಿಚ್ಚೇದನ ನೀಡಿ ಹರಿಯಾಣದಲ್ಲಿ ವ್ಯಕ್ತಿಯೊಬ್ಬರನ್ನು 2ನೇ ವಿವಾಹವಾಗಿ ವಂಚಿಸಿದ್ದಳು. ಈ ಪ್ರಕರಣದಲ್ಲಿ ಅಲ್ಲಿ ಜೈಲುವಾಸ ಅನುಭವಿಸಿ ಬಳಿಕ ಹೈದರಾಬಾದ್‌ನಲ್ಲಿ ರಮೇಶ್‌ಕುಮಾರ್ ಅವರನ್ನು 3ನೇ ಮದುವೆಯಾದಳು ನಿಹಾರಿಕಾ. ನಂತರ, ಬೆಂಗಳೂರಿಗೆ ಬಂದು ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸೇರಿ, ರಾಮಮೂರ್ತಿನಗರದ ಪಶು ವೈದ್ಯ ಡಾ.ನಿಖಿಲ್ ಜೊತೆ ಸ್ನೇಹಗಳಿಸಿದಳು. ಈ ಮಧ್ಯೆ ತನ್ನ ಆಸ್ತಿ ಮಾರಾಟದಿಂದ ಬರಬೇಕಿದ್ದ 8 ಕೋಟಿ ರೂಪಾಯಿ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ತೆಲಂಗಾಣದಲ್ಲಿ ರಮೇಶ್ ಅವರನ್ನು ಇತರ ಆರೋಪಿಗಳೊಂದಿಗೆ ಸೇರಿ ಕೊಂದು, ಸುಂಟಿಕೊಪ್ಪದ ಸಮೀಪ ಬೆಂಕಿ ಹಚ್ಚಿದಳು.
ಆರೋಪಿ ನಿಹಾರಿಕಾ ಬುದ್ದಿವಂತ ಮಹಿಳೆಯಾಗಿದ್ದು, ವಿವಿಧ ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಮಾಡಿ ಪ್ರತಿಷ್ಠಿತ ಕಂಪನಿಗಳಲ್ಲಿ ಹೆಚ್ಚಿನ ಸಂಬಳ ಪಡೆಯುವ ಕೆಲಸದಲ್ಲಿದ್ದಳು. ಬೆಂಗಳೂರಿನ ಪಶುವೈದ್ಯ ನಿಖಿಲ್ ಪರಿಚಿತನಾಗಿ ಇಬ್ಬರೂ ಸೇರಿ ಅಲ್ಲಿ ‘ಸಾಕುನಾಯಿಗಳ ಆರೈಕೆ ಕೇಂದ್ರ’ ನಡೆಸುತ್ತಿದ್ದರು. ಆರೋಪಿ ಅಂಕೂರ್‌ರಾಣಾ ಹರಿದ್ವಾರದಲ್ಲಿ ಅಡಗಿ ಕುಳಿತಿದ್ದ. ಇಲ್ಲಿನ ಪ್ರಕರಣದ ಸಂಪೂರ್ಣ ಮಾಹಿತಿಯನ್ನೂ ಕಲೆ ಹಾಕುತ್ತಿದ್ದ. ಆದರೆ ಮಡಿಕೇರಿ ಪೊಲೀಸರ ತಂಡ ಆತನನ್ನು ಯಶಸ್ವಿಯಾಗಿ ಬಂಧಿಸುವಲ್ಲಿ ಸಫಲವಾಯಿತು.
ತನಿಖೆಗೆ ರಚಿಸಿದ್ದು 22 ಮಂದಿ ಪೊಲೀಸ್ ತಂಡ, ದೇಶದ ಅನೇಕ ಭಾಗಗಳಲ್ಲಿ ಕಾರ್ಯಾಚರಣೆ ನಡೆಸಿ 14 ದಿನಗಳಲ್ಲಿ ಆರೋಪಿಗಳನ್ನು ಬಂಧಸಿ ಹೆಡೆಮುರಿ ಕಟ್ಟಿುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೃತ್ಯವೆಸಗಿ ದೇಶದ ಯಾವುದೇ ಮೂಲೆಯಲ್ಲಿ ಅಡಗಿ ಕುಳಿತರೂ ಕೊಡಗಿನ ಪೊಲೀಸರು ಬಿಡುವುದಿಲ್ಲ ಎಂಬ ಸಂದೇಶದೊಂದಿಗೆ ಎಚ್ಚರಿಕೆಯನ್ನು ಎಸ್.ಪಿ.ರಾಮರಾಜನ್ ನೀಡಿದ್ದಾರೆ. ಕಾರ್ಯಾಚರಣೆ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಅಭಿನಂದಿಸಿದ್ದಾರೆ.