ಸುರತ್ಕಲ್ ಹೆಣ್ಣುಮಗಳ FB ಮೆಸೆಂಜರ್ ಹ್ಯಾಕಿಂಗ್, ಆತ್ಮಹತ್ಯೆ ಯತ್ನ ಪ್ರಕರಣದ ಸಮಗ್ರ ತನಿಖೆಗೆ ಹೋರಾಟ ಸಮಿತಿ ಆಗ್ರಹ

ಕರಾವಳಿ

ಸುರತ್ಕಲ್ ನ ಹೆಣ್ಣು ಮಗಳೊಬ್ಬಳ FB ಮೆಸೆಂಜರ್ ಹ್ಯಾಕ್ ಮಾಡಿ ಆತನ ಸೋದರನಿಗೆ ಬೆದರಿಕೆ ಹಾಕಿದ ಪ್ರಕರಣ ಕೋಮು ಬಣ್ಣ ಪಡೆದುಕೊಂಡು ಆತಂಕಕ್ಕೆ ಕಾರಣವಾಗಿದೆ. ಹುಡುಗಿ ಅನುಮಾನ ವ್ಯಕ್ತ ಪಡಿಸಿದ, ಡೋಲೊ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಹಿನ್ನಲೆಯಲ್ಲಿ ಮುಸ್ಲಿಂ ಯುವಕ ಶಾರೀಕ್ ನನ್ನು ಸುರತ್ಕಲ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಅದರೆ, ಬಂಧಿತ ಯುವಕ, ಆತನ ಕುಟುಂಬಸ್ಥರು, ಗೆಳೆಯರು, ಈ ಪ್ರಕರಣವನ್ನು ಹತ್ತಿರದಿಂದ ಗಮನಿಸಿದವರು ಬೇರೆಯೆ ಕತೆ ಹೇಳುತ್ತಿದ್ದಾರೆ. ಅವರ ಪ್ರಕಾರ ಈ ಮೆಸೆಂಜರ್ ಹ್ಯಾಕಿಂಗ್ ಪ್ರಕರಣಕ್ಕೂ, ಬಂಧಿತ ಮುಸ್ಲಿಂ ಯುವಕನಿಗೂ ಯಾವುದೇ ಸಂಬಂಧ ಇಲ್ಲ. ಆತನನ್ನು ಯಾವುದೇ ಸಾಕ್ಷ್ಯಾಧಾರ ಇಲ್ಲದೆ ಬಜರಂಗ ದಳದ ಒತ್ತಡಕ್ಕೆ ಒಳಗಾಗಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ‌.

ಮೆಸೆಂಜರ್ ಹ್ಯಾಕ್ ಮಾಡಿ ಸಂದೇಶ ಹರಿಯ ಬಿಡತೊಡಗಿದಾಗ ಸಂತ್ರಸ್ತೆ ಯುವತಿ ಪೊಲೀಸ್ ದೂರು ನೀಡಿದ್ದಾಳೆ. FIR ದಾಖಲಿಸಿದ ಪೊಲೀಸರು ಹುಡುಗಿ ಅನುಮಾನ ವ್ಯಕ್ತಡಿಸಿದವರನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಶಾರೀಕ್ ನನ್ನೂ ಕರೆದು ಒಂದಿಡೀ ದಿನ ವಿಚಾರಣೆಗೆ ಒಳಪಡಿಸಿದ್ದಾರೆ. ಆತನ ಮೊಬೈಲ್ ಅನ್ನು ಪೂರ್ತಿ ತಪಾಸಣೆಗೆ ಒಳಪಡಿಸಿದ್ದಾರೆ. ಯಾವುದೇ ಸಾಕ್ಷ್ಯ ಸಿಗದಿರುವ ಕಾರಣ ಆತನ ಪಾತ್ರ ಇಲ್ಲದ ಎಂದು ನಿರ್ಧರಿಸಿ ಬಿಟ್ಟು ಕಳುಹಿಸಿದ್ದಾರೆ.

ಅಷ್ಟು ಹೊತ್ತಿಗೆ ಬಜರಂಗ ದಳ, ಬಿಜೆಪಿ ಮಧ್ಯಪ್ರವೇಶ ಮಾಡಿದೆ. ಲವ್ ಜಿಹಾದ್, ಹುಡುಗಿಯನ್ನು ಕತ್ತರಿಸಿ 24 ತುಂಡು ಮಾಡುವುದಾಗಿ ಮೆಸೆಂಜರ್ ನಲ್ಲಿ ಬೆದರಿಕೆ ಹಾಕಲಾಗಿದೆ, ಪೊಲೀಸರು ಮುಸ್ಲಿಂ ಶಾರೀಕ್ ನನ್ನು ರಕ್ಷಿಸುತ್ತಿದ್ದಾರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹಿಂದುಗಳಿಗೆ ರಕ್ಷಣೆ ಇಲ್ಲ… ಎಂಬ ಆರೋಪಗಳನ್ನು ಮಾಡಿದ್ದಾರೆ. ಶಾಸಕ ಭರತ್ ಶೆಟ್ಟರೂ ಹೇಳಿಕೆ ನೀಡಿದ್ದಾರೆ‌. ಈ ನಡುವೆ ದೂರುದಾರೆ ಹುಡುಗಿಯು ಶಾರೀಕ್, ಹಾಗೂ ಆತನ ತಾಯಿಯ ಹೆಸರು ಬರೆದಿಟ್ಟು ಡೋಲೋ ಮಾತ್ರೆಗಳನ್ನು ನುಂಗಿ ಅಸ್ವಸ್ಥಳಾಗಿದ್ದಾಳೆ. ಬಜರಂಗ ದಳ, ಬಿಜೆಪಿ ನಾಯಕರು ಎಂಟ್ರಿ ನೀಡಿ ಇಡೀ ಪ್ರಕರಣಕ್ಕೆ ಕೋಮುಬಣ್ಣ ಹಚ್ಚಿ ಉದ್ರೇಕಕಾರಿ ಹೇಳಿಕೆ ನೀಡಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ತರುವಾಯ ಒತ್ತಡಕ್ಕೊಳಗಾದ ಸುರತ್ಕಲ್ ಪೊಲೀಸರು ಶಾರೀಕ್ ನನ್ನು ಹೇಳಿಕೆ ಪಡೆಯುವ ನೆಪದಲ್ಲಿ ಮತ್ತೊಮ್ಮೆ ಠಾಣೆಗೆ ಕರೆಸಿದ್ದಾರೆ. ಹುಡುಗಿಯ ಹೇಳಿಕೆ ಆಧಾರದಲ್ಲಿ ಹೊಸ FIR ಹಾಕಿ ನೇರ ಜೈಲಿಗೆ ಕಳುಹಿಸಿದ್ದಾರೆ.

ಈಗ ಊರಿಡೀ ಇದೇ ಸದ್ದು. ಲವ್ ಜಿಹಾದ್, ಹಿಂದು ಹುಡುಗಿಯರ ಹಿಂದೆ ಬಿದ್ದಿರುವ ಮುಸ್ಲಿಂ ಯುವಕರು ಎಂಬ ಕಲರ್ ಕತೆಗಳು ಎಗ್ಗಿಲ್ಲದೆ ಹರಿದಾಡುತ್ತಿದೆ. ಒಂದೆರಡು ಸ್ಥಳೀಯ ಖಾಸಗಿ ವಾಹಿನಿಗಳು, ಯೂ ಟ್ಯೂಬ್ ಚಾನಲ್ ಗಳು ಕೆಂಡ ಉರಿದು ಬೆಂಕಿ ಏಳಲಿ ಎಂಬಂತೆ ಗಾಳಿ ಹಾಕುತ್ತಿವೆ. ಹುಡುಗಿಯ ದೂರಿನಲ್ಲಿ, ಹ್ಯಾಕ್ ಆದ ಮೆಸೆಂಜರ್ ನಲ್ಲಿ ಎಲ್ಲಿಯೂ ಕಾಣಿಸದ “24 ತುಂಡು ಮಾಡುವೆ” ಎಂದು ಬೆದರಿಸಿದ್ದಾರೆ ಎಂಬ ವಾಕ್ಯ ಸೃಷ್ಟಿಯಾಗಿದೆ‌. ಇದು ಬಜರಂಗ ದಳದ ಮುಖಂಡರ ಹೇಳಿಕೆಯಲ್ಲಿ, ಸ್ಥಳೀಯ ವಾಹಿನಿಗಳಲ್ಲಿ ಪ್ರಸಾರಗೊಂಡು ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಲು ಶತ ಪ್ರಯತ್ನ ನಡೆಸಲಾಗಿದೆ. ಜನತೆ ಒಂದಿಷ್ಟು ಆತಂಕಕ್ಕೆ ಒಳಗಾಗುವಂತಾಗಿದೆ.

ಸುರತ್ಕಲ್ ಗೆ, ಮಂಗಳೂರಿಗೆ ಈ ರೀತಿ ಪ್ರಕರಣಗಳು ದಿಢೀರ್ ಎಂಬಂತೆ ಮತೀಯ ಬಣ್ಣ ಪಡೆದು ಗಂಭೀರ ಸ್ವರೂಪ ಪಡೆಯುವುದು ಹೊಸದಲ್ಲ. ಈ ಮೆಸೆಂಜರ್ ಹ್ಯಾಕಿಂಗ್, ಪ್ರೀತಿಸಲು ಬೆದರಿಕೆ ಒಡ್ಡಿದ ಪ್ರಕರಣ ಪ್ರಾಮಾಣಿಕ ತನಿಖೆಗೆ ಒಳಪಡಬೇಕು. ಶಾರೀಕ್ ಪಾತ್ರ ಇದರಲ್ಲಿ ಇದ್ದಲ್ಲಿ ಯಾವ ಮುಲಾಜೂ ಇಲ್ಲದೆ ಕಾನೂನು ಕ್ರಮಗಳು ಜರುಗಬೇಕು. ಆದರೆ, ಬಿಜೆಪಿ ಶಾಸಕರ, ಬಜರಂಗ ದಳದ ಮುಖಂಡರ ಒತ್ತಡದ ಕಾರಣಕ್ಕೆ ಸಾಕ್ಷ್ಯಾಧಾರಗಳಿಲ್ಲದೆ ಶಾರೀಕ್ ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತೆ ಆಗಬಾರದು. ಬಜರಂಗ ದಳ ಆರೋಪಿಸಿದೆ, ಬೆದರಿಕೆ ಹಾಕುತ್ತಿದೆ ಎಂದ ತಕ್ಷಣ ಮುಸ್ಲಿಂ ಯುವಕರನ್ನು ವಿಚಾರಣೆ, ಸಾಕ್ಷಿ, ಆಧಾರ ಯಾವುದೂ ಇಲ್ಲದೆ ಅಪರಾಧಿ ಎಂದು ತೀರ್ಮಾನಿಸಿ ಜೈಲಿಗೆ ಕಳುಹಿಸುತ್ತೀರಿ ಅಂತಾದರೆ ಅದನ್ನು ಒಪ್ಪಲು ಸಾಧ್ಯವಿಲ್ಲ, ಮೌನ ವಹಿಸಲೂ ಸಾಧ್ಯವಿಲ್ಲ.

ಮೆಸೆಂಜರ್ ಹ್ಯಾಕಿಂಗ್ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ್ದು, ಶಾರೀಕ್ ತಪ್ಪಿತಸ್ಥ ಆದರೆ ತಾಂತ್ರಿಕ ತನಿಖೆಯಲ್ಲಿ ಅದು ಬಹಿರಂಗ ಆಗಲೇಬೇಕು, ಆತನೇ ತಪ್ಪಿತಸ್ಥನಾಗಿದ್ದರೆ ಇನ್ನಷ್ಟು ಕಾನೂನು ಕ್ರಮಗಳು ಆತನ ಮೇಲೆ ಜರುಗಲಿ‌ ಆತನಲ್ಲದಿದ್ದರೆ ನೈಜ ಆರೋಪಿಗಳ ಪತ್ತೆ ಆಗಲೇಬೇಕು, ಹುಡುಗಿಗೆ ಮಾನಸಿಕ ಹಿಂಸೆ ನೀಡಿದ, ಬೆದರಿಸಿದವರು ಜೈಲು ಸೇರಲೆಬೇಕು‌.

ಹ್ಯಾಕ್ ಮಾಡಿ ಸಂದೇಶ ಕಳುಹಿಸಿದವರನ್ನು ಪತ್ತೆ ಹಚ್ಚುವುದು ಸೈಬರ್ ವಿಂಗ್ ಗೆ ನೀರು ಕುಡಿದಷ್ಟು ಸಲೀಸು ಕೆಲಸ. ಸುರತ್ಕಲ್, ಮಂಗಳೂರು ಪೊಲೀಸರಿಗೆ ಆ ಸಾಮರ್ಥ್ಯ ಇದೆ. ಪೊಲೀಸರು ಈ ಪ್ರಕರಣದಲ್ಲಿ ಏನೇನು ನಡೆದಿದೆ, ಯಾರ ಪಾತ್ರ ಏನೆಲ್ಲಾ ಇದೆ ಎಂಬುದನ್ನು ತನಿಖೆ ನಡೆಸಿ ಆದಷ್ಟು ಬೇಗ ಜನತೆಯ ಮುಂದಿಡಬೇಕು. ತನಿಖೆ ನ್ಯಾಯಯುತವಾಗಿ ನಡೆದಿದೆ ಎಂದು ದೂರುದಾರರಿಗೆ, ಜೈಲು ಸೇರಿದವರಿಗೆ, ಸುರತ್ಕಲ್ ನಾಗರಿಕರಿಗೂ ಖಾತ್ರಿ ಪಡಿಸಬೇಕು ಎಂದು ಪೊಲೀಸ್ ಇಲಾಖೆಯನ್ನು ಬಲವಾಗಿ ಆಗ್ರಹಿಸುತ್ತೇವೆ‌.