‘ಸೈನಿಕ’ ಕಾಂಗ್ರೆಸ್ ಸೇರ್ಪಡೆ ರಹಸ್ಯ..ಆರು ತಿಂಗಳ ಹಿಂದೆನೇ ಡಿಕೆಶಿ ಬ್ರದರ್ಸ್ ಸ್ಕೆಚ್.! ಮತ್ತೊಮ್ಮೆ ಮ್ಯಾಚ್ ಫಿಕ್ಸಿಂಗ್ ಗೆ ಬಲಿಯಾಗ್ತರಾ ನಿಖಿಲ್.?

ರಾಜ್ಯ

ರಾಜ್ಯದಲ್ಲಿ ಸಂಡೂರು, ಶಿಗ್ಗಾವಿಗಿಂತಲೂ ಅತೀ ಹೆಚ್ಚು ಕುತೂಹಲ ಮೂಡಿಸಿರುವ ಕ್ಷೇತ್ರವಿದ್ದರೆ ಅದು ಚನ್ನಪಟ್ಟಣ. ಬಿಜೆಪಿಯಲ್ಲಿದ್ದ ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಪಾಳಯಕ್ಕೆ ಜಿಗಿದು ಅಭ್ಯರ್ಥಿಯಾದರೆ, ಎನ್ ಡಿಎ ಮೈತ್ರಿಕೂಟದಿಂದ ನಿಖಿಲ್ ಕುಮಾರಸ್ವಾಮಿ ಮತ್ತೊಮ್ಮೆ ಅಗ್ನಿಪರೀಕ್ಷೆಗೆ ಇಳಿದಿದ್ದಾರೆ. ಇದು ನಿಖಿಲ್ ಕುಮಾರಸ್ವಾಮಿ ಗೆ ಮಾಡು ಇಲ್ಲವೇ ಮಡಿ ಹೋರಾಟ. ಜೊತೆಗೆ ಕುಮಾರಸ್ವಾಮಿಗೆ ಪ್ರತಿಷ್ಠೆಯ ಪ್ರಶ್ನೆ. ಇತ್ತ ಡಿಕೆಶಿ ಬ್ರದರ್ಸ್ ಗೆ ಸೇಡು ತೀರಿಸುವ ತವಕ. ಒಟ್ಟಾರೆ ಕದನ ಮದಗಜಗಳ ಕಾದಾಟವಾಗಿದೆ.

ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ರಹಸ್ಯದ ಅಸಲಿಯತ್ತು ತಿಳಿಯಬೇಕಾದರೆ ಆರು ತಿಂಗಳ ಹಿಂದೆ ಹೋಗಬೇಕಾಗಿದೆ. ಕಾಂಗ್ರೆಸ್ ಸೇರ್ಪಡೆ ಸೈನಿಕನ ಏಕಾಏಕಿಯ ತೀರ್ಮಾನ ಎಂದು ನಾವು ಊಹಿಸಿಕೊಂಡರೆ ಅದು ತಪ್ಪು ಕಲ್ಪನೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬಿಗ್ ಶಾಕ್ ಕಾದಿತ್ತು. ಆ ಚುನಾವಣೆಯಲ್ಲಿ ಡಿ.ಕೆ ಸುರೇಶ್ ಸೋತು ಡಾ.ಮಂಜುನಾಥ್ ಗೆದ್ದಿದ್ದು ಬೇರೆ ಮಾತು. ಆದರೆ ಚನ್ನಪಟ್ಟಣದಲ್ಲಿ ಬಿಜೆಪಿ ನಿರೀಕ್ಷಿಸಿದ್ದ ಮತಗಳೇ ದೊರೆಯಲಿಲ್ಲ. ಅವೆಲ್ಲವೂ ಕಾಂಗ್ರೆಸ್ ಪಾಳಯಕ್ಕೆ ಹೋಗಿತ್ತು. ಇದರ ಹಿಂದೆ ಕೈಯಾಡಿಸಿದ್ದು ಸೈನಿಕ ಯೋಗೇಶ್ವರ್. ಅವತ್ತೇ ಯೋಗೇಶ್ವರ್ ಬಿಜೆಪಿಯಿಂದ ಒಂದು ಕಾಲು ಹಿಂದಕ್ಕಿಟ್ಟು ಡಿಕೆಶಿ ಬ್ರದರ್ಸ್ ಜೊತೆ ಕೈ ಜೋಡಿಸಿದ್ದರು. ಈ ನಡೆಯಿಂದ ಬಿಜೆಪಿ ಕೂಡ ಈ ಬಾರಿ ಯೋಗೇಶ್ವರ್ ಗೆ ಟಿಕೆಟ್ ದಕ್ಕಿಸಲು ಪೂರ್ಣ ಪ್ರಯತ್ನ ಮಾಡಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಡಿಕೆ ಸುರೇಶ್ ಸೋಲಿನಿಂದ ಡಿಕೆಶಿ ಕಂಗೆಟ್ಟಿದ್ದರು. ಮುಂದೆ ನಡೆಯುವ ಉಪ ಚುನಾವಣೆಯಲ್ಲಿ ಜೆಡಿಎಸ್ ಗೆ ತಕ್ಕ ಪಾಠ ಕಲಿಸಬೇಕೆಂದು ಆಗಲೇ ನಿರ್ಧರಿಸಿದ್ದರು. ಡಿಕೆ ಸುರೇಶ್ ಅಭ್ಯರ್ಥಿಯಾಗುವುದಕ್ಕಿಂತ ಯೋಗೇಶ್ವರ್ ಕಾಂಗ್ರೆಸ್ ಪಕ್ಷದಿಂದಲೇ ಅಭ್ಯರ್ಥಿಯಾದರೆ ಜೆಡಿಎಸ್ ಗೆ ಮರ್ಮಾಘಾತ ಆಗಬಹುದು ಎಂದು ನಿರ್ಧರಿಸಿದ್ದರು. ಕೋಟಿಯ ವ್ಯವಹಾರವೂ ನಡೆದಿದೆ. ಮಂತ್ರಿಯ ಆಫರ್ ನೀಡಲಾಗಿದೆ. ಚುನಾವಣೆಯ ಹೊಣೆ, ಸಂಪನ್ಮೂಲದ ಎಲ್ಲಾ ಹೊಣೆ ಯನ್ನು ಡಿಕೆಶಿ ಬ್ರದರ್ಸ್ ವಹಿಸಿಕೊಳ್ಳುವುದಾಗಿ ಹೇಳಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಮಂತ್ರಿಯಾಗುವ ಅವಕಾಶವೂ ಸಿಗಲಿದೆ. ಬಿಜೆಪಿ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಅನ್ನುವ ಅಸಮಾಧಾನವೂ ಇತ್ತು. ಎಲ್ಲವನ್ನೂ ಅಳೆದು ತೂಗಿ ಸೈನಿಕ ಅಂದೇ ನಿರ್ಧರಿಸಿ ಬಿಟ್ಟಿದ್ದರು. ಆದರೆ ಈ ವಿಚಾರವನ್ನು ಗೌಪ್ಯವಾಗಿಯೇ ಇಡಲಾಗಿತ್ತು. ಎಲ್ಲವೂ ಅಂದುಕೊಂಡಂತೆ ಆದುದರಿಂದ ಡಿಕೆಶಿ ಬ್ರದರ್ಸ್ ಚನ್ನಪಟ್ಟಣದಲ್ಲಿ ಮೂರು ತಿಂಗಳಿನಿಂದ ಬಹಿರಂಗವಾಗಿ ತಮ್ಮ ಚುನಾವಣಾ ರಣತಂತ್ರ ಹೆಣೆಯಲು ಆರಂಭಿಸಿದ್ದರು. ಡಿಕೆಶಿ ನಾನೇ ಅಭ್ಯರ್ಥಿ ಎಂದು ವಿರೋಧಿಗಳನ್ನು ಕನ್ ಫ್ಯೂಸ್ ನಲ್ಲಿಯೇ ಇಟ್ಟಿದ್ದರು.

ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ನಿಂದ ಡಿ ಕೆ ಸುರೇಶ್ ಅವರೇ ಸ್ಪರ್ಧಿಸಲಿದ್ದಾರೆ ಅಂದುಕೊಂಡಿದ್ದರು. ಯೋಗೇಶ್ವರ್ ಪಕ್ಷ ಬಿಟ್ಟು ಹೋಗಲ್ಲ ಅಂತ ನಿರೀಕ್ಷೆ ಇಟ್ಟಿದ್ದರು. ಆದರೆ ನಾಮಿನೇಷನ್ ದಿನದಂದು ಯೋಗೇಶ್ವರ್ ನೀಡಿದ ಬಿಗ್ ಶಾಕ್ ಗೆ ಕುಮಾರಸ್ವಾಮಿ ಗಲಿಬಿಲಿಗೊಂಡಿದ್ದರು. ಜಯಮುತ್ತು ಗೆ ಟಿಕೆಟ್ ನೀಡಿದರೆ ಶಸ್ತ್ರ ತ್ಯಾಗ ಮಾಡಿದಂತೆ ಅಂದುಕೊಂಡ ಕುಮಾರಸ್ವಾಮಿ ಕೊನೆಗೆ ಅನಿವಾರ್ಯವಾಗಿ ಪುತ್ರ ನಿಖಿಲ್ ಕುಮಾರಸ್ವಾಮಿ ಯವರನ್ನು ಕಣಕ್ಕೆ ಇಳಿಸುವ ಸಂದರ್ಭ ಒದಗಿಬಂತು.

ಯೋಗೇಶ್ವರ್, ನಿಖಿಲ್ ಕುಮಾರಸ್ವಾಮಿ ಇಬ್ಬರೂ ಸಿನಿಮಾರಂಗದ ಕಲಾವಿದರೇ. ಯೋಗೇಶ್ವರ್ ಸೈನಿಕ ಅನ್ನುವ ಖ್ಯಾತಿ ಪಡೆದವರು. ನಿಖಿಲ್ ಕುಮಾರಸ್ವಾಮಿ ಕುರುಕ್ಷೇತ್ರದಲ್ಲಿ ಅಭಿಮನ್ಯುವಿನ ಪಾತ್ರದಲ್ಲಿ ನಟಿಸಿ ಸೈ ಅನಿಸಿಕೊಂಡವರು. ನಿಖಿಲ್ ತಮ್ಮ ಹಿಂದಿನ ಎರಡು ಚುನಾವಣೆಗಳಲ್ಲಿ ಸಾಕ್ಷಾತ್ ಅಭಿಮನ್ಯುವಿನಂತೆಯೇ ಚಕ್ರವ್ಯೂಹ ಭೇದಿಸಲಾಗದೆ ಸೋಲಿಗೆ ಶರಣಾದವರು. ಮಂಡ್ಯದಲ್ಲಿ ಮಿತ್ರಪಕ್ಷವಾಗಿದ್ದ ಕಾಂಗ್ರೆಸ್ ನಿಂದ ರೂಪಿಸಲ್ಪಟ್ಟ ಷಡ್ಯಂತ್ರಕ್ಕೆ ನಿಖಿಲ್ ಸೋತರೆ , ರಾಮನಗರದಲ್ಲಿ ಬಿಜೆಪಿ -ಕಾಂಗ್ರೆಸ್ ಮ್ಯಾಚ್ ಫಿಕ್ಸಿಂಗ್ ಗೆ ರಾಜಕೀಯವಾಗಿ ಬಲಿಯಾದರು ಅನ್ನುವುದು ಇತಿಹಾಸ. ಈ ಬಾರಿ ಕುಮಾರಸ್ವಾಮಿ ಕೇಂದ್ರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿದ್ದಾರೆ. ರಾಜ್ಯದ ಕೆಲವೊಂದು ಬಿಜೆಪಿ ನಾಯಕರು ಕುಮಾರಸ್ವಾಮಿ ಯೊಂದಿಗೆ ಅಸಮಾಧಾನ ಹೊಂದಿದ್ದಾರೆ. ಈ ಎಲ್ಲ ಕೋಪ ತಾಪ ಸೈಲೆಂಟಾಗಿ ಚುನಾವಣೆಯಲ್ಲಿ ಪ್ರತಿಫಲಿಸಿದರೆ ನಿಖಿಲ್ ಮೂರನೇ ಬಾರಿಯೂ ಹರಕೆಯ ಕುರಿಯಾಗುವುದಂತೂ ಖಂಡಿತ.