ಅಭ್ಯರ್ಥಿಗಳ ನಿದ್ದೆಗೆಡಿಸುತ್ತಿದೆ ಡಮ್ಮಿ ಅಭ್ಯರ್ಥಿಗಳು.. ನಾಮಪತ್ರ ವಾಪಸ್ ರೇಟ್ ಫಿಕ್ಸ್.!
ಚನ್ನಪಟ್ಟಣ ಉಪ ಚುನಾವಣೆ ಅಖಾಡ ದಿನ ದಿನಕ್ಕೂ ರಂಗೇರುತ್ತಿದೆ. ಜಿದ್ದಾಜಿದ್ದಿನ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಸ್ವತಃ ಆಪರೇಶನ್ ಎಕ್ಸ್ ಫರ್ಟ್ ಎನಿಸಿಕೊಂಡ ಯೋಗೇಶ್ವರ್ ಈ ಬಾರಿ ಚುನಾವಣೆಯಲ್ಲಿ ಆಪರೇಷನ್ ಹಸ್ತ ಕಾರ್ಯಾಚರಣೆ ಮೂಲಕ ಖೆಡ್ಡಾಕ್ಕೆ ಬಿದ್ದಿದ್ದಾರೆ. ಈ ಮೂಲಕ ಎನ್ ಡಿಎ ಮೈತ್ರಿಕೂಟದ ಬಿಜೆಪಿ, ಜೆಡಿಎಸ್ ಗೆ ನಾಮಪತ್ರ ಸಲ್ಲಿಕೆ ಹಂತದಲ್ಲಿ ಬಿಗ್ ಶಾಕ್ ನೀಡಿದ್ದಾರೆ. ಕ್ಷೇತ್ರದಲ್ಲಿ ತಮ್ಮದೇ ಆದ ಮತ ಬ್ಯಾಂಕ್ ಹೊಂದಿರುವ ಯೋಗೇಶ್ವರ್ ಅವರ ಲೆಕ್ಕಾಚಾರವೇ ಬೇರೆ ಇದೆ. ತಮ್ಮ ಶಕ್ತಿ, ಸಾಮರ್ಥ್ಯ ಕುಂದದಂತೆ ನೋಡಿಕೊಂಡು ಅಹಿಂದ ಮತಗಳನ್ನು ಸೆಳೆದುಕೊಂಡರೂ ಸಾಕು ಗೆಲುವು ನಿರಾಯಾಸ.
ಚನ್ನಪಟ್ಟಣದಲ್ಲಿ ಪಕ್ಷಾಂತರ ಪರ್ವ ಮುಂದುವರಿದಿದೆ. ಯೋಗಿ ಬೆಂಬಲಿಸಿ ನೂರಾರು ಬಿಜೆಪಿ ಕಾರ್ಯಕರ್ತರು ಸಾಮೂಹಿಕವಾಗಿ ಬಿಜೆಪಿ ತೊರೆಯುತ್ತಿದ್ದಾರೆ. ಈ ಬೆಳವಣಿಗೆ ಎನ್ ಡಿಎ ಮೈತ್ರಿಕೂಟಕ್ಕೆ ತೀವ್ರ ಮುಜುಗರವನ್ನು ತಂದಿಟ್ಟಿದೆ . ಬಿಜೆಪಿ ಎಸ್ಸಿ/ ಎಸ್ಟಿ ಚನ್ನಪಟ್ಟಣ ನಗರ, ಗ್ರಾಮಾಂತರ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ತಮ್ಮ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದು ಯೋಗಿ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ.
ತಾಲೂಕು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಎನ್ ಬಿ ಸಿದ್ದರಾಮಯ್ಯ ಹಾಗೂ ಇತರರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಯೋಗೇಶ್ವರ್ ಅವರ ಜೊತೆ ಗುರುತಿಸಿಕೊಂಡವರು ಹಾಗೂ ಅವರೊಂದಿಗೆ ಕಾಂಗ್ರೆಸ್ ಗೆ ಹೋಗಿರುವ ಬಿಜೆಪಿ ಪದಾಧಿಕಾರಿಗಳನ್ನು ತಕ್ಷಣದಿಂದಲೇ ಉಚ್ಛಾಟಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ ಎನ್ ಆನಂದಸ್ವಾಮಿ ಆದೇಶ ಹೊರಡಿಸಿದ್ದಾರೆ.
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಬರೋಬ್ಬರಿ 51 ಮಂದಿ ಉಮೇದುವಾರಿಕೆ ಅರ್ಜಿ ಸಲ್ಲಿಸಿದ್ದಾರೆ. ಇಷ್ಟೂ ಸಂಖ್ಯೆಯ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದೇ ಆದಲ್ಲಿ 4 ಮತಯಂತ್ರಗಳನ್ನು ಜೋಡಿಸಿಡದೇ ಅನ್ಯ ಮಾರ್ಗವಿಲ್ಲ. ಇದು ಸಹಜವಾಗಿಯೇ ಚುನಾವಣಾ ಆಯೋಗಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಇದುವರೆಗಿನ ಚುನಾವಣೆಯಲ್ಲಿ ಅಬ್ಬಬ್ಬಾ ಅಂದರೆ 20 ಮಂದಿ ಕಣದಲ್ಲಿದ್ದುದೇ ಹೆಚ್ಚು. ಆದರೆ ಈ ಬಾರಿ ಆ ಸಂಖ್ಯೆ 50 ರ ಗಡಿ ದಾಟಿದೆ. ಪ್ರಜಾಕೀಯ, ಐಪಿಸಿಪಿ ಸೇರಿದಂತೆ 7 ಮಂದಿ ಪಕ್ಷದಿಂದ ಸ್ಪರ್ದಿಸಿದರೇ ಉಳಿದವರು ಪಕ್ಷೇತರರಾಗಿ ಸ್ಪರ್ಧಿಸಿದ ಡಮ್ಮಿ ಅಭ್ಯರ್ಥಿಗಳು. ಅಕ್ಟೋಬರ್ 30 ರವರೆಗೆ ನಾಮಪತ್ರ ವಾಪಸ್ ಪಡೆಯಲು ಸಮಯವಿದ್ದರೂ ಈ ಬೆಳವಣಿಗೆ ಗೊಂದಲ ಉಂಟಾಗಬಹುದು ಅನ್ನುವ ಕಾರಣಕ್ಕೆ ಅಖಾಡದಲ್ಲಿ ಜಿದ್ದಾಜಿದ್ದಿನ ಸೆಣೆಸಾಟಕ್ಕೆ ಇಳಿದಿರುವ ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಅವರನ್ನು ನಿದ್ದೆಗೆಡಿಸಿದೆ.
ಯಾರೆಲ್ಲ ತಮ್ಮ ಮತ ಬುಟ್ಟಿಗೆ ಕೈ ಹಾಕಬಹುದೋ ಅಂಥವರನ್ನು ಪಟ್ಟಿ ಮಾಡಿಕೊಂಡು , ನಾಮಪತ್ರ ವಾಪಸ್ ಮಾಡಿಸುವ ನಿಟ್ಟಿನಲ್ಲಿ ಎರಡೂ ಪಾಳೆಯದವರು ಈಗಾಗಲೇ ನಿರತರಾಗಿದ್ದಾರೆ. ಪಕ್ಷಾಂತರಕ್ಕೆ ರೇಟ್ ಫಿಕ್ಸ್ ಆದಂತೆಯೇ ನಾಮಪತ್ರ ವಾಪಸಿಗೂ ಭರ್ಜರಿ ಧಾರಣೆ ನಿಗದಿಗೊಳ್ಳುತ್ತಿದೆ. 50 ಸಾವಿರದಿಂದ 2 ಲಕ್ಷದವರೆಗೂ ರೇಟ್ ಫಿಕ್ಸ್ ಆಗಿದೆ. ಕೆಲವರು ಈಗಾಗಲೇ ಖೆಡ್ಡಾಕ್ಕೆ ಬಿದ್ದಿದ್ದರೆ, ಮತ್ತೆ ಕೆಲವರು ರೇಟ್ ಹೆಚ್ಚಿಸಿಕೊಳ್ಳುವ ಉಮೇದಿನಲ್ಲಿ ಹಗ್ಗಜಗ್ಗಾಟಕ್ಕೆ ಇಳಿದಿದ್ದಾರೆ. ಮತೀಯತೆ ಆಧಾರದ ಮೇಲೆ ಮತ ವಿಭಜಿಸಬಹುದು ಎನ್ನಬಹುದಾದ ಅಭ್ಯರ್ಥಿಯನ್ನು ವಾಪಸ್ ತೆಗೆಸಲು ಕಾಂಗ್ರೆಸ್, ಕಣದಲ್ಲಿ ಉಳಿಸಲು ಜೆಡಿಎಸ್ ಸಂಪನ್ಮೂಲ ಪೂರೈಕೆಯ ಆಮಿಷಕ್ಕೂ ಇಳಿದಿರುವ ನಿದರ್ಶನವುಂಟು.