ಬಿಕರ್ನಕಟ್ಟೆ-ಸಾಣೂರು ರಾಷ್ಟ್ರೀಯ ಹೆದ್ದಾರಿ 169 ಕಾಮಗಾರಿ ವೈಜ್ಞಾನಿಕವಾಗಿ ನಡೆಸಲು, ಟೋಲ್ ಗೇಟ್ ನಿರ್ಮಾಣದ ಸಂದರ್ಭ ನಿಯಮ ಪಾಲಿಸಲು, ಅಕ್ರಮ, ಸ್ವಜನಪಕ್ಷಪಾತಗಳ ಕುರಿತು ತನಿಖೆ ನಡೆಸಲು ಆಗ್ರಹಿಸಿ ನಿರ್ಣಯ

ಕರಾವಳಿ

ಕೆತ್ತಿಕಲ್ ಗುಡ್ಡ ಕಡಿದಿರುವುದು ಅಕ್ರಮ, ಕೈಕಂಬ ಜಂಕ್ಷನ್ ನಲ್ಲಿ ಮುಚ್ಚಿದ ಮೇಲ್ಸೇತುವೆ ಅವೈಜ್ಞಾನಿಕ, ಸೂರಲ್ಪಾಡಿ ಟೋಲ್ ಗೇಟ್ ನಿರ್ಮಾಣ ನಿಯಮ ಬಾಹಿರ,

ನಂತೂರು – ಮೂಡಬಿದ್ರೆ – ಸಾಣೂರು ರಾಷ್ಟ್ರೀಯ ಹೆದ್ದಾರಿ 169 ಅಗಲೀಕರಣ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಕೆಲವೆಡೆ ಭೂ ಸ್ವಾಧೀನದ ಸಮಸ್ಯೆಗಳನ್ನು ಇನ್ನೂ ಪರಿಹರಿಸಲಾಗಿಲ್ಲ. ಕೈಕಂಬ ಜಂಕ್ಷನ್ ನಲ್ಲಿ ಮುಚ್ಚಿದ ಮೇಲ್ಸೇತುವೆ ನಿರ್ಮಾಣ ಅವೈಜ್ಞಾನಿಕವಾಗಿದ್ದು, ಇಡೀ ಕೈಕಂಬ ಪೇಟೆಯ ವ್ಯಾಪಾರ, ವ್ಯವಹಾರಗಳು ನಷ್ಟ ಹೊಂದುವ ಭೀತಿ ಎದುರಾಗಿದೆ‌. ಗುರುಪುರ ಪೇಟೆಯನ್ನು ಉಳಿಸುವ ಕಾರಣವನ್ನು ಮುಂದಿಟ್ಟು ಸುತ್ತುಬಳಸಿ ಬೈಪಾಸ್ ರಸ್ತೆ ನಿರ್ಮಿಸುತ್ತಿರುವುದರ ಹಿಂದೆ ಸ್ವಜನ ಪಕ್ಷಪಾತ, ಪ್ರಭಾವಿ ರಾಜಕಾರಣಿಗಳನ್ನು ಒಳಗೊಂಡ ರಿಯಲ್ ಎಸ್ಟೇಟ್ ಲಾಭಿಗಳ ಹಿತಾಸಕ್ತಿಗಳು ಇದರ ಹಿಂದೆ ಅಡಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದಲ್ಲದೆ, ಅನವಶ್ಯಕವಾದ ಬೈಪಾಸ್ ರಸ್ತೆ ನಿರ್ಮಾಣದಿಂದ ಹೆದ್ದಾರಿ ಖರ್ಚು ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇದರಿಂದ ಟೋಲ್ ದರ ದುಬಾರಿಗೊಳ್ಳಲಿದೆ. ಕೆತ್ತಿಕಲ್ ನಲ್ಲಿ ಅಪಾಯಕಾರಿಯಾಗಿ ಬೆಟ್ಟವನ್ನು ಕಡೆದಿರುವುದು ಭೂಕುಸಿತದ ಭೀತಿಯ ಜೊತೆಗೆ ಹಲವು ಕುಟುಂಬಗಳನ್ನು ಬೀದಿಗೆ ತಳ್ಳಿದೆ.

ಇದಲ್ಲದೆ, ಗಂಜಿಮಠದ ಸಮೀಪದ ಸೂರಲ್ಪಾಡಿಯಲ್ಲಿ ಟೋಲ್ ಗೇಟ್ ನಿರ್ಮಾಣಕ್ಕೆ ಮುಂದಾಗಿರುವುದು ಹೆದ್ದಾರಿ ಪ್ರಾಧಿಕಾರದ ಟೋಲ್ ಸಂಗ್ರಹ ಕೇಂದ್ರಗಳ ನಿರ್ಮಾಣದ ನಿಯಮಗಳನ್ನು ಉಲ್ಲಂಘಿಸುತ್ತದೆ. ಎರಡು ಟೋಲ್ ಗೇಟ್ ಗಳ ನಡುವೆ 60 ಕಿ ಮೀ ಅಂತರ ಇರಬೇಕು ಎಂಬುದು ಹೆದ್ದಾರಿ ಪ್ರಾಧಿಕಾರದ ನಿಯಮವಾಗಿದೆ. ಇದನ್ನು ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಖುದ್ದಾಗಿ ಲೋಕಸಭೆಯಲ್ಲಿ ಹೇಳಿರುತ್ತಾರೆ. ಆದರೆ, ಗಂಜಿಮಠದ ಸಮೀಪ ಸೂರಲ್ಪಾಡಿ ಬಳಿ ಟೋಲ್ ಗೇಟ್ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳ ಹೆಜಮಾಡಿ ಟೋಲ್ ಗೇಟ್ ನಿಂದ ಸುಮಾರು 48 ಕಿ ಮೀ, ತಲಪಾಡಿ ಟೋಲ್ ಗೇಟ್ ನಿಂದ 37 ಕಿ.ಮೀ, ಬ್ರಹ್ಮರಕೂಟ್ಲು ಟೋಲ್ ಗೇಟ್ ನಿಂದ ಕೇವಲ 35 ಕಿ.ಮೀ ಅಂತರದಲ್ಲಿದೆ. ಈ ಪ್ರಕಾರ ಗಂಜಿಮಠದ ಸೂರಲ್ಪಾಡಿ ಟೋಲ್ ಗೇಟ್ ನಿರ್ಮಾಣ ನಿಯಮ ಬಾಹಿರವಾಗುತ್ತದೆ. ಇಲ್ಲಿ ವಾಹನ ಸವಾರರಿಂದ ಟೋಲ್ ಸಂಗ್ರಹಿಸುವುದು ಅಕ್ರಮವಾಗುತ್ತದೆ.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಟೋಲ್ ಸಂಗ್ರಹ ಕೇಂದ್ರವನ್ನು ಗಂಜಿಮಠದ ಸೂರಲ್ಪಾಡಿಯಲ್ಲಿ ನಿರ್ಮಿಸುವುದನ್ನು ಕೈ ಬಿಡಬೇಕು, ಸೂಕ್ತ ಅಂತರದಲ್ಲಿ ನಿಯಮಗಳನ್ನು ಪಾಲಿಸಿ ನಿರ್ಮಿಸಬೇಕು ಎಂದು ಆಗ್ರಹಿಸುತ್ತೇವೆ.

ಹಾಗೆಯೆ, ಕೆತ್ತಿಕಲ್ ಗುಡ್ಡ ಅಕ್ರಮವಾಗಿ ಕಡಿದಿರುವ ಪ್ರಕರಣದ ತನಿಖಾ ವರದಿ ಬಹಿರಂಗ ಪಡಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು, ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸಬೇಕು, ಗುರುಪುರ ಬಳಿ ಬೈಪಾಸ್ ರಸ್ತೆ ನಿರ್ಮಾಣದ ಕುರಿತಾದ ಆರೋಪಗಳನ್ನು ತನಿಖೆಗೆ ಒಳಪಡಿಸಬೇಕು. ಕೈಕಂಬ ಪೇಟೆಯಲ್ಲಿ ಮುಚ್ಚಿದ ಮೇಲ್ಸೇತುವೆ ಬದಲಿಗೆ ತೆರೆದ ಮೇಲ್ಸೇತುವೆ ನಿರ್ಮಣ ಮಾಡಬೇಕು, ಹಾಗೂ ಬೈಪಾಸ್, ಮೇಲ್ಸೇತುವೆ, ಕ್ರಾಸಿಂಗ್ ಗಳನ್ನು ವೈಜ್ಞಾನಿಕವಾಗಿ ನಡೆಸಬೇಕು, ಹೆದ್ದಾರಿ ಅಗಲೀಕರಣ ಕಾಮಗಾರಿಯನ್ನು ವೇಗವಾಗಿ ಮುಗಿಸಬೇಕು, ಕಾಮಗಾರಿ ಸಂದರ್ಭ ಸುತ್ತಲಿನ ಜನತೆಗೆ, ವಾಹನ ಸವಾರರಿಗೆ ಆಗುವ ಸಮಸ್ಯೆಗಳನ್ನು ಪರಿಹರಿಸುವುದು, ಸಹಾನುಭೂತಿಯಿಂದ ನಡೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದು ಆಗ್ರಹಿಸಿ ಕುಪ್ಪೆಪದವಿನ ನಾರಾಯಣ ಗುರು ಸಮುದಾಯ ಭವನದಲ್ಲಿ ಆಯೋಜಿಸಲಾದ ಸಿಪಿಐಎಂ ಗುರುಪುರ ವಲಯ ಸಮ್ಮೇಳನ ನಿರ್ಣಯವನ್ನು ಅಂಗೀಕರಿಸಿದೆ.