ವಿದ್ಯಾರಣ್ಯರೂ, ಪೇಜಾವರರೂ ಮತ್ತು ಹರಿಪ್ರಸಾದರೂ….

ಕರಾವಳಿ

ರಾಜಕೀಯ ಅರಗಿಸಿಕೊಳ್ಳಲಾಗದ ಈಗಿನ ಪೇಜಾವರ ಸ್ವಾಮೀಜಿಗಳು ದ್ವೈತ ಪ್ರಚಾರ, ಕೃಷ್ಣ ಕೈಂಕರ್ಯ ಮಾಡುವುದು ಬಿಟ್ಟು ರಾಜಕೀಯ ಮಾಡುವುದು ಯಾಕೆ.?

ಸ್ವಾಮೀಜಿಗಳು ರಾಜಕೀಯ ಮಾತನಾಡಿದ ಬಳಿಕ ರಾಜಕೀಯ ಶೈಲಿಯ ಟೀಕೆಯನ್ನು ಎದುರಿಸಬೇಕೇ ವಿನಹ ಜಾತಿ ಪರದೆಯ ಹಿಂದೆ ಅವಿತು ಅತ್ತು ರಕ್ಷಣೆಗಾಗಿ ಯಾರನ್ನೋ ಪ್ರಚೋದಿಸಬಾರದು.

✍️. ನವೀನ್ ಸೂರಿಂಜೆ. ಪತ್ರಕರ್ತರು

ಸ್ವಾಮಿಗಳು ರಾಜಕೀಯ ಮಾತನಾಡಿದ ಬಳಿಕ ರಾಜಕೀಯ ಪ್ರತಿಕ್ರಿಯೆ ಕೇಳಲು ತಯಾರಿರಬೇಕು. ಪ್ರತಿಕ್ರಿಯೆ ಬಂದಾಗ ತನ್ನ ಸಮುದಾಯವನ್ನು ರಾಜಕಾರಣಿ ವಿರುದ್ದ ಎತ್ತಿಕಟ್ಟುವ ವ್ಯಕ್ತಿಗಳು ರಾಜಕೀಯ ಮಾತನಾಡಬಾರದು. ದಿವಂಗತ ಪೇಜಾವರ ವಿಶ್ವೇಶತೀರ್ಥರು ಬದುಕಿಡೀ ರಾಜಕೀಯ ಮಾತನಾಡಿದರು. ಆದರೆ ಯಾವತ್ತೂ ಬ್ರಾಹ್ಮಣ ಸಮುದಾಯವನ್ನು ತನ್ನ ರಕ್ಷಣೆಗಾಗಿ ಗುರಾಣಿ ಮಾಡಿಕೊಳ್ಳಲಿಲ್ಲ.

ಪೇಜಾವರ ಸ್ವಾಮೀಜಿ ಯಾಕೆ ರಾಜಕಾರಣ ಮಾತನಾಡಕೂಡದು ? ವಿದ್ಯಾರಣ್ಯ ಸ್ವಾಮೀಜಿಗಳು ಹಕ್ಕ ಬುಕ್ಕರ ಸಾಮ್ರಾಜ್ಯವನ್ನೇ ಕಟ್ಟಲಿಲ್ಲವೇ ? ಎಂದು ಬ್ರಾಹ್ಮಣರ ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ವಿರುದ್ಧ ಹರಿಹಾಯ್ದಿದ್ದಾರೆ. ಇದೇ ಪ್ರಶ್ನೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕೂಡಾ ಕೇಳಿದ್ದರು.

ವಿದ್ಯಾರಣ್ಯರು ಹಕ್ಕಬುಕ್ಕರ ಮೂಲಕ ವಿಜಯನಗರ ರಾಜ್ಯ ಸ್ಥಾಪನೆ ಮಾಡಿದರು ಎಂಬುದು ಕಟ್ಟು ಕತೆ. ವಿದ್ಯಾರಣ್ಯ ಸ್ವಾಮಿಗಳು ವಿಜಯನಗರ ಸಾಮ್ರಾಜ್ಯ ಕಟ್ಟಿದರು ಎಂಬುದಕ್ಕೆ ಯಾವ ಶಾಸನಗಳ ಆಧಾರವೂ ಇಲ್ಲ ಎಂದು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಪ್ರಕಟಿಸಿದ ‘ವಿಜಯನಗರ ಅಧ್ಯಯನ ಸಂಪುಟ 22’ ರಲ್ಲಿ ಬರೆಯಲಾಗಿದೆ. ಈ ಪುಸ್ತಕಕ್ಕೆ ಆಗಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮುನ್ನುಡಿ ಬರೆದಿದ್ದಾರೆ. ಆಗಿನ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಸಿ ಟಿ ರವಿಯವರು ಸಂದೇಶ ಬರೆದಿದ್ದಾರೆ.

ವಿದ್ಯಾರಣ್ಯರು ಶೃಂಗೇರಿ ಪೀಠಾಧಿಪತಿಗಳಾಗಿದ್ದರು. ಹಕ್ಕಬುಕ್ಕರು ಮತ್ತು ವಿಜಯನಗರದ ಅರಸರುಗಳು ಶೃಂಗೇರಿಯ ಭಕ್ತರಾಗಿದ್ದರು ಮತ್ತು ಶೃಂಗೇರಿಗೆ ಭೂದಾನಗಳನ್ನು ಮಾಡಿದ್ದರು ಎಂಬುದನ್ನು ಇತಿಹಾಸ ಹೇಳುತ್ತದೆ. ವಿಜಯನಗರ ಸಾಮ್ರಾಜ್ಯದ ರಾಜರುಗಳಿಗೆ ಶೃಂಗೇರಿ ಶ್ರೀಗಳು ಮಾರ್ಗದರ್ಶನ ನೀಡಿದ್ದಿರಬಹುದು. ಅದು ರಾಜಕೀಯ ಮಾರ್ಗದರ್ಶನವೂ ಅಲ್ಲ, ಜನಾಂಗೀಯ ದ್ವೇಷದ ಸಲಹೆಗಳೂ ಅಲ್ಲ. ಬದಲಾಗಿ, ಧಾರ್ಮಿಕ ಮಾರ್ಗದರ್ಶನ ನೀಡುತ್ತಿದ್ದರು.

ಪೇಜಾವರ ವಿಶ್ವಪ್ರಸನ್ನತೀರ್ಥರನ್ನು ವೇದಿಕೆಯಲ್ಲಿ ಕೂರಿಸಿಕೊಂಡು ವಿದ್ಯಾರಣ್ಯರ ಬಗ್ಗೆ ಮಾತನಾಡಿದ್ದೇ ಸರಿಯಲ್ಲ. ಪೇಜಾವರ ವಿಶ್ವಪ್ರಸನ್ನ ತೀರ್ಥರು ಮಾಧ್ವ ಪಂಥದವರು. ವಿದ್ಯಾರಣ್ಯರು ಶಂಕರ ಪಂಥದವರು. ವಿಜಯನಗರ ಸಾಮ್ರಾಜ್ಯದಲ್ಲಿ ವೈಷ್ಣವ ಧರ್ಮದ ಸ್ಥಾಪನೆ ಮಾಡಬೇಕು ಎಂದು ಮಾಧ್ವ ಪಂಥದ ಸ್ವಾಮೀಜಿಗಳು ಬಹಳ ಶ್ರಮಪಟ್ಟಿದ್ದರು. ಅದಕ್ಕೆ ಅಡ್ಡಿಯಾಗಿದ್ದು ಶೈವ ಧರ್ಮದ ಶಂಕರ ಪಂಥದ ಸ್ವಾಮೀಜಿ ವಿದ್ಯಾರಣ್ಯರು. ಕರಾವಳಿಯಲ್ಲಿ ಮಾಧ್ವರು ಸಫಲರಾದರೆ, ವಿಜಯನಗರ ಭಾಗದಲ್ಲಿ ಶಂಕರ ಪಂಥೀಯರು ಸಫಲರಾದರು. ವಿಜಯನಗರದಲ್ಲಿ ಶಂಕರ ಪಂಥದ ವಿದ್ಯಾರಣ್ಯರು ಧಾರ್ಮಿಕ ದಿಗ್ವಿಜಯ ಮಾಡಿದರೆ, ಕರಾವಳಿ ಭಾಗದಲ್ಲಿ ಮಾಧ್ವ ಪಂಥದ ವಾದಿರಾಜರು ದಿಗ್ವಿಜಯ ಮಾಡಿದರು. ಹಾಗಾಗಿ ವಿಜಯನಗರದಲ್ಲಿ ನಡೆದಿದ್ದು ಮಾಧ್ವ, ಶಂಕರ, ಜೈನ ಧರ್ಮಗಳ ಪ್ರಚಾರಕ್ಕಾಗಿ ನಡೆದ ಸಂಘರ್ಷವೇ ಹೊರತು ಇನ್ನೇನೂ ಅಲ್ಲ ! (ಹೆಚ್ಚಿನ ಮಾಹಿತಿಗಾಗಿ : THE HISTORY OF VIJAYANAGARA EMPIRE – M. H RAMA SHARMA – 1956 ಮತ್ತು History Of Vijayanagar The Never To Be Forgotten Empire – 1905)

ಪೇಜಾವರ ಪ್ರತಿನಿಧಿಸುವ ಮಾಧ್ವ ಬ್ರಾಹ್ಮಣರು ವಿಜಯನಗರ ವ್ಯಾಪ್ತಿಯ ಜೈನ ಬಸದಿಗಳನ್ನು ನಾಶ ಮಾಡಿಸುತ್ತಾರೆ. ಜೈನರ ಮೇಲೆ ನಡೆದ ದಾಳಿಯ ಬಗ್ಗೆ ಜೈನರು ಬುಕ್ಕರಾಯನಿಗೆ ದೂರು ಕೊಡುತ್ತಾರೆ. ಬುಕ್ಕರಾಯನು ಮಾಧ್ವ ಬ್ರಾಹ್ಮಣರಿಗೆ ಎಚ್ಚರಿಕೆ ನೀಡಿ ಬಸದಿಗಳ ಮರುಸ್ಥಾಪನೆಗೆ ಕ್ರಮ ಕೈಗೊಳ್ಳುತ್ತಾನೆ.

ವಿಜಯನಗರ ಸಾಮ್ರಾಜ್ಯದಲ್ಲಿ ವಿದ್ಯಾರಣ್ಯರು ಧರ್ಮಪ್ರಚಾರದಲ್ಲಿ ಸಫಲರಾಗಿದ್ದರಿಂದಲೇ ಮಾಧ್ವ ಸ್ವಾಮೀಜಿಗಳು ವಿಜಯನಗರದಲ್ಲಿ ಧರ್ಮ ಪ್ರಸಾರ ಮಾಡಲಾಗಲಿಲ್ಲ. ವಿದ್ಯಾರಣ್ಯರಾಗಲೀ, ವ್ಯಾಸತೀರ್ಥರಾಗಲೀ ಹಿಂದೂ ಧರ್ಮ ಸ್ಥಾಪನೆಗಾಗಿ ವಿಜಯನಗರ ಸಾಮ್ರಾಜ್ಯಕ್ಕೆ ಮಾರ್ಗದರ್ಶನ ಮಾಡಲಿಲ್ಲ. ಬದಲಾಗಿ ಬ್ರಾಹ್ಮಣ‌ ಪಂಥವೊಂದರ ಸಂಬಂಧ ಮಾರ್ಗದರ್ಶನ, ಪ್ರಚಾರ ಮಾಡಿದರು.

“ವಿಜಯನಗರ ಸಾಮ್ರಾಜ್ಯದಲ್ಲಿ ನಾಲ್ಕು ಮನೆತನಗಳ ಆಳ್ವಿಕೆಗಳು ಸೇರಿವೆ. ಮೊದಲನೆಯವರು ಹರಿಹರ-ಬುಕ್ಕ ಸಹೋದರರ ಸಂಗಮ ವಂಶದವರೆನ್ನಲಾಗಿದೆ. ಇವರನ್ನು ಸೋಲಿಸಿ ಆಳಿದವರು ಸಾಳುವ ವಂಶದವರು. ಇವರನ್ನು ಸೋಲಿಸಿ ಆಳಿದವರು ತುಳುವ ವಂಶದವರು” ಎಂದು ಇತಿಹಾಸಕಾರ ಡಾ ಆರ್ ಎಂ ಷಡಕ್ಷರಯ್ಯ ಹೇಳುತ್ತಾರೆ.

ಯಾವಾಗ ತುಳು ಭಾಷಿಕರು ವಿಜಯನಗರದ ಅರಸರಾದರೋ ಆಗ ತುಳು ಮಾತಾಡುವ ಮಾಧ್ವರು ವಿಜಯನಗರದಲ್ಲಿ ಪ್ರವರ್ಧಮಾನಕ್ಕೆ ಬಂದರು. ಆ ಬಳಿಕ ಕೃಷ್ಣದೇವರಾಯನಿಗೆ ಮಾಧ್ವ ವ್ಯಾಸತೀರ್ಥರು ಕುಲಗುರುವಾಗಿದ್ದರು

ಶಂಕರ ವಿದ್ಯಾರಣ್ಯರಾಗಲೀ, ಮಾಧ್ವ ವ್ಯಾಸತೀರ್ಥರಾಗಲೀ ಹಿಂದೂ ರಾಜಕಾರಣ ಮಾಡಲಿಲ್ಲ. ಅವರು ಧರ್ಮಪ್ರಸಾರ ಮಾಡಿದರು. ಹಿಂದೂ ಧರ್ಮದೊಳಗಿನ ಪಂಥಗಳಿಗಾಗಿ ಸಂಘರ್ಷ ನಡೆಸಿದವರು. ದ್ವೈತ – ಅದ್ವೈತ ಮತಗಳ ಪ್ರಚಾರ ನಡೆಸಿ ದೇವಸ್ಥಾನಗಳ ಪೌರೋಹಿತ್ಯವನ್ನು ತಮ್ಮವರಿಗೆ ಕೊಡಿಸಲು ಹೋರಾಟ ನಡೆಸಿದರು.

ಮಧ್ವಾಚಾರ್ಯರು
ಸ್ವಾಮಿಗಳು ರಾಜಕೀಯ ಮಾತನಾಡಿದ ಬಳಿಕ ರಾಜಕೀಯ ಪ್ರತಿಕ್ರಿಯೆ ಕೇಳಲು ತಯಾರಿರಬೇಕು. ಪ್ರತಿಕ್ರಿಯೆ ಬಂದಾಗ ತನ್ನ ಸಮುದಾಯವನ್ನು ರಾಜಕಾರಣಿ ವಿರುದ್ದ ಎತ್ತಿಕಟ್ಟುವ ವ್ಯಕ್ತಿಗಳು ರಾಜಕೀಯ ಮಾತನಾಡಬಾರದು. ದಿವಂಗತ ಪೇಜಾವರ ವಿಶ್ವೇಶತೀರ್ಥರು ಬದುಕಿಡೀ ರಾಜಕೀಯ ಮಾತನಾಡಿದರು. ಆದರೆ ಯಾವತ್ತೂ ಬ್ರಾಹ್ಮಣ ಸಮುದಾಯವನ್ನು ತನ್ನ ರಕ್ಷಣೆಗಾಗಿ ಗುರಾಣಿ ಮಾಡಿಕೊಳ್ಳಲಿಲ್ಲ. ದಿವಂಗತ ಪೇಜಾವರ ಸ್ವಾಮಿಗಳು ಟೀಕಿಸಿದರು ಮತ್ತು ಟೀಕೆಗಳನ್ನು ಸ್ವೀಕರಿಸಿದರು.

ರಾಜಕೀಯ ಅರಗಿಸಿಕೊಳ್ಳಲಾಗದ ಈಗಿನ ಪೇಜಾವರ ಸ್ವಾಮೀಜಿಗಳು ದ್ವೈತ ಪ್ರಚಾರ, ಕೃಷ್ಣ ಕೈಂಕರ್ಯ ಮಾಡುವುದು ಬಿಟ್ಟು ರಾಜಕೀಯ ಮಾಡುವುದು ಯಾಕೆ ? ಉಡುಪಿಯ ಶ್ರೀಕೃಷ್ಣಮಠದಲ್ಲಿ ಮಧ್ವಾಚಾರ್ಯರು ಸ್ಥಾಪಿಸಿದ ಎಂಟು ಮಠಗಳಿವೆ. ಆ ಪೈಕಿ ಏಳು ಮಠಗಳು ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಳ್ಳದೇ ತನ್ನದೇ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಏಳು ಮಠಗಳು ಮಧ್ವಾಚಾರ್ಯರು ಹಾಕಿಕೊಟ್ಟ ಗೆರೆಯನ್ನು ದಾಟದೆ ಅವರದ್ದೇ ಸನ್ಯಾಸಿ ಪರಂಪರೆಯನ್ನು ಪಾಲಿಸುತ್ತಿವೆ. ಪೇಜಾವರ ಎಂಬ ಏಕೈಕ ಮಠದ ಸ್ವಾಮೀಜಿ‌ ಮಾತ್ರ ಬಿಜೆಪಿ ಪಕ್ಷದ ವಕ್ತಾರರಂತೆ ಕೆಲಸ ಮಾಡುತ್ತಿದ್ದಾರೆ. ಇದು ಮಧ್ವಾಚಾರ್ಯರ ದ್ವೈತ ಪರಂಪರೆಗೆ ವಿರುದ್ಧವಾದುದು. ಹಾಗಾಗಿ ಇತ್ತೀಚೆಗಷ್ಟೇ ಪೂರ್ಣಪ್ರಮಾಣದಲ್ಲಿ ಮಠದ ಅಧಿಕಾರವನ್ನು ಪಡೆದಿರುವ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಪಲಿಮಾರು ಮಠ, ಅದಮಾರು ಮಠ, ಕಣಿಯೂರು ಮಠ, ಶಿರೂರು ಮಠ, ಕೃಷ್ಣಾಪುರ ಮಠ, ಸೋದೆ ಮಠ, ಪುತ್ತಿಗೆ ಮಠದಿಂದ ಸೂಕ್ತ ಮಾರ್ಗದರ್ಶನ, ಸಲಹೆ ಸೂಚನೆಗಳನ್ನು ಪಡೆದುಕೊಂಡು ಮುಂದುವರೆದರೆ ಅವರ ಸನ್ಯಾಸತ್ವ ಮತ್ತು ದ್ವೈತ ಮಠ ಪರಂಪರೆ ಉಳಿಯುತ್ತದೆ. ಈ ಬಗ್ಗೆ ಬ್ರಾಹ್ಮಣ ಸಂಘಟನೆಗಳು ಪೇಜಾವರ ಸ್ವಾಮೀಜಿಗೆ ಮನವರಿಕೆ ಮಾಡಿಕೊಡಬೇಕೇ ವಿನಹ ಪೇಜಾವರ ಶ್ರೀಗಳ ತಪ್ಪುಗಳನ್ನು ಬೆಂಬಲಿಸುವ ಮೂಲಕ ಅವರ ಮಠ ಪರಂಪರೆಗೆ ದೀರ್ಘಕಾಲಿನ ಹಾನಿ ಮಾಡಬಾರದು.

ಶೃಂಗೇರಿಯ ಭಾರತೀ ತೀರ್ಥ ಸ್ವಾಮೀಜಿ
ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ ತನ್ನ ಸಹಪಂಕ್ತಿಯ ಸಪ್ತ ಮಠಾಧೀಶರ ಮಾರ್ಗದರ್ಶನ ಕೋರಲು ಮುಜುಗರವಾದರೆ ವಿದ್ಯಾರಣ್ಯ ಪರಂಪರೆಯ ಶೃಂಗೇರಿ ಸ್ವಾಮೀಜಿಗಳ ಮಾರ್ಗದರ್ಶನದಂತೆ ನಡೆಯಲಿ. ಶೃಂಗೇರಿಯ ಶ್ರೀ ಶಂಕರಾಚಾರ್ಯ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿಗಳಾಗಲೀ, ಶ್ರೀ ಶಂಕರಾಚಾರ್ಯ ಜಗದ್ಗುರು ಶ್ರಿ‌ವಿಧುಶೇಖರ ಸ್ವಾಮೀಜಿಗಳಾಗಲಿ ಯಾವತ್ತೂ ಕೂಡಾ ಜನಾಂಗೀಯ ದ್ವೇಷ, ರಾಜಕಾರಣದ ಮಾತುಗಳನ್ನು ಆಡಿದವರಲ್ಲ. ಹಾಗಾಗಿ ರಾಜಕೀಯ ನಾಯಕರು ಉಡುಪಿಯ ಸಪ್ತಮಠಗಳು ಮತ್ತು ಶೃಂಗೇರಿ ಸ್ವಾಮೀಜಿಗಳ ಬಗ್ಗೆ ಈವರೆಗೂ ಹೇಳಿಕೆ ನೀಡುವುದಾಗಲೀ, ಅವರನ್ನು ರಾಜಕಾರಣದಲ್ಲಿ ಬೆರೆಸುವುದಾಗಲೀ ಮಾಡಿಲ್ಲ. ಬ್ರಾಹ್ಮಣ ಸಂಘಟನೆಗಳು ಉಡುಪಿಯ ಸಪ್ತ ಮಠಾಧೀಶರು, ಶೃಂಗೇರಿ ಮಠಾಧೀಶರಂತವರನ್ನು ಮಾದರಿಯನ್ನಾಗಿಟ್ಟುಕೊಳ್ಳಬೇಕೇ ವಿನಹ ರಾಜಕೀಯ ವಕ್ತಾರಿಕೆ ಮಾಡುವ ಸ್ವಾಮಿಗಳನ್ನಲ್ಲ.

ಹಾಗಾಗಿ ಬ್ರಾಹ್ಮಣ ಸಂಘಟನೆಯವರಿಗೆ ಮಠ ಪರಂಪರೆ ಉಳಿಯಬೇಕು ಎಂಬ ನಿಜವಾದ ಕಾಳಜಿ ಇದ್ದರೆ ಸ್ವಾಮೀಜಿಗಳು ರಾಜಕೀಯ ಮಾಡದೇ ಇರುವಂತೆ ತಾಕೀತು ಮಾಡಬೇಕಿದೆ. ಮೌಲ್ವಿಗಳು, ಪಾದ್ರಿಗಳು, ಜೈನ ಮುನಿಗಳು, ಬಂತೇಜಿಗಳು ಬಹಿರಂಗ ರಾಜಕೀಯ ಮಾಡುವುದಿಲ್ಲ. ಹಾಗೆಯೇ ಸ್ವಾಮೀಜಿಗಳು ರಾಜಕೀಯ ಮಾತನಾಡಬಾರದು. ಸ್ವಾಮೀಜಿಗಳು ರಾಜಕೀಯ ಮಾತನಾಡಿದ ಬಳಿಕ ರಾಜಕೀಯ ಶೈಲಿಯ ಟೀಕೆಯನ್ನು ಎದುರಿಸಬೇಕೇ ವಿನಹ ಜಾತಿ ಪರದೆಯ ಹಿಂದೆ ಅವಿತು ಅತ್ತು ರಕ್ಷಣೆಗಾಗಿ ಯಾರನ್ನೋ ಪ್ರಚೋದಿಸಬಾರದು. ಮುಖ್ಯವಾಗಿ ಸ್ವಾಮೀಜಿಗಳು ನಡೆಸುವ ‘ಹೊಲಸು ರಾಜಕಾರಣ’ದಲ್ಲಿ ಐತಿಹಾಸಿಕ ಸಂತರು/ ಸನ್ಯಾಸಿಗಳನ್ನು ಎಳೆದು ತರಕೂಡದು

ನವೀನ್ ಸೂರಿಂಜೆ. ಪತ್ರಕರ್ತರು