ಬಟ್ಟೆ ಬಿಚ್ಚಿ ಪ್ರತಿಭಟನೆ ನಡೆಸಿ ಬಂಧನಕ್ಕೀಡಾಗಿದ್ದ ಇರಾನ್ ಮಹಿಳೆ ನಿಗೂಢವಾಗಿ ನಾಪತ್ತೆ.!

ಅಂತಾರಾಷ್ಟ್ರೀಯ

ಅನೈತಿಕ ಪೊಲೀಸ್ ಗಿರಿ ವಿರುದ್ಧ ತನ್ನ ಬಟ್ಟೆ ಬಿಚ್ಚಿ ಪ್ರತಿಭಟನೆ ನಡೆಸಿ ಬಂಧನಕ್ಕೀಡಾಗಿದ್ದ ಇರಾನ್ ಮಹಿಳೆ ಇದೀಗ ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಕಳೆದ ಎರಡು ದಿನಗಳ ಹಿಂದೆ ಟೆಹಾರನ್ ನ ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿನಿಯೊಬ್ಬಳು ತಲೆಗೆ ಸ್ಕಾರ್ಫ್ ಸರಿಯಾಗಿ ಧರಿಸಿಲ್ಲ ಎಂದು ಸ್ಥಳದಲ್ಲಿದ್ದ ಅನೈತಿಕ ಪೊಲೀಸರು ಆಕೆಯ ಮೇಲೆ ಹಲ್ಲೆ ಮಾಡಿದ್ದರು. ಈ ವೇಳೆ ಆಕೆಯ ಹಣೆಗೆ ಬಲವಾದ ಪೆಟ್ಟು ಬಿದ್ದಿದ್ದು, ಇದರಿಂದ ಆಕ್ರೋಶಗೊಂಡ ಆಕೆ ಘೋಷಣೆಗಳನ್ನು ಕೂಗುತ್ತಾ ತಾನು ಧರಿಸಿದ್ದ ಬಟ್ಟೆಗಳನ್ನು ಬಿಚ್ಚಿ ಪ್ರತಿಭಟನೆ ನಡೆಸಿದ್ದಳು. ಅಲ್ಲದೆ ಅರೆನಗ್ನಾವಸ್ಥೆಯಲ್ಲೇ ಸ್ಥಳದಲ್ಲಿ ತಿರುಗಾಡಿದ್ದಳು. ಬಳಿಕ ಆಕೆಯನ್ನು ಅನೈತಿಕ ಪೊಲೀಸರು ಥಳಿಸಿ ಬಂಧಿಸಿದ್ದರು. ಇದೀಗ ಈ ಮಹಿಳೆ ನಿಗೂಢ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ

ಅನೈತಿಕ ಪೊಲೀಸರ ಬಂಧನವಾದ ಬಳಿಕ ಆಕೆ ಎಲ್ಲಿದ್ದಾಳೆ ಎಂಬುದು ಪತ್ತೆಯಾಗಿಲ್ಲ. ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಆಕೆಯನ್ನು ಬಂಧಿಸಿದವರು ಆಕೆಯನ್ನು ರಹಸ್ಯ ಸ್ಥಳಕ್ಕೆ ಕೊಂಡೊಯ್ದಿದ್ದಾರೆ ಎನ್ನಲಾಗಿದೆ. ಮಹಿಳೆ ವಿಡಿಯೋ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದಂತೆ ವಿಶ್ವವಿದ್ಯಾನಿಲಯದ ಸಾರ್ವಜನಿಕ ಸಂಪರ್ಕ ನಿರ್ದೇಶಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ನಗ್ನ ಪ್ರತಿಭಟನೆ ಮಾಡಿದ ಮಹಿಳೆ ಪತಿಯಿಂದ ಬೇರ್ಪಟ್ಟ ಇಬ್ಬರು ಮಕ್ಕಳ ತಾಯಿಯಾಗಿದ್ದು, ಆಕೆ ಮಾನಸಿಕ ಅಸ್ವಸ್ಥಳಾಗಿದ್ದಳು. ಆಕೆಯನ್ನು ಮಾನಸಿಕ ಆರೋಗ್ಯ ಸೌಲಭ್ಯಕ್ಕೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಮಹಿಳೆ ನಾಪತ್ತೆ ವಿಚಾರವಾಗಿ ಮಧ್ಯಪ್ರವೇಶಿಸಿರುವ ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಇರಾನ್ ಅಧ್ಯಾಯ ಸಂಸ್ಥೆ ಆಕೆಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ. ಅಧಿಕಾರಿಗಳು ಆಕೆಗೆ ಚಿತ್ರಹಿಂಸೆ ಮತ್ತು ಇತರ ಕೆಟ್ಟ ಚಿಕಿತ್ಸೆಗಳಿಂದ ರಕ್ಷಿಸಬೇಕು ಮತ್ತು ಕುಟುಂಬ ಮತ್ತು ವಕೀಲರಿಗೆ ಪ್ರವೇಶವನ್ನು ಖಚಿತಪಡಿಸಬೇಕು. ಬಂಧನದ ಸಮಯದಲ್ಲಿ ಅವಳ ವಿರುದ್ಧದ ಹೊಡೆತಗಳು ಮತ್ತು ಲೈಂಗಿಕ ದೌರ್ಜನ್ಯದ ಆರೋಪಗಳ ಕುರಿತಾಗಿ ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ” ಎಂದು ಸಂಸ್ಥೆ ಹೇಳಿದೆ.