ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಕೊಟ್ಟಿಗೆ ನಿರ್ಮಾಣ ಮಾಡದೆ ಹಣ ಗುಳುಂ, ಪಿಡಿಒ ಸಾಥ್
ಮೈಸೂರು ಜಿಲ್ಲೆಯ ಕೆ ಆರ್ ನಗರ ತಾಲೂಕಿನ ಸಾಲಿಗ್ರಾಮ ಹೋಬಳಿಯ ಶೀಗವಳು ಗ್ರಾಮ ಪಂಚಾಯತ್ ನಲ್ಲಿ ನರೇಗಾ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಅವ್ಯವಹಾರದಲ್ಲಿ ಖುದ್ದು ಗ್ರಾಮ ಪಂಚಾಯತ್ ಸಿಬ್ಬಂದಿಯೇ ಶಾಮೀಲಾಗಿದ್ದು, ಪಿಡಿಒ ಸಾಥ್ ನೀಡಿದ್ದಾರೆ ಅನ್ನುವ ಮಾಹಿತಿ ಬಹಿರಂಗಗೊಂಡಿದೆ.

ಶೀಗವಳು ಗ್ರಾಮ ಪಂಚಾಯತ್ ನಲ್ಲಿ ಅಟೆಂಡರ್ ಆಗಿರುವ, ಪ್ರಸ್ತುತ ಬಿಲ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಸನ್ನ ನರೇಗಾ ಯೋಜನೆಯಲ್ಲಿ ಹಣ ದುರುಪಯೋಗ ಮಾಡಿಕೊಂಡಿರುವ ಅಸಾಮಿ ಆಗಿದ್ದಾನೆ. ಈತ ತನ್ನ ಹೆಂಡತಿ ಗೌರಮ್ಮ ಹೆಸರಿನಲ್ಲಿ ಕೊಟ್ಟಿಗೆ ಹಾಗೂ ಬಚ್ಚಲು ಗುಂಡಿಗೆ ಹಣವನ್ನು ಪಿಡಿಒ ಶ್ರೀಧರ್ ಅವರಿಂದ ಬಿಡುಗಡೆ ಮಾಡಿಸಿದ್ದು, ತನ್ನ ತಾಯಿ ಹೆಸರಿನಲ್ಲಿ ಕೊಟ್ಟಿಗೆ ಹಣ ಪಡೆದಿರುತ್ತಾನೆ. ಆದರೆ ಈವರೆಗೂ ಕೊಟ್ಟಿಗೆ ನಿರ್ಮಾಣ ಮಾಡಿರುವುದಿಲ್ಲ. ನೈಜ ಫಲಾನುಭವಿಗಳಿಗೆ ಸಿಗಬೇಕಾದ ಸವಲತ್ತನ್ನು ಪಂಚಾಯತಿ ನೌಕರ ಗುಳುಂ ಮಾಡಿರುತ್ತಾನೆ.

ಸರಕಾರದ ಸ್ಕೀಂ ಅನ್ನು ಹೀಗೆ ಬೇಕಾಬಿಟ್ಟಿಯಾಗಿ ಪಂಚಾಯತ್ ಸಿಬ್ಬಂದಿಯೇ ಪಡೆಯುವುದಾದರೆ ಸರಕಾರದ ಸವಲತ್ತು ಅರ್ಹ ವ್ಯಕ್ತಿಗಳಿಗೆ ತಲುಪುವುದಾದರೂ ಹೇಗೆ? ಪಿಡಿಒ ಹಾಗೂ ಇಂಜಿನಿಯರ್ ಕೂಡ ಈ ಅವ್ಯವಹಾರದಲ್ಲಿ ನೇರ ಹೊಣೆಗಾರರು. ಇದೇ ರೀತಿಯ ಅವ್ಯವಹಾರಗಳು ಹಲವು ಪಂಚಾಯತ್ ಗಳಲ್ಲಿ ನಡೆಯುತ್ತಿದ್ದು, ಮೇಲಾಧಿಕಾರಿಗಳು ಸರಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಸಿಗಲು ಪ್ರಯತ್ನಿಸಬೇಕಿದೆ. ಗ್ರಾಮಸ್ಥರು ಪಂಚಾಯತ್ ಗಳಲ್ಲಿ ನಡೆಯುವ ಅವ್ಯವಹಾರದ ಬಗ್ಗೆ ಧ್ವನಿ ಎತ್ತಬೇಕಿದೆ.