ಹೊರಗೆ ಸಜ್ಜನರ ಮುಖವಾಡ.. ಒಳಗಿದೆ ಕರಾಳತೆಯ ಛಾಯೆ.! ವೇದಿಕೆಯಲ್ಲಿ ಹೀರೋಗಳು
ಎಜ್ಯುಕೇಶನಲ್ ಹಬ್ ಎಂದು ಕರೆಯಿಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆ ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅತ್ಯಂತ ಎತ್ತರದ ಸ್ಥಾನದಲ್ಲಿ ನಿಲ್ಲುತ್ತದೆ. ಆದರೆ ಇದಕ್ಕೆ ಕಪ್ಪು ಚುಕ್ಕೆ ಎನ್ನುವಂತೆ ಮೆಡಿಕಲ್ ಮಾಫಿಯಾ ದಂಧೆ ಅವ್ಯಾಹತವಾಗಿ ಬೆಳೆದಿದೆ. ಮೆಡಿಕಲ್ ಮಾಫಿಯಾ ದಂಧೆಗೆ ಹಲವಾರು ಬಡ ವರ್ಗದ ರೋಗಿಗಳು, ಬಡ ವಿದ್ಯಾರ್ಥಿಗಳ ಬದುಕು ಡೋಲಾಯಮಾನವಾಗಿದೆ. ನಾಯಿಕೊಡೆಗಳಂತೆ ತಲೆ ಎತ್ತಿ ನಿಂತಿರುವ ಖಾಸಗಿ ಆಸ್ಪತ್ರೆಗಳು ದುಡ್ಡಿಗಾಗಿ ಸತ್ತವರನ್ನೇ ಜೀವಂತವಾಗಿಟ್ಟು ದುಡ್ಡು ಪೀಕಿಸಿದ ಅನೇಕ ಘಟನೆಗಳು ಜಿಲ್ಲೆಯಲ್ಲಿ ನಡೆದಿವೆ. ಸಣ್ಣ ಚಿಕಿತ್ಸೆಗಾಗಿ ಬಂದವರನ್ನು ಅದೂ ಇದೂ ಅಂತ ಹೇಳಿ ಅವರನ್ನು ಸುಖಾಸುಮ್ಮನೆ ಐಸಿಯು ಗೆ ಶಿಫ್ಟ್ ಮಾಡಿ ಸರ್ಜರಿಯ ಅಗತ್ಯ ಇಲ್ಲದಿದ್ದರೂ ಸರ್ಜರಿ ಮಾಡಿ ಲಕ್ಷಗಟ್ಟಲೆ ಬಿಲ್ ಸೃಷ್ಟಿಸಿರುವ ಅಮಾನವೀಯತೆಯ ಪರಮಾವಧಿ ಕೂಡಾ ನಡೆದಿವೆ. ಮೆಡಿಕಲ್ ಮಾಫಿಯಾದ ಇಂತಹ ಕರಾಳತೆಯನ್ನು ಪ್ರಶ್ನಿಸುವ ಆಗಿಲ್ಲ. ಒಮ್ಮೆ ರೋಗಿ ಗುಣಮುಖರಾಗಿ ಬಂದರೆ ಸಾಕಪ್ಪ ಅನ್ನುವ ಗೋಜಿನಲ್ಲಿ ಇರುತ್ತಾರೆ ಕುಟುಂಬಸ್ಥರು. ಹಲವು ಕುಟುಂಬಗಳು ಈ ದಂಧೆಗೆ ಬಲಿಪಶುವಾಗಿ ಬೀದಿಪಾಲಾಗಿದ್ದು ಇದೆ. ಈ ಬಗ್ಗೆ ಹಲವಾರು ದೂರುಗಳು, ಹೋರಾಟಗಳು ನಡೆದರೂ ಮೆಡಿಕಲ್ ಮಾಫಿಯಾ ದಂಧೆಗೆ ಕಡಿವಾಣ ಬಿದ್ದಂತಿಲ್ಲ.

ಕೆಲವೊಂದು ಖಾಸಗಿ ಆಸ್ಪತ್ರೆಗಳು ಮೃತದೇಹಗಳನ್ನು ವಾರೀಸುದಾರರಿಗೆ ಬಿಟ್ಟು ಕೊಡುವ ಮುನ್ನ ಲಕ್ಷಾಂತರ ರೂಪಾಯಿಯ ನಕಲಿ ಬಿಲ್ ಸೃಷ್ಟಿಸಿ ಕುಟುಂಬವನ್ನು ಪೀಡಿಸುವ ವೈದ್ಯರು, ಆಡಳಿತಾಧಿಕಾರಿಗಳಿದ್ದಾರೆ. ಸ್ವಲ್ಪವೂ ಕನಿಕರ ಇಲ್ಲದೆ ಸತಾಯಿಸುವ ಇಂತಹ ಮಂದಿ ಸಜ್ಜನ ಮುಖವಾಡದೊಂದಿಗೆ ವೇದಿಕೆ, ಕಾರ್ಯಕ್ರಮಗಳಲ್ಲಿ ಮಿಂಚುತ್ತಿದ್ದಾರೆ. ವೈಟ್ ಕಾಲರ್ ಗಳ ಸುತ್ತ ಮುತ್ತ ಇವರದ್ದೇ ಮುಖ ಇರುತ್ತದೆ. ಇತ್ತೀಚೆಗೆ ಮಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದು ಮೃತದೇಹವನ್ನು ಬಿಟ್ಟುಕೊಡಲು ಲಕ್ಷಾಂತರ ರೂಪಾಯಿ ಪಾವತಿಸುವಂತೆ ಡಿಮ್ಯಾಂಡ್ ಮಾಡಿತ್ತು. ಇಂತಹ ಮೆಡಿಕಲ್ ಮಾಫಿಯಾ ದಂಧೆಯಲ್ಲಿ ತೊಡಗಿರುವ ವ್ಯಕ್ತಿಗಳು ಜಿಲ್ಲೆಯ ವಿವಿಧ ಕಡೆ ನಡೆಯುತ್ತಿರುವ ಸಾಮಾಜಿಕ, ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳಲ್ಲಿ ಹಾಗೂ ಧರ್ಮ ಗುರುಗಳೊಂದಿಗೆ ವೇದಿಕೆ ಹಂಚಿಕೊಂಡು ತಾವು ಸಾಚಾ ಅನ್ನುವ ಪೋಸ್ ಕೊಡುತ್ತಾರೆ. ದುಡ್ಡು ಕೊಡುತ್ತಾರೆ ಅನ್ನುವ ಕಾರಣಕ್ಕೆ ಇವರಿಗೆ ವಿವಿಧ ಬಿರುದುಗಳನ್ನು ನೀಡಿ ಸನ್ಮಾನಿಸುವ ಪರಿಪಾಠ ನಡೆಯುತ್ತಿದೆ. ಇದು ಸಮಾಜಕ್ಕೆ ಕೊಡುವ ಸಂದೇಶವಾದರೂ ಏನು?

ಬಡವರ ಕಣ್ಣೀರಿನ ಹಣದಲ್ಲಿ ಸೂಟ್, ಬೂಟು ಧರಿಸಿ, ಲಕ್ಸುರಿ ಕಾರಿನಲ್ಲಿ ಸುತ್ತಾಡುವ ಇವರ ನಿಜವಾದ ಮುಖವಾಡ ಹೇಗಿರುತ್ತೆ ಅನ್ನುವುದನ್ನು ತಿಳಿಯಬೇಕಾದರೆ ಇಂತಹ ಧಣಿಗಳು ನಡೆಸುವ ಖಾಸಗಿ ಆಸ್ಪತ್ರೆಗೆ ದಾಖಲಾದರೆ ಸಾಕು. ಇವರ ಎಲ್ಲಾ ಬಣ್ಣ ಬಯಲಿಗೆ ಬರುತ್ತದೆ. ಸಮಾಜದಲ್ಲಿ ಸಜ್ಜನರಂತೆ ಕಾಣುವ ಇಂತಹವರು ಮೆಡಿಕಲ್ ಮಾಫಿಯಾದ ಹೆಸರಿನಲ್ಲಿ ಸುಲಿಗೆಗೆ ಇಳಿಯುತ್ತಾರೆ. ಇದರ ಜೊತೆಗೆ ಕೆಲವು ಕ್ರೌಡ್ ಪಡ್ಡಿಂಗ್ ಮಾಡುವವರ ಜೊತೆಗೆ ಸಖ್ಯ ಬೆಳೆಸಿ ಐವತ್ತು ಲಕ್ಷ ದಿಂದ ಕೋಟಿಯಷ್ಟು ಚಿಕಿತ್ಸೆಗೆ ದುಡ್ಡು ಬೇಕು ಎಂದು ಸಾರ್ವಜನಿಕರನ್ನು ಯಾಮಾರಿಸುವ ಕೆಲಸವನ್ನು ಮಾಡುತ್ತಾರೆ. ಇಂತಹ ದಂಧೆಯ ಬಗ್ಗೆ, ಇಂತಹ ಮೆಡಿಕಲ್ ಮಾಫಿಯಾದ ಕುಳಗಳ ಬಗ್ಗೆ ಜಾಗ್ರತೆವಹಿಸಿ, ಸಾರ್ವಜನಿಕರು ಎಚ್ಚೆತ್ತುಕೊಂಡರೆ ಒಳಿತು.