ರಸ್ತೆ ನಿರ್ಬಂಧವಿದ್ದರೂ ಕನ್ಯಾನ ಕಡೆಯಿಂದ ಟನ್ ಗಟ್ಟಲೆ ಮಣ್ಣು ತುಂಬಿಕೊಂಡು ಬರುವ ಭಾರಿ ಘನ ವಾಹನಗಳು. ಲಂಚ ತಿಂದು ಕಣ್ಮುಚ್ಚಿ ಕುಳಿತರೇ ಸಂಬಂಧಪಟ್ಟ ಅಧಿಕಾರಿಗಳು.?
ದಯವಿಟ್ಟು ವಿಟ್ಲ-ಉಕ್ಕುಡ-ಬೈರಿಕಟ್ಟೆ ರಸ್ತೆಯಲ್ಲೊಮ್ಮೆ ಸಂಚರಿಸಿ ನೋಡಿ. ಒಂದಲ್ಲ ಎರಡಲ್ಲ ನೂರಾರು ಯಮ ಮರಣ ಗುಂಡಿಗಳು ನಿಮ್ಮನ್ನು ಸ್ವಾಗತಿಸಲು ಕಾದು ಕುಳಿತಿವೆ.!! ರಸ್ತೆಯಲ್ಲಿ ದಿನಾ ಸಂಚರಿಸುವ ಪ್ರಯಾಣಿಕರು, ಚಾಲಕರು ಹಿಡಿ ಶಾಪ ಹಾಕುತ್ತಿದ್ದಾರೆ. ಮಳೆಗಾಲದಲ್ಲಿ ಚಿಕ್ಕ ಪುಟ್ಟ ಗುಂಡಿಗಳು ಸೃಷ್ಟಿಯಾಗುವುದು ಸಾಮಾನ್ಯ, ಆದರೆ ಈ ರಸ್ತೆಯಲ್ಲಿ ಕಾಣಸಿಗುವುದು ಕೇವಲ ಗುಂಡಿಯಲ್ಲ, ಚಾಲಕನ ಕೈಯಿಂದ ವಾಹನ ಅಲ್ಪ ಕೈ ತಪ್ಪಿದರೆ ಅಪಘಾತ ಫಿಕ್ಸ್!
ಒಂದು ಕಡೆ ರಸ್ತೆಯಲ್ಲಿ ಭಾರಿ ವಾಹನಗಳಿಗೆ ನಿರ್ಬಂಧವಿದ್ದರೂ ಅವ್ಯಾಹತವಾಗಿ ಬರೋಬ್ಬರಿ 40-50 ಟನ್ ಗಳಷ್ಟು ಕೆಂಪು ಮಣ್ಣು ತುಂಬಿಕೊಂಡು ಕನ್ಯಾನ ಕಡೆಯಿಂದ ರಸ್ತೆಯಲ್ಲಿ ದಿನನಿತ್ಯ ಸಾಗುವ ನೂರರಷ್ಟು ಭಾರಿ ಘನವಾಹನಗಳು.
ಮತ್ತೊಂದು ಕಡೆ ಅಳಿಕೆ ಗ್ರಾಮದ ಬರಂಗೋಡಿ ಎಂಬಲ್ಲಿ ಬಿಜೆಪಿ-ಕಾಂಗ್ರೆಸಿಗರ ಹೊಂದಾಣಿಕೆಯಲ್ಲಿ ನಡೆಯುವ ಕಪ್ಪು ಕಲ್ಲು ಗಣಿಗಾರಿಕೆಯಿಂದ ಸಾಗುವ 12-14 ಟಯರ್ ಗಳ ಭಾರಿ ವಾಹನಗಳು.
ಇದಕ್ಕೆಲ್ಲಾ ಕಡಿವಾಣ ಹಾಕಬೇಕಾಗಿರುವ ಸಂಭಂದಪಟ್ಟ ಅಧಿಕಾರಿಗಳು ಲಂಚ ತಿಂದು ಇತ್ತ ಕಡೆ ಸುಳಿಯುವುದಿಲ್ಲ. ಮಾಹಿತಿಯ ಪ್ರಕಾರ ಗಣಿ ಅಧಿಕಾರಿಗಳಿಗೆ ತಿಂಗಳಿಗೆ ಲಕ್ಷ ಲಕ್ಷ ಮಾಮೂಲು ಫಿಕ್ಸ್ ಅಂತೆ.! ಇವರಿಗೆ ಸಿಗುವ ಮಾಮೂಲಿನಿಂದ ಒಂದಿಷ್ಟು ಜಿಲ್ಲೆಯ ಪ್ರತಿಷ್ಠಿತ ರಾಜಕಾರಣಿ ಒಬ್ಬರ ಆಪ್ತ ಸಹಾಯಕನಿಗೂ ಹಂಚಿಕೆ ಆಗುತ್ತಂತೆ.! ಇನ್ನಿತರ ಲೋಕೋಪಯೋಗಿ ಇಲಾಖೆ, ರಸ್ತೆ ಸಾರಿಗೆ ಇಲಾಖೆ, ಪೋಲಿಸ್ ಇಲಾಖೆ ಅಧಿಕಾರಿಗಳಿಗೂ ತಿಂಗಳ ಮಾಮೂಲು ಸಂದಾಯವಾಗುತ್ತದಂತೆ.!
ಹೀಗಿರುವಾಗ ಮತ್ಯಾವ ಹೋರಾಟ, ಎಲ್ಲಿನ ದೂರು, ಯಾರ ಜೊತೆ ಪ್ರಶ್ನೆ ಮಾಡಬೇಕು ಎಂದು ನೀವೇ ಊಹಿಸಿ. ಭ್ರಷ್ಟಾಚಾರದ ಬಗ್ಗೆ ಹೋರಾಟ ಮಾಡುತ್ತೇನೆ, ಯಾವುದೇ ಕಾರಣಕ್ಕೂ ನಾನದನ್ನು ಸಹಿಸುವುದಿಲ್ಲ ಎಂದೇಳುತ್ತಿದ್ದ ಇಲ್ಲಿನ ಶಾಸಕರಿಗೆ ಈ ಬಗ್ಗೆ ಮಾಹಿತಿ ನೀಡಿದರೂ ಪರಿಹಾರ ಶೂನ್ಯ!
ರಸ್ತೆಯಲ್ಲಿನ ಮರಣ ಗುಂಡಿಗಳಿಂದ, ಅಕ್ರಮ ಗಣಿಗಾರಿಕೆಯಿಂದ ಬೇಸತ್ತಿರುವ ಜನರು ದಂಗೆ ಹೇಳುವ ಮುಂಚೆ ಸೂಕ್ತ ಪರಿಹಾರ ಕಲ್ಪಿಸಿ ಎಂಬುವುದೇ ನಾಗರಿಕರ ಸಲಹೆ.