ವಕ್ಫ್ ಭೂಮಿ ಹೆಸರಿನಲ್ಲಿ ಕೋಲಾಹಲ ಎಬ್ಬಿಸಿ ವಿವಾದವಾದ ಆದೇಶಕ್ಕೆ ಇದೀಗ ಸರ್ಕಾರ ಮಹತ್ವದ ಆದೇಶ; ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚನೆ: ಸಿ.ಎಂ

ರಾಜ್ಯ

ರಾಜ್ಯಾದ್ಯಂತ ವಕ್ಫ್ ಭೂಮಿ ಹೆಸರಿನಲ್ಲಿ ಕೋಲಾಹಲ ಎಬ್ಬಿಸಿ ವಿವಾದವಾದ ಆದೇಶಕ್ಕೆ ಇದೀಗ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಮಹತ್ವದ ಸೂಚನೆ ನೀಡಿದೆ. ಕೆಲವು ರೈತರು ಹಾಗೂ ಇತರ ಆಸ್ತಿಗಳನ್ನು ವಕ್ಫ್ ಹೆಸರಿಗೆ ಖಾತೆ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಸಭೆ ನಡೆಸಿ ಸೂಚನೆ ನೀಡಿದ್ದನ್ನು ಈ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಮ್ಯುಟೇಷನ್ ಮಾಡಲು ಯಾವುದೇ ಕಚೇರಿ ಅಥವಾ ಯಾವುದೇ ಪ್ರಾಧಿಕಾರದಿಂದ (ವಕ್ಫ್) ನೀಡಲಾದ ನಿರ್ದೇಶನಗಳನ್ನು ತಕ್ಷಣದಿಂದಲೇ ಹಿಂಪಡೆಯುವುದು ಹಾಗೂ ಮ್ಯುಟೇಷನ್ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸುವುದು. ಈ ಕುರಿತು ನೀಡಲಾದ ಎಲ್ಲ ನೋಟಿಸ್‌ಗಳನ್ನು ಹಿಂಪಡೆಯುವುದು. ಜಮೀನುಗಳಲ್ಲಿ ವ್ಯವಸಾಯ ಮಾಡುತ್ತಿರುವ ರೈತರ ವಿರುದ್ಧ ಯಾವುದೇ ಕ್ರಮಗಳನ್ನು ಜರುಗಿಸತಕ್ಕದ್ದಲ್ಲ. ಸಿಎಂ ಸೂಚನೆ ಅನ್ವಯ ಏಪ್ರಿಲ್ 15ರ, ಏ.23 ಹಾಗೂ ನವೆಂಬರ್ 11ರ ನೆನಪೋಲೆ 2ನ್ನು ತಕ್ಷಣದಿಂದಲೇ ಹಿಂಪಡೆಯಲಾಗಿದೆ.

ಸಿಎಂ ಆದೇಶ ಇದ್ದಾಗ್ಯೂ ಮೇಲಾಧಿಕಾರಿಗಳ ಅನುಮತಿ/ ಅನುಮೋದನೆ ಇಲ್ಲದೇ ನವೆಂಬರ್ 7ರ ನೆನಪೋಲೆ 2ನ್ನು ಹೊರಡಿಸಿದ ಅಧಿಕಾರಿ ವಿರುದ್ಧ ಸೂಕ್ತ ಶಿಸ್ತು ಕ್ರಮಕೈಗೊಳ್ಳಲಾಗುವುದು. ಸಿಎಂ ಆದೇಶ ಕಟ್ಟುನಿಟ್ಟಾಗಿ ಪಾಲಿಸುವಂತೆ ಕಂದಾಯ ಇಲಾಖೆ (ಭೂ ಮಂಜೂರಾತಿ ಭೂ ಸುಧಾರಣೆ ಮತ್ತು ಭೂ ಕಂದಾಯ) ಅಪರ ಕಾರ್ಯದರ್ಶಿ ಡಾ. ಉದಯ ಕುಮಾರ್ ಶೆಟ್ಟಿ ನಿರ್ದೇಶಿಸಿದ್ದಾರೆ.