ಮಂಜೇಶ್ವರ ಠಾಣಾ ವ್ಯಾಪ್ತಿಯ ದೈಗೋಳಿಯಲ್ಲಿ ಸ್ಥಳೀಯರ ಕಾರ್ಯಾಚರಣೆ.
ಕರ್ನಾಟಕ-ಕೇರಳ ಗಡಿಭಾಗದ ಸುಂಕದಕಟ್ಟೆ ದೈಗೋಳಿ ಎಂಬಲ್ಲಿ ರವಿವಾರ ಮುಂಜಾನೆ ಕುಖ್ಯಾತ ಅಂತರಾಜ್ಯ ದರೋಡೆಕೋರರು ಸ್ಥಳೀಯರು ಕೈಗೆ ಸಿಕ್ಕಿಬಿದ್ದಿದ್ದಾರೆ. ಮುಂಜಾನೆ ಮೂರು ಗಂಟೆಯ ಸುಮಾರಿಗೆ ಮನೆಯೊಂದಕ್ಕೆ ನುಗ್ಗಲು ಯತ್ನಿಸಿದಾಗ ಎಚ್ಚರಗೊಂಡ ಮಹಿಳೆಯೊಬ್ಬರು ಬೊಬ್ಬೆ ಹೊಡೆದಿದ್ದಾರೆ. ತಕ್ಷಣವೇ ಸ್ಥಳೀಯರು ಜಮಾಯಿಸುತ್ತಿದ್ದಂತೆ ದರೋಡೆಕೋರರು ತಮ್ಮ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ.
ಸ್ಥಳೀಯರ ಬುದ್ಧಿವಂತಿಕೆಯ ಮುಂದೆ ದರೋಡೆಕೋರರ ಯತ್ನ ವಿಫಲವಾಗಿದೆ. ದರೋಡೆಕೋರರ ಕಾರನ್ನು ಬೆನ್ನಟ್ಟಿದ ಸ್ಥಳೀಯರು ಸುಂಕದಕಟ್ಟೆ ದೈಗೋಳಿ ಎಂಬಲ್ಲಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆ ಸಂದರ್ಭ ನಾಲ್ವರು ದರೋಡೆಕೋರರು ಕಾರಿನಿಂದ ಜಿಗಿದು ಪರಾರಿಯಾಗಿದ್ದರೂ ಇಬ್ಬರು ಜನರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಸಿಕ್ಕಿಬಿದ್ದ ಇಬ್ಬರಲ್ಲಿ ಓರ್ವ ಉಳ್ಳಾಲ ನಿವಾಸಿಯಾಗಿದ್ದು ಮತ್ತೋರ್ವ ತುಮಕೂರು ಮೂಲದವನೆಂದು ತಿಳಿದುಬಂದಿದೆ. ಪರಾರಿಯಾದ ನಾಲ್ವರ ಪೈಕಿ ಇಬ್ಬರು ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು, ಸಾಲೆತ್ತೂರು ಪರಿಸರದವರೆಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳೀಯರು ಹಿಡಿದ ದರೋಡೆಕೋರರ ಕಾರಿನಲ್ಲಿ ಗ್ಯಾಸ್ ಕಟ್ಟರ್, ತಲವಾರು ಗಳು, ಕಟ್ಟಿಂಗ್ ಸಾಮಾಗ್ರಿಗಳು, ವಿವಿಧ ರಿಜಿಸ್ಟ್ರೇಷನ್ ಸಂಖ್ಯೆಯ ನಂಬರ್ ಪ್ಲೇಟು ಗಳು ಸಿಕ್ಕಿವೆ. ಆಕ್ರೋಶಿತರಾದ ಸಾರ್ವಜನಿಕರ ತಂಡ ಸಿಕ್ಕಿಬಿದ್ದ ಇಬ್ಬರಿಗೆ ಸರಿಯಾದ ರೀತಿಯಲ್ಲಿ ಥಳಿಸಿದ್ದು ಬಳಿಕ ಮಂಜೇಶ್ವರ ಪೊಲೀಸರ ಕೈಗೆ ಒಪ್ಪಿಸಿದ್ದಾರೆ.