ಬಿಜೆಪಿ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಬೆಳೆಸಲು ಪಕ್ಷಾಂತರದ ಮೂಲಕ ಸೆಳೆಯಲಾಗುತ್ತಿದೆ. ಆದರೆ ಕಳಂಕಿತ ರಾಜಕಾರಣಿಗಳ ಸೇರ್ಪಡೆಯಿಂದ ಪಕ್ಷದ ವರ್ಚಸ್ಸು ಕುಂದುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಕಳವಳ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸೈದ್ಧಾಂತಿಕ ಪಕ್ಷವಾಗಿದ್ದು, ಈ ಸಿದ್ಧಾಂತ ಒಪ್ಪಿ ಬರುವ ಮುಖಂಡರು ಹಾಗೂ ಕಾರ್ಯಕರ್ತರನ್ನು ಸೇರಿಸಿಕೊಳ್ಳಬೇಕು. ಆದರೆ ಕಳಂಕಿತ ರಾಜಕಾರಣಿಗಳನ್ನು ಪ್ರಮುಖ ಸ್ಥಾನದಿಂದ ಹೊರಗೆ ಇಡದೇ ಇದ್ದರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತದೆ ಎಂದು ಹೇಳಿದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದ ಅವರು, ಪಕ್ಷದಿಂದ ಕಳೆಯನ್ನು ತೆಗೆದು ಶುದ್ದೀಕರಿಸಬೇಕಾಗಿದೆ. ಬೆಳೆ ಬೆಳೆದಂತೆ ಕಳೆ ಹೆಚ್ಚಾಗುತ್ತದೆ. ಕಳೆ ಕೀಳದಿದ್ದರೆ ಉಳಿದ ಬೆಳೆಗಳಿಗೂ ಹಾನಿ ಆಗಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಜೆಪಿ ಕಾರ್ಯಕರ್ತರ ಪಕ್ಷ. ಪಕ್ಷಕ್ಕೆ ಹೊಸ ಸದಸ್ಯರು ಸೇರುತ್ತಿರುತ್ತಾರೆ. ಪಕ್ಷದ ಅಭಿವೃದ್ಧಿ ದೃಷ್ಟಿಯಿಂದ ಹೊಸ ಸದಸ್ಯರ ಸೇರ್ಪಡೆ ಅನಿವಾರ್ಯ. ಪಕ್ಷದೊಳಗೆ ಬರುವವರಿಗೆ ಸೂಕ್ತ ತರಬೇತಿ ನೀಡಬೇಕಿದೆ. ಆದರೆ ಒಬ್ಬ ಕಾರ್ಯಕರ್ತ ಮಾತನಾಡಿದರೆ ಅದರಿಂದ ಸಾವಿರಾರು ಕಾರ್ಯಕರ್ತರ ಶ್ರಮ ವ್ಯರ್ಥವಾಗುತ್ತದೆ. ಆದ್ದರಿಂದ ಪಕ್ಷದ ಸಿದ್ಧಾಂತಕ್ಕೆ ಒಗ್ಗಿಕೊಳ್ಳದ ಕಳಂಕಿತರನ್ನು ಹೊರಗೆ ಹಾಕುವ ಕೆಲಸ ಆಗಬೇಕು ಎಂದು ನಿತಿನ್ ಗಡ್ಕರಿ ಹೇಳಿದರು.