ನಾಗರಿಕರಿಗೆ ಕಂಠಕವಾದ ಮಲತ್ಯಾಜ್ಯ ಘಟಕ: ವಿಟ್ಲ ಪ.ಪಂ.ವ್ಯಾಪ್ತಿಯ ಅಪ್ಪೆರಿಪಾದೆ ಬಳಿ ಮಲತ್ಯಾಜ್ಯ ಘಟಕದ ಕಾಮಗಾರಿಗೆ ಶಾಸಕ ಅಶೋಕ್ ರೈ ಬ್ರೇಕ್.

ಕರಾವಳಿ

ವಿಟ್ಲ ಪ.ಪಂ.ವ್ಯಾಪ್ತಿಯ ಕಾಶಿಮಠ ಅಪ್ಪೆರಿಪಾದೆಯಲ್ಲಿ 2.40 ಕೋಟಿ ಅನುದಾನದಲ್ಲಿ ಮಲತ್ಯಾಜ್ಯ ಘಟಕದ ಕಾಮಗಾರಿ ತರಾತುರಿಯಲ್ಲಿ ನಡೆಯುತ್ತಿದೆ. ಅಪ್ಪೆರಿಪಾದೆ, ಕಾಶಿಮಠ ಸುತ್ತಮುತ್ತ ದೈವಸ್ಥಾನ, ದೇವರಕಟ್ಟೆ, ಮುನ್ನೂರಕ್ಕೂ ಹೆಚ್ಚು ಬಡಕುಟುಂಬಗಳು ಬದುಕುತ್ತಿವೆ. ಈ ಮಧ್ಯೆ ಸ್ಥಳೀಯರ ಗಮನಕ್ಕೆ ತಾರದೇ ಗುಟ್ಟಾಗಿ ಜನವಸತಿ ಪ್ರದೇಶದಲ್ಲಿ ಮಲತ್ಯಾಜ್ಯ ಘಟಕ ಸ್ಥಾಪಿಸಲು ಅಧಿಕಾರಿಗಳು ಮುಂದಾಗಿರುವುದು ಸ್ಥಳೀಯರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ತರಾತುರಿಯಲ್ಲಿ ಘಟಕದ ಕಾಮಗಾರಿ ಆರಂಭವಾಗುತ್ತಿದ್ದಂತೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ತಕ್ಷಣವೇ ಯೋಜನೆ ಕೈಬಿಡುವಂತೆ ಮನವಿ ನೀಡಿದ್ದರು.

ಆದರೆ ಸ್ಥಳೀಯರ ಕೂಗು ಅಧಿಕಾರಿಗಳ ಕಿವಿಗೆ ಕೇಳಿಸಿಲ್ಲವಾಗಿದೆ. ಇದರಿಂದ ಮನನೊಂದ ಸ್ಥಳೀಯರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಕಛೇರಿಗೆ ತೆರಳಿ ಸಮಸ್ಯೆಯ ಬಗ್ಗೆ ವಿವರಿಸಿ ಮನವಿ ಸಲ್ಲಿಸಿದರು. ಸ್ಥಳೀಯರ ಮನವಿಗೆ ಸ್ಪಂದಿಸಿದ ಶಾಸಕ ಅಶೋಕ್ ರೈ ಶನಿವಾರದಂದು ಅಧಿಕಾರಿಗಳ ಜೊತೆ ಸ್ಥಳಕ್ಕಾಗಮಿಸಿ ಪರಿಸರವಾಸಿಗಳ ಅಹವಾಲು ಕೇಳಿಸಿಕೊಂಡು ತಕ್ಷಣವೇ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ತಾಕೀತು ಮಾಡಿದರು.

ಪ.ಪಂ.ಸ್ಪಷ್ಟನೆ.

ವಿಟ್ಲ ಪ.ಪಂ.ನಲ್ಲಿ ಆಡಳಿತಾಧಿಕಾರಿಯ ಅವಧಿಯಲ್ಲಿ ಮಲತ್ಯಾಜ್ಯ ಘಟಕ ಯೋಜನೆ ಮಂಜೂರಾಗಿತ್ತು. ಇದೀಗ ಆಡಳಿತ ನಡೆಸಲು ಅಧ್ಯಕ್ಷ -ಉಪಾಧ್ಯಕ್ಷರ ನೇಮಕವಾಗಿದೆ. ಜನರಿಗೆ ತೊಂದರೆಯಾಗುವ ಮತ್ತು ಪರಿಸರಕ್ಕೆ ಮಾರಕವಾಗುವ ಯಾವುದೇ ಯೋಜನೆಗಳಿಗೆ ನಮ್ಮ ವಿರೋಧವಿದೆ. ಜನವಸತಿ ಪ್ರದೇಶದಲ್ಲಿ ಇಂತಹ ಘಟಕ ಸ್ಥಾಪನೆಗೆ ಯಾವತ್ತೂ ಅವಕಾಶ ನೀಡುವುದಿಲ್ಲ. ಪ.ಪಂ.ವ್ಯಾಪ್ತಿಗೆ ಮಲತ್ಯಾಜ್ಯ ಘಟಕದ ಅವಶ್ಯಕತೆಯಿದ್ದು ಮುಂದಿನ ದಿನಗಳಲ್ಲಿ ಜನವಸತಿ ಪ್ರದೇಶವಲ್ಲದ ಸರ್ಕಾರಿ ಜಮೀನು ಗುರುತಿಸಿ ಘಟಕ ಸ್ಥಾಪಿಸುತ್ತೇವೆ. ಯಾವುದೇ ಕಾರಣಕ್ಕೂ ನಾಗರಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಪ.ಪಂ.ಅಧ್ಯಕ್ಷ ಕರುಣಾಕರ ನಾತ್ತೊಟ್ಟು ಸ್ಪಷ್ಟನೆ ನೀಡಿದ್ದಾರೆ. ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಸದಸ್ಯರಾದ ರವಿಕುಮಾರ್, ವಸಂತ ಹಾಜರಿದ್ದರು.