ಮುಡಾ ಹಗರಣ, ವಕ್ಫ್ ಗುಮ್ಮ ಕಸದ ಬುಟ್ಟಿಗೆ ಎಸೆದ ಮತದಾರರು.. ಮೂರನೇ ಬಾರಿಯೂ ಚಕ್ರವ್ಯೂಹ ಭೇದಿಸಲು ವಿಫಲನಾದ ದುರಂತ ನಾಯಕ.!
ಬಹಳಷ್ಟು ಕುತೂಹಲ ಮೂಡಿಸಿದ್ದ ರಾಜ್ಯದ ಮೂರು ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಿದೆ. ಬಿಜೆಪಿ, ಜೆಡಿಎಸ್ ಹೀನಾಯ ಸೋಲು ಕಂಡಿದೆ. ಮೂರರಲ್ಲೂ ಮೂರು ಸ್ಥಾನ ಕೈ ಗೆ ದಕ್ಕಿದರೆ, ಬಿಜೆಪಿ, ಜೆಡಿಎಸ್ ಶೂನ್ಯ ಕ್ಕಿಳಿದಿದೆ.
ಚನ್ನಪಟ್ಟಣ ಉಪ ಚುನಾವಣೆ ಗೌಡರ ಕುಟುಂಬಕ್ಕೆ ಪ್ರತಿಷ್ಠೆಯ ಕ್ಷೇತ್ರವಾಗಿತ್ತು. ಕೇಂದ್ರ ಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಗೆಲುವಿಗೆ ಗೌಡರ ಫ್ಯಾಮಿಲಿ ಹರಸಾಹಸ ಪಟ್ಟಿತ್ತು. ಈ ಬಾರಿ ನಿಖಿಲ್ ಗೆಲುವು ತಡೆಯುವವರಿಲ್ಲ ಅನ್ನುವ ವಾತಾವರಣ ಸೃಷ್ಟಿಸಿದ್ದರು. ಆದರೆ ಮತದಾರ ಪ್ರಭು ನಿಖಿಲ್ ಕುಮಾರಸ್ವಾಮಿ ಯವರನ್ನು ಸೋಲಿಸಿ ಡೈನಾಮಿಕ್ ಲೀಡರ್ ಸಿ.ಪಿ ಯೋಗೇಶ್ವರ್ ಅವರನ್ನು ಗೆಲ್ಲಿಸಿದ್ದಾರೆ. ಆ ಮೂಲಕ ಕುಮಾರಸ್ವಾಮಿಗೆ ತೀವ್ರ ಮುಖಭಂಗವಾಗಿದೆ.
ಚನ್ನಪಟ್ಟಣದಲ್ಲಿ ಜಮೀರ್ ಅಹಮದ್ ನೀಡಿರುವ ಲೂಸ್ ಸ್ಟೇಟ್ ಮೆಂಟ್ ಕಾಂಗ್ರೆಸ್ ಗೆಲುವಿಗೆ ಡ್ಯಾಮೇಜ್ ತರಬಹುದು ಎಂದೇ ವಿಶ್ಲೇಷಿಸಲಾಗಿತ್ತು. ಆದರೆ ಅದು ಯಾವುದೂ ಜೆಡಿಎಸ್ ಗೆ ಲಾಭ ತಂದುಕೊಟ್ಟಿಲ್ಲ. ಇತ್ತ ಅಲ್ಪಸಂಖ್ಯಾತ ಮುಸ್ಲಿಮರು ಹೆಚ್ಚಿರುವ ಕಡೆಗಳಲ್ಲಿ ಭರ್ಜರಿ ವೋಟಿಂಗ್ ಕಾಂಗ್ರೆಸ್ ಕೈ ಹಿಡಿದಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ರಣತಂತ್ರ ವರ್ಕೌಟ್ ಆಗಿದೆ. ಜಮೀರ್ ಪರ ಮುಸ್ಲಿಂ ಸಮುದಾಯ ಒಕ್ಕೊರಲಿನಿಂದ ನಿಂತಿದೆ. ಯೋಗೇಶ್ವರ್ ಪ್ರಭಾವ ಕೆಲಸ ಮಾಡಿದೆ. ಒಟ್ಟಾರೆ ಕಾಂಗ್ರೆಸ್ ಸಂಘಟಿತ ಹೋರಾಟ ಜೆಡಿಎಸ್ ಅನ್ನು ಮಣ್ಣುಮುಕ್ಕಿಸಿದೆ.
ಸಂಡೂರು ಹೇಳಿ ಕೇಳಿ ಕಾಂಗ್ರೆಸ್ ಭದ್ರಕೋಟೆ. ಆದರೆ ಈ ಬಾರಿ ಜನಾರ್ದನ ರೆಡ್ಡಿ ಬಿಜೆಪಿ ಪಾಳಯದಲ್ಲಿರುವುದರಿಂದ ಅವರ ಆಪ್ತ ಬಂಗಾರು ಲಕ್ಷ್ಮಣ್ ಗೆ ಟಿಕೆಟ್ ನೀಡಲಾಗಿತ್ತು. ಸಂಡೂರಿನಲ್ಲಿ ಬಿಜೆಪಿ ಮಿರಾಕಲ್ ಸೃಷ್ಟಿಸಲಿದೆ ಎಂದು ರೆಡ್ಡಿ ಬಣ ಗುಟುರು ಹಾಕಿದ್ದರು. ಆದರೆ ರೆಡ್ಡಿ ಬಣದ ಆಟ ಇಲ್ಲಿ ನಡೆಯಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಜಯಗಳಿಸುವ ಮೂಲಕ ಸಂಡೂರು ಕಾಂಗ್ರೆಸ್ಸಿನ ಸೇಫೆಸ್ಟ್ ಜಾಗ ಎಂಬುದನ್ನು ಸಾಬೀತುಪಡಿಸಿದೆ.
ಇನ್ನು ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ನಾಗಾಲೋಟಕ್ಕೆ ಬ್ರೇಕ್ ಹಾಕಿದೆ. ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಸೋಲು ಕಂಡಿದ್ದಾರೆ. ಬಿಜೆಪಿಗೆ ಇದು ತೀವ್ರ ಮುಜುಗರ ಉಂಟು ಮಾಡಿದೆ. ಬಿಜೆಪಿ ಸತತವಾಗಿ ಗೆಲ್ಲುತ್ತಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಪಠಾಣ್ ಅದ್ಭುತ ಜಯಭೇರಿ ಬಾರಿಸಿದ್ದಾರೆ. ಬೊಮ್ಮಾಯಿ ಮುಖ್ಯಮಂತ್ರಿ ಅವಧಿಯಲ್ಲಿ ಅಲ್ಪಸಂಖ್ಯಾತರ ವಿರುದ್ಧ ತಳೆದಿದ್ದ ಕೆಲವು ಕಠಿಣ ಕ್ರಮಗಳನ್ನು ಈ ಬಾರಿ ಶಿಗ್ಗಾಂವಿ ಮತದಾರರು ಬೊಮ್ಮಾಯಿ ಗೆ ರಿವರ್ಸ್ ನೀಡಿದ್ದಾರೆ.
ರಾಜ್ಯದಲ್ಲಿ ಮುಡಾ ಹಗರಣದ ಮೂಲಕ ಸಿದ್ದರಾಮಯ್ಯ ಸರ್ಕಾರವನ್ನು ಬೀಳಿಸಲು ಪ್ರಯತ್ನಪಟ್ಟಿದ್ದ ಬಿಜೆಪಿ ಪಕ್ಷಕ್ಕೆ ಈ ಫಲಿತಾಂಶ ತಿರುಗುಬಾಣವಾಗಿದೆ. ಬಿಜೆಪಿಯಲ್ಲೇ ಅತೃಪ್ತರ ಸಂಖ್ಯೆ ಹೆಚ್ಚಾಗಲು ಕಾರಣವಾಗಬಹುದು. ಚುನಾವಣಾ ಸಮಯದಲ್ಲಿ ವಕ್ಫ್ ಗುಮ್ಮ ತೋರಿಸಿ ಹಿಂದೂ ಮತ ಸೆಳೆಯುವ ಪ್ರಯತ್ನ ಮಾಡಿದ್ದ ಬಿಜೆಪಿ ಸ್ಟ್ರಾಟಜಿಗೆ ಮತದಾರ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ ಅನ್ನುವುದು ಈ ಮೂರು ಚುನಾವಣೆಯ ಫಲಿತಾಂಶ ದಿಂದ ಸಾಬೀತಾಗಿದೆ.