ಭ್ರಷ್ಟರ ಪರಮ ಅಡ್ಡೆ ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ

ಕರಾವಳಿ

ಕಂತೆ ಕಂತೆ ನೋಟು, ಕೆಜಿ ಗಟ್ಟಲೆ ಒಡವೆ ಲೋಕಾಯುಕ್ತ ಅಧಿಕಾರಿಗಳೇ ಹೈರಾಣು.!

ಮರಳು.. ಕಲ್ಲು.. ಮಣ್ಣು.. ಮುಕ್ಕಿ ಮುಕ್ಕಿ ಕೋಟಿ.. ಕೋಟಿ ಡೀಲು..

ಇದು ಮಂಗಳೂರು. ಬುದ್ಧಿವಂತರ ಜಿಲ್ಲೆ. ಶಿಕ್ಷಿತರ ತವರೂರು. ಇಲ್ಲಿನ ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಲಕ ಲಕ ಹೊಳೆಯುತ್ತಿದೆ. ಉತ್ತರ ಕರ್ನಾಟಕ ಅಥವಾ ಇತರ ಭಾಗಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ ಭ್ರಷ್ಟ ಅಧಿಕಾರಿಗಳು ಕಂತೆ ಕಂತೆ ನೋಟುಗಳನ್ನು ಪೈಪುಗಳಲ್ಲಿ ಅಡಗಿಸಿಟ್ಟಿರುವುದು, ಕೋಣೆಯಲ್ಲಿ ಬಚ್ಚಿಟ್ಟಿರುವುದು ಇಂತಹ ನ್ಯೂಸ್ ಗಳನ್ನು ಕೇಳಿರಬಹುದು. ಆದರೆ ಮಂಗಳೂರಿನಲ್ಲಿ ಲೋಕಾಯುಕ್ತರು ರೈಡ್ ನಡೆಸಿದಾಗ ಆ ರೀತಿಯ ಸುದ್ದಿಗಳು ಕೇಳಿದ್ದು ಕಡಿಮೆ. ಆದರೆ ಮಲ್ಲಿಕಟ್ಟೆಯಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಮನೆ, ಕಚೇರಿ ಮೇಲೆ ಲೋಕಾಯುಕ್ತರು ರೈಡ್ ನಡೆಸಿದಾಗ ಲೋಕಾಯುಕ್ತ ಅಧಿಕಾರಿಗಳೇ ತಬ್ಬಿಬ್ಬಾಗಿದ್ದಾರೆ. ಗರಿ ಗರಿ ನೋಟುಗಳು, ಚಿನ್ನದ ಒಡವೆಗಳು ಪತ್ತೆಯಾಗಿವೆ.

ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಬಕಾಸುರರ, ಲಂಚಕೋರರ ಸ್ವರ್ಗವಾಗಿ ಮಾರ್ಪಟ್ಟಿದೆ. ಇಲ್ಲಿ ಲಂಚ ಕೊಡದೆ ಯಾವುದೇ ಕೆಲಸ ನಡೆಯಲ್ಲ. ಒಂದು ಪರ್ಮೀಟ್ ಪಡೆಯಲು ಲಕ್ಷಾಂತರ ರೂಪಾಯಿ ಕಪ್ಪ ಕಾಣಿಕೆ ಕೊಡಲೇಬೇಕು. ಆ ಮಟ್ಟಿಗೆ ಹಂಡಾಲೆಬ್ಬಿದೆ ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ.

ಇಲ್ಲಿನ ಅಧಿಕಾರಿಗಳು ಲಂಚ ತಿಂದು ದುಂಡಗಾಗಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಲೋಕಾಯುಕ್ತ ಅಧಿಕಾರಿಗಳು ಇಲ್ಲಿನ ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದರು. ಈಗ ಶಾಕ್ ಗೊಳಗಾಗುವ ಸರದಿ ಲೋಕಾಯುಕ್ತ ಅಧಿಕಾರಿಗಳದ್ದು. ಏಕೆಂದರೆ ಕಂತೆ ಕಂತೆ ನೋಟುಗಳು, ಕೆಜಿ ಗಟ್ಟಲೆ ಒಡವೆಗಳು ಪತ್ತೆಯಾಗಿವೆ. ಇವೆಲ್ಲವೂ ಲಂಚದ ಮೂಲಕ ಪಡೆದವುಗಳು. ಇಲ್ಲಿನ ಒಬ್ಬೊಬ್ಬ ಅಧಿಕಾರಿಯೂ ಕೋಟಿಗಟ್ಟಲೆ ತೂಗುವಂತವುಗಳು. ಮರಳು ಮಾಫಿಯಾ, ಅಕ್ರಮ ಧೋ ನಂಬರ್ ದಂಧೆಕೋರರಿಗೆ ಕಡಿವಾಣ ಹಾಕಬೇಕಾದ ಗಣಿ ಇಲಾಖೆ ಅವರ ಜೊತೆನೇ ಕೈ ಜೋಡಿಸಿ ಕೋಟಿ ಕೋಟಿ ಆಸ್ತಿ ಮಾಡಿಟ್ಟಿದ್ದಾರೆ.

ಮಂಗಳೂರಿನ ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ 11.93 ಕೋಟಿ ಮೌಲ್ಯದ ಆಸ್ತಿ ಇರುವುದು ಪತ್ತೆಯಾಗಿದೆ. ಕೃಷ್ಣವೇಣಿಗೆ ಸಂಬಂಧಿಸಿದ ಐದು ಕಡೆಗಳಲ್ಲಿ ಲೋಕಾಯುಕ್ತರು ಶೋಧ ಕಾರ್ಯ ನಡೆಸಿದ್ದರು. ಬೆಂಗಳೂರಿನ ಯಲಹಂಕದ ಫ್ಲಾಟ್, ನಿರ್ಮಾಣ ಹಂತದಲ್ಲಿರುವ ವಾಣಿಜ್ಯ ಸಂಕೀರ್ಣ, ಮೂರು ನಿವೇಶನಗಳ ಮೇಲೆ ದಾಳಿ ನಡೆಸಿದ್ದರು.

26 ಎಕರೆ ಕೃಷಿ ಜಮೀನು (ಕಾಫಿ ಪ್ಲಾಂಟೇಷನ್) ಆಸ್ತಿ ಸೇರಿ ಹತ್ತು ಕೋಟಿಗೂ ಅಧಿಕ ಮೌಲ್ಯ ಹೊಂದಿದೆ. 66 ಲಕ್ಷ ಬೆಲೆಬಾಳುವ ಬಂಗಾರದ ಒಡವೆಗಳು, 60 ಲಕ್ಷ ಮೌಲ್ಯದ ವಾಹನಗಳು ಪತ್ತೆಯಾಗಿದೆ. ಇದೀಗ ಈ ಅಯ್ಯಮ್ಮ ರಾಜಧಾನಿಗೆ ಬಸ್ಸು ಹತ್ತಿದ್ದಾರಂತೆ. ಹಿಂತಿರುಗಿ ಬರುವಾಗ ಎಲ್ಲವೂ ಸರಿಪಡಿಸಿ, ಲೆಕ್ಕ ಚುಕ್ತಾಮಾಡಿ ಬಂದ ನಂತರ ಗಣಿ ಧನಿಗಳಿಗೆ ಮತ್ತಷ್ಟು ಸಂಕಟ ಶುರುವಾಗಬಹುದು. ಮಾಮೂಲು ಇನ್ನಷ್ಟು ಏರಿಕೆ ಕಾಣಬಹುದು.!

ಮಂಗಳೂರಿನ ಗಣಿ ಇಲಾಖೆಯಲ್ಲಿರುವ ಕೃಷ್ಣ ವೇಣಿ, ಗಿರೀಶ್ ಮೋಹನ್ ಸೇರಿದಂತೆ ಇತರ ಅಧಿಕಾರಿಗಳಿಗೆ ಕಪ್ಪು, ಕೆಂಪು ಕಲ್ಲಿನ ಕ್ವಾರೆ, ಮಣ್ಣಿನ ಪರ್ಮೀಟ್ ಗಾಗಿ ಲಕ್ಷಾಂತರ ರೂಪಾಯಿ ಕಪ್ಪಕಾಣಿಕೆ ಕೊಡಲೇಬೇಕಂತೆ. ಈ ಗಿರೀಶ ಹಿಂದೊಮ್ಮೆ ಲೋಕ ಬಲೆಗೆ ಬಿದ್ದವ, ಈಗ ಏನಿದ್ದರೂ ನೇರ ವಹಿವಾಟು ಇಲ್ಲ. ವಸೂಲಿಗಾಗಿ ಮದ್ಯವರ್ತಿ ವ್ಯಕ್ತಿಗಳನ್ನೇ ನೇಮಕ ಮಾಡಿದ್ದಾನಂತೆ.! ಅಕ್ರಮ ಮರಳು ದಂಧೆಯ ವಿರುದ್ಧ ಸಾರ್ವಜನಿಕರು ದೂರು ಕೊಟ್ಟರೂ ಕ್ರಮ ಕೈಗೊಳ್ಳುತ್ತಿಲ್ಲ. ಅಕ್ರಮ ಮರಳು ಲಾರಿಗಳು ಇವರ ಕಣ್ಣಿಗೆ ಕಂಡರೂ ಯಾವುದೇ ಕ್ರಮ ಕೈಗೊಳ್ಳದೆ ಬಿಟ್ಟುಬಿಡುತ್ತಿದ್ದಾರೆ. ಅಕ್ರಮ ಮರಳುಕೋರರಿಂದ ಸೆಟ್ಟಿಂಗ್ ನಡೆಸಿದ ಪರಿಣಾಮ ಇದು. ಭ್ರಷ್ಟರ ಪರಮ ಅಡ್ಡೆಯಾಗಿ ಪರಿವರ್ತನೆಗೊಂಡಿದೆ ಜಿಲ್ಲೆಯ ಪರಮ ಭ್ರಷ್ಟ ಗಣಿ ಇಲಾಖೆ. ಜಿಲ್ಲೆಯಲ್ಲಿ ಕೆಂಪು ಮಣ್ಣು ಮಾಫಿಯಾ ಬಳ್ಳಾರಿಯನ್ನೇ ಮೀರಿಸಿದೆ. ಇಲ್ಲಿನ ಅಧಿಕಾರಿಗಳು ಮಣ್ಣು ಮಾಫಿಯಾದ ಕುಳಗಳಿಂದ ಮುಕ್ಕಿ ಮುಕ್ಕಿ ತಿನ್ನುತ್ತಿದ್ದಾರೆ. ಒಂದೇ ಒಂದು ಮಣ್ಣು ಲಾರಿಗಳಿಗೆ ಓವರ್ ಲೋಡ್ ಕೇಸು ಬಿಡಿ, ಅವರಿಗೆ ಸೆಲ್ಯೂಟ್ ಹೊಡೆದು ಪಾಸ್ ಮಾಡುತ್ತಾರೆ. ಇದರಲ್ಲಿ ಆರ್ ಟಿ ಓ, ಪೊಲೀಸರು, ಮಣ್ಣು ತಿನ್ನುವ ಇಲಾಖೆಯು ಶಾಮೀಲಾಗಿದೆ. ಈ ಮಣ್ಣಿನ ಧೂಳು ಇಲ್ಲಿನ ರಾಜಕಾರಣಿಗಳಿಗೂ, ಕೋಮುವಾದಿ ಸಂಘಟನೆಗಳಿಗೂ ಮೆತ್ತಿಕೊಂಡಿದೆ. ಜಿಲ್ಲೆಯಲ್ಲಿ ಅಧಿಕಾರಿಗಳಿಂದ ಹಗಲು ದರೋಡೆ ನಡೆಯುತ್ತಿದ್ದರೂ ಸಂಬಂಧ ಪಟ್ಟವರು ಕಾಂಚಾಣದ ಆಸೆಗಾಗಿ ಮೌನಕ್ಕೆ ಜಾರಿದ್ದಾರೆ. ನಾವು ಬುದ್ದಿವಂತರು ಸ್ವಾಮಿ.! ಬುದ್ದಿವಂತ ಜಿಲ್ಲೆಯ ಮಡಿವಂತರು.!!