ಶಿವಪುರಿ ದಲಿತ ಹತ್ಯೆ: ಬೋರ್ ವೆಲ್ ನಿಂದ ನೀರು ತುಂಬಿಸಿದ ಕಾರಣಕ್ಕೆ ಕ್ರೂರವಾಗಿ ಕೊಂದ ಮೇಲ್ಜಾತಿಯವರು.!

ರಾಜ್ಯ

ಗ್ರಾಮದ ಸರಪಂಚ್, ಆತನ ಪತ್ನಿ ಸೇರಿದಂತೆ ಐವರ ಬಂಧನ

ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಬೋರ್ ವೆಲ್ ನಿಂದ ನೀರು ತುಂಬಿಸುವ ವಿವಾದಕ್ಕೆ ಸಂಬಂಧಿಸಿದಂತೆ 27 ವರ್ಷದ ಪರಿಶಿಷ್ಟ ಜಾತಿ (ಎಸ್ ಸಿ) ವ್ಯಕ್ತಿಯನ್ನು ಗ್ರಾಮದ ಸರಪಂಚ್ ಮತ್ತು ಸರಪಂಚ್ ನ ಪತ್ನಿ ಸೇರಿದಂತೆ ಕನಿಷ್ಠ ಐವರು ವ್ಯಕ್ತಿಗಳು ಹೊಡೆದು ಕೊಂದಿದ್ದಾರೆ.

ರಾಜ್ಯದ ಗ್ವಾಲಿಯರ್ -ಚಂಬಲ್ ಪ್ರದೇಶದ ಸುಭಾಷ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಇಂದರ್ ಗಢ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದೆ.

ಗ್ವಾಲಿಯರ್ ಜಿಲ್ಲೆಯ ನಾರದ್ ಜಾತವ್ ಮೃತ ದಲಿತ ವ್ಯಕ್ತಿ ಎಂದು ಗುರುತಿಸಲಾಗಿದೆ. ನಾರದ್ ಜಾತವ್ ಇಂದರ್ ಗಢ ಗ್ರಾಮದಲ್ಲಿ ತನ್ನ ತಾಯಿಯ ಚಿಕ್ಕಪ್ಪನ ಹೊಲಗಳಿಗೆ ನೀರು ಹಾಕುತ್ತಿದ್ದಾಗ ಗ್ರಾಮದ ಸರಪಂಚ್ ಪದಮ್ ಸಿಂಗ್ ಧಕಡ್, ಸರಪಂಚ್ ನ ಪತ್ನಿ ದಾಖಾ ಬಾಯಿ ಮತ್ತು ಅವರ ಬೆಂಬಲಿಗರು ದೊಣ್ಣೆ ಮತ್ತು ರಬ್ಬರ್ ಪೈಪ್ ಗಳಿಂದ ಕ್ರೂರವಾಗಿ ಥಳಿಸಿದ್ದರು. ಈ ಘಟನೆಯನ್ನು ಹಲ್ಲೆಕೋರರು ಮೊಬೈಲ್ ಫೋನ್ ನಲ್ಲಿ ಚಿತ್ರೀಕರಿಸಿದ್ದರು. ಗುಂಪು ಹಲ್ಲೆಗೆ ಒಳಗಾದ ದಲಿತ ಯುವಕ ಪ್ರಜ್ಞೆ ತಪ್ಪಿ ಬಿದ್ದಿದ್ದ. ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ನಾರದನ ಸಂಬಂಧಿಕರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಎಂಟು ಆರೋಪಿಗಳ ವಿರುದ್ಧ ಎಸ್ ಸಿ/ ಎಸ್ ಟಿ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಗ್ರಾಮದ ಸರಪಂಚ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.