ಮಂಗಳೂರು: ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ವರ್ಗಾವಣೆಗೆ ದಲಿತ ಸಂಘರ್ಷ ಸಮಿತಿ ಆಗ್ರಹ

ಕರಾವಳಿ

ಸುರತ್ಕಲ್ -ನಂತೂರ್ ಹೆದ್ದಾರಿ ದುರಸ್ತಿ, ಕೂಳೂರು ಸೇತುವೆ ಕಾಮಗಾರಿ ಪೂರ್ಣಗೊಳಿಸುವಂತೆ ಹಾಗೂ ನಂತೂರು ಮೆಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಕೂಳೂರಿನ ಸೇತುವೆ ಸಮೀಪ ನಡೆಸಿದ್ದ ಶಾಂತಿಯುತ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮಿತಿಯ ಸಂಚಾಲಕರಾದ ಮುನೀರ್ ಕಾಟಿಪಳ್ಳ ಇವರ ಮೇಲೆ ಕಾವೂರು ಪೊಲೀಸ್ ಠಾಣೆ ಯಲ್ಲಿ ವಿನಾಃ ಕಾರಣ ಎಫ್. ಐ. ಆರ್. ದಾಖಲಿಸಿರುವ ಪೋಲೀಸರ ಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ -ದ. ಕ. ಜಿಲ್ಲಾ ಸಮಿತಿಯು ಖಂಡಿಸುತ್ತದೆ.

ಸುರತ್ಕಲ್ -ನಂತೂರು ಹೆದ್ದಾರಿಯು ಧೂಳು ಹಾಗೂ ಹೊಂಡ, ಗುಂಡಿಗಳಿಂದ ತುಂಬಿ ಹೋಗಿದ್ದು, ಈ ರಸ್ತೆಯಲ್ಲಿ ಹಲವಾರು ಅಫಘಾತಗಳು ನಡೆದು, ಅಮಾಯಕ ಸವಾರರ ಹಲವಾರು ಜೀವಗಳನ್ನು ಬಳಿ ತೆಗೆದುಕೊಂಡಿವೆ. ಸಾರ್ವಜನಿಕ ಹಿತಾಸ ಕ್ತಿಯ ನೆಲೆಯಲ್ಲಿ ಹೆದ್ದಾರಿ ದುರಸ್ತಿ ಮಾಡುವಂತೆ ಒತ್ತಾಯಿಸಿ ಇತ್ತೀಚೆಗೆ ಹೋರಾಟ ಸಮಿತಿಯು ಪ್ರತಿಭಟನಾ ಧರಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪ್ರತಿಭಟನೆಗೆ ಪೊಲೀಸು ಇಲಾಖೆಯ ಅನುಮತಿ ಕೋರಿ ಸುಮಾರು 10 ದಿನಗಳ ಮೊದಲೇ ಸಮಿತಿಯು ಲಿಖಿತ ಮನವಿ ಸಲ್ಲಿಸಿತ್ತು. ಆದರೆ ಅಷ್ಟು ದಿನ ತಟಸ್ಥವಾಗಿದ್ದ ಇಲಾಖೆ ಪ್ರತಿಭಟನೆಯ ಮುನ್ನಾ ದಿನ ಸಂಜೆಯ ವೇಳೆಗೆ ಅನುಮತಿ ನಿರಾಕರಿಸುವ ಮೂಲಕ ಜನಪರ ಉದ್ದೇಶವನ್ನು ಹೊಂದಿರುವ ಚಳವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿದೆ.

ಆದರೆ ಹೋರಾಟ ಸಮಿತಿಯು ನಿಗದಿತ ದಿನದಂದು ನಿಗದಿತ ಸ್ಥಳದಲ್ಲಿ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವ ಮೂಲಕ ಹೆದ್ದಾರಿ ಅವ್ಯವಸ್ಥೆಯ ವಿರುದ್ಧದ ಜನರ ಆಕ್ರೋಶವನ್ನು ಸಂಬಂಧಪಟ್ಟ ಇಲಾಖೆ ಹಾಗೂ ಸರಕಾರದ ಗಮನ ಸೆಳೆಯುವ ಪ್ರಯತ್ನವನ್ನು ನಡೆಸಿದೆ. ಪ್ರತಿಭಟನಾ ಧರಣಿ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ಅಥವಾ ಜನ ಸಂಚಾರ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗಿಲ್ಲ. ಆದರೂ ಕಾವೂರು ಪೊಲೀಸರು ಹೋರಾಟ ಸಮಿತಿಯ ಸಂಚಾಲಕರಾದ ಮುನೀರ್ ಕಾಟಿಪಳ್ಳ ಇವರ ಮೇಲೆ ದುರುದ್ದೇಶದಿಂದ ಸ್ವಯಂಪ್ರೇರಿತ ಕೇಸು ದಾಖಲಿಸಿರುವುದು ಖಂಡನೀಯ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮನ್ನಾಳುವ ಸರಕಾರಗಳು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದೇ ನಿರ್ಲಕ್ಶ್ಯ ವಹಿಸಿದಾಗ ಪ್ರತಿಭಟಿಸುವುದು ಸಂವಿಧಾನ ಬದ್ಧ ಹಕ್ಕು. ಪೊಲೀಸರು ಅದನ್ನು ನಿರಾಕರಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ. ಜನಪರ ಚಳವಳಿಗಾರರ ಮೇಲೆ ವಿನಾಃ ಕಾರಣ ಕೇಸು ಹಾಕಿ ಚಳವಳಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಪೊಲೀಸು ಇಲಾಖೆಯ ಇಂತಹ ಧೋರಣೆಯನ್ನು ಒಪ್ಪಲು ಸಾಧ್ಯವಿಲ್ಲ. ಸರಕಾರ ಮಧ್ಯ ಪ್ರವೇಶಿಸಿ ಮುನೀರ್ ಕಾಟಿಪಳ್ಳ ಇವರ ದುರುದ್ದೇಶದಿಂದ ಪೊಲೀಸರು ಹಾಕಿರುವ ಕೇಸನ್ನು ತಕ್ಷಣ ಹಿಂಪಡೆಯಬೇಕು. ಅಲ್ಲದೆ ಜನವಿರೋಧಿ ಪೊಲೀಸ್ ಕಮೀಷನರ್ ಅನುಪಮ ಅಗರ್ವಾಲ್ ರವರನ್ನು ತಕ್ಷಣದಿಂದಲೇ ಈ ಜಿಲ್ಲೆಯಿಂದ ವರ್ಗಾಯಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ )ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ -ದ. ಕ. ಜಿಲ್ಲಾ ಸಮಿತಿಯು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರನ್ನು ಆಗ್ರಹಿಸುತ್ತಿದೆ.