ಗುರುಪುರ ಮಠದಬೈಲಿನಲ್ಲಿ ಹೆಜ್ಜೇನು ದಾಳಿ ನಡೆಸಿ ಮೂವರು ಗಂಭೀರ ಗಾಯಗೊಂಡು, ಇಬ್ಬರಿಗೆ ಸಾಮಾನ್ಯ ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.
ಮಠದಬೈಲಿನ ಬೇಬಿ ಎಂಬವರು ಮನೆಯಂಗಳದಲ್ಲಿ ಇದ್ದ ವೇಳೆ ಹೆಜ್ಜೇನು (ಪೆರಿಯ) ಗುಂಪೊಂದು ದಾಳಿ ಮಾಡಿದೆ; ನೋವಿನಿಂದ ಕಿರುಚುತ್ತಾ ಹತ್ತಿರದ ರಸ್ತೆಗೆ ಓಡಿ ಬಂದ ವೇಳೆ ಅವರ ನೆರವಿಗೆ ಬಂದ ಗಣೇಶ್ ಮೇಲೆಯೂ ಹೆಜ್ಜೇನು ಎರಗಿದೆ. ಇವರಿಬ್ಬರು ತಪ್ಪಿಸಿಕೊಳ್ಳಲು ರಸ್ತೆಯಲ್ಲಿ ಓಡಾಡುತ್ತಿದ್ದ ಸಂದರ್ಭ ಇವರ ನೆರವಿಗೆ ಬಂದ ಶೋಧನ್ ರವರ ಮೇಲೂ ದಾಳಿ ಮಾಡಿದೆ.
ಹೆಜ್ಜೇನು ದಾಳಿಯಿಂದ ಗಂಭೀರ ಗಾಯಗೊಂಡ ಬೇಬಿ ಯಾನೆ ಸರೋಜಾ , ಗಣೇಶ್ ಕೊಟ್ಟಾರಿ, ಶೋಧನ್ ಎಂಬವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.