ವಿಟ್ಲ: ಗ್ಯಾಸ್ ಹಂಡೆ ಕಳ್ಳತನ; ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ನಟೋರಿಯಸ್ ಗ್ಯಾಸ್ ಅಂಡೆ ಕಳ್ಳ ಅಚ್ಚುಕು. ಮತ್ತೊಬ್ಬ ಅಶ್ರಫ್ ಪರಾರಿ.

ಕರಾವಳಿ

ಹೌದು, ಪೊಲೀಸರು ಕರ್ತವ್ಯದಲ್ಲಿ ಒಂದಿಷ್ಟು ನಿರ್ಲಕ್ಷ್ಯ ತೋರುತ್ತಾ ಎಡವಿದರೆ ಠಾಣಾ ಸರಹದ್ದು ಏನಾಗುತ್ತದೆ ಎಂಬುದಕ್ಕೆ ವಿಟ್ಲ ಠಾಣಾ ವ್ಯಾಪ್ತಿಯ ಉರಿಮಜಲು, ಅಳಕೆಮಜಲು, ಇಡ್ಕಿದು ಪರಿಸರ ಸಾಕ್ಷಿಯಾಗಿದೆ. ಪದೇ ಪದೇ ಕಳ್ಳತನ, ಗಾಂಜಾ, ಎಂಡಿಎಂಎ ಸೇರಿದಂತೆ ಅಪರಾಧ ಕೃತ್ಯಗಳಲ್ಲಿ ಅಳಕೆಮಜಲು, ಉರಿಮಜಲು ಪರಿಸರ ಕುಖ್ಯಾತಿ ಪಡೆದಿದೆ.

ಇಂದು ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಸಮೀಪದ ಹಡೀಲು ಎಂಬಲ್ಲಿ ಮನೆ ಮುಂದೆ ಇಟ್ಟಿದ್ದ ಗ್ಯಾಸ್ ಹಂಡೆಯನ್ನು ಹಾಡಹಗಲಲ್ಲೇ ಕದ್ದು ಆಟೋದಲ್ಲಿ ಎಸ್ಕೇಪ್ ಆಗಿದ್ದಾರೆ. ಗ್ಯಾಸ್ ವಿತರಕರು ಬಂದಾಗ ಹಂಡೆ ಮಾಯವಾಗಿದೆ. ತಕ್ಷಣವೇ ಮನೆಯವರು ಸಿಸಿ ಟೀವಿ ನೋಡಿದಾಗ ಆಟೋದಲ್ಲಿ ಹೊತ್ತೊಯ್ದ ಚಿತ್ರಣ ಕಂಡುಬಂದಿದೆ. ಊರೆಲ್ಲಾ ಸುದ್ದಿ ಹಬ್ಬುತ್ತಿದ್ದಂತೆ ಸ್ಥಳೀಯ ಯುವಕರು ಆಟೋ ರಿಕ್ಷಾವನ್ನು ಹುಡುಕಾಡಿದ್ದಾರೆ.

ಬೇರಿಕೆ ಎಂಬಲ್ಲಿ ಆಟೋವನ್ನು ತಡೆಯುತ್ತಿದ್ದಂತೆ ಓರ್ವ ಜಿಗಿದು ಪರಾರಿಯಾಗಿದ್ದಾನೆ. ಕೋಲ್ಪೆ ನಿವಾಸಿ ರಶೀದ್@ಅಚ್ಚುಕು ಎಂಬಾತ ಸಿಕ್ಕಿಬಿದ್ದು, ಒದೆ ತಿಂದ ಬಳಿಕ ವಿಟ್ಲ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಕಂಬಳೆಬೆಟ್ಟು, ಅಳಕೆಮಜಲು, ಉರಿಮಜಲು ಸುತ್ತಮುತ್ತ ಹಲವಾರು ಕಳ್ಳತನ ನಡೆದಿದ್ದರೂ ಈವರೆಗೂ ಕಳ್ಳರ ಪತ್ತೆ ಮಾಡುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ.‌

ಕೆಲದಿನಗಳ ಹಿಂದಷ್ಟೇ ಇಲ್ಲಿನ ಸ್ಪೇರ್ ಪಾರ್ಟ್ಸ್ ಅಂಗಡಿಯಲ್ಲಿ ನಡೆದಿದ್ದ ಕಳ್ಳತನದಲ್ಲಿ ಇದೇ ಅಚ್ಚುಕು, ಅಶ್ರಫ್ ಟೀಮ್ ಚಲನವಲನ ಸಿಸಿಟೀವಿಯಲ್ಲಿ ದಾಖಲಾಗಿದ್ದರೂ ಪೊಲೀಸರು ಕಳ್ಳರ ಪತ್ತೆ ಅಚ್ಚುವಲ್ಲಿ ವಿಫಲರಾಗಿದ್ದಾರೆ. ಶಾರದೋತ್ಸವ ದಿನ ಅಳಕೆಮಜಲುನಲ್ಲಿ ಹಾಡಹಗಲೇ ಮನೆಗೆ ನುಗ್ಗಿದ ಚೋರರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆದಿತ್ತು. ಸ್ಥಳೀಯರು ಇದೇ ಅಚ್ಚುಕು-ಅಶ್ರಫ್ ಟೀಮ್ ಬಗ್ಗೆ ಮಾಹಿತಿ ನೀಡಿದ್ದರೂ ಪೊಲೀಸರು ಅದ್ಯಾಕೋ ಇನ್ನೂ ತನಿಖೆ ನಡೆಸದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

ಸಂಪ್ಯ ಠಾಣಾ ವ್ಯಾಪ್ತಿಯ ರೆಂಜದಲ್ಲಿ ವೃದ್ಧರೊಬ್ಬರ ಮನೆಯಿಂದ ಇದೇ ಅಚ್ಚುಕು ಟೀಮ್ ಬೆಲೆಬಾಳುವ ಮೊಬೈಲ್ ಎಗರಿಸಿ ಪರಾರಿಯಾಗಿತ್ತು. ಈ ಬಗ್ಗೆ ಸಂಪ್ಯ ಠಾಣೆಗೆ ದೂರು ನೀಡಿದ್ದರೂ ಕಳ್ಳರ ಹಿಡಿಯುವಲ್ಲಿ ಪೊಲೀಸರು ಅದ್ಯಾಕೋ ಮುಂದುವರಿದಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ. ಇನ್ನಾದರೂ ಪೊಲೀಸರು ಕಳ್ಳರ ಬಗ್ಗೆ ಅನುಕಂಪ ತೋರಿಸದೇ ಖಾಕಿ ಸಮವಸ್ತ್ರದ ಘನತೆ-ಗೌರವ ಕಾಪಾಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.