ಕೋವಿಡ್ ವೇಳೆ ಹೈಕೋರ್ಟ್ ಆದೇಶಕ್ಕೆ ಡೋಂಟ್ ಕೇರ್.. ದುಪ್ಪಟ್ಟು ಡೊನೇಷನ್ ಪೀಕಿಸಿ ಬರೋಬ್ಬರಿ 346 ಕೋಟಿ ಲೂಟಿಗೈದ ಖಾಸಗಿ ಶಾಲೆಗಳು.!

ರಾಜ್ಯ

ಆರ್ ಟಿಇ ಅಡಿಯಲ್ಲಿ ಸೇರ್ಪಡೆಯಾದ ಮಕ್ಕಳಿಂದಲೂ ಶುಲ್ಕ ಸಂಗ್ರಹ.. ಸಿಎಜಿ ವರದಿಯಲ್ಲಿ ಬಹಿರಂಗ..ಸರಕಾರ ಕ್ರಮ ಕೈಗೊಳ್ಳುವಂತೆ ಶಿಫಾರಸು

ಮಹಾಮಾರಿ ಕೋವಿಡ್ ಸಾಮಾನ್ಯ ಜನತೆಗೆ ಸಂಕಷ್ಟ ತಂದೊಡ್ಡಿದ್ದರೆ, ಇದನ್ನೇ ಬಂಡವಾಳ ಮಾಡಿಕೊಂಡು ದುಡ್ಡು ಲೂಟಿಗೈದವರೂ ಇದ್ದಾರೆ. ಇದಕ್ಕೊಂದು ಸ್ಪಷ್ಟ ನಿದರ್ಶನ ಎಂಬಂತೆ ಕೋವಿಡ್ ಸಂಕಷ್ಟದ ಸಮಯದಲ್ಲಿ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಬರೋಬ್ಬರಿ 346 ಕೋಟಿ ರೂಪಾಯಿ ಲೂಟಿಗೈದಿರುವುದಾಗಿ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ಬೆಳಕು ಚೆಲ್ಲಿದೆ.

ಕೋವಿಡ್ ಸಂದರ್ಭದಲ್ಲಿ (2019-20 ನೇ ಶೈಕ್ಷಣಿಕ ವರ್ಷ) ಎಲ್ಲಾ ವಿದ್ಯಾರ್ಥಿಗಳಿಂದ ಶೇಕಡಾ 85 ರಷ್ಟು ಶುಲ್ಕವನ್ನು ಮಾತ್ರ ಸಂಗ್ರಹಿಸಬೇಕು ಎಂಬುದಾಗಿ ರಾಜ್ಯ ಹೈಕೋರ್ಟ್ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಆದೇಶಿಸಿತ್ತು. ಆದರೆ ಖಾಸಗಿ ಶಾಲೆಗಳು ಹೈಕೋರ್ಟ್ ಆದೇಶ ಮೀರಿ ಮಕ್ಕಳ ಪೋಷಕರಿಂದ ಸಂಪೂರ್ಣ ಶುಲ್ಕವನ್ನು ವಸೂಲಿ ಮಾಡಿರುವುದು ಪತ್ತೆಯಾಗಿರುವುದು ಹಾಗೂ ಕೆಲ ಖಾಸಗಿ ಶಾಲೆಗಳು ಕೋವಿಡ್ ವೇಳೆ ದುಪ್ಪಟ್ಟು ಶುಲ್ಕ ಸಂಗ್ರಹ ಮಾಡಿರುವುದು ಕಂಡುಬಂದಿದೆ. ಇದು ಕರ್ನಾಟಕ ಶಿಕ್ಷಣ ಕಾಯ್ದೆಯ ಸಂಪೂರ್ಣ ಉಲ್ಲಂಘನೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದು ಮಾತ್ರವಲ್ಲ ಆರ್ ಟಿ ಇ ಕಾಯ್ದೆಯಡಿ ಉಚಿತ ಶಿಕ್ಷಣಕ್ಕೆ ದಾಖಲಾದ ಮಕ್ಕಳಿಂದಲೂ ಶುಲ್ಕ ಸಂಗ್ರಹಿಸಿ, ಬಳಿಕ ಆ ಹಣವನ್ನು ಸರ್ಕಾರದಿಂದ ವಸೂಲಿ ಮಾಡಿರುವ ಗಂಭೀರ ಪ್ರಕರಣ ಕೂಡ ನಡೆದಿದೆ.

ಕರ್ನಾಟಕ ಶಿಕ್ಷಣ ಕಾಯ್ದೆಯ ಸೆಕ್ಷನ್ 48 ರೈ ನಿಬಂಧನೆಗಳನ್ನು ಕೂಡ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಉಲ್ಲಂಘಿಸಿವೆ. ಈ ಶಾಲೆಗಳು ಶಿಕ್ಷಣ ಕಾಯ್ದೆಯ ನಿಬಂಧನೆಗಳನ್ನು ಯಾಕೆ ಪಾಲಿಸುತ್ತಿಲ್ಲ? ಎಂಬ ಬಗ್ಗೆ ಸರಕಾರ ಸೂಕ್ತ ತನಿಖೆ ನಡೆಸುವಂತೆ ಸಿಎಜಿ ಸರಕಾರಕ್ಕೆ ಶಿಫಾರಸು ಮಾಡಿದೆ.

ಕೋವಿಡ್ ಅವಧಿಯಲ್ಲಿ ಆನ್ ಲೈನ್ ಕಲಿಕೆ ನಡೆಯುತ್ತಿತ್ತು. ಈ ಆನ್ ಲೈನ್ ವ್ಯವಸ್ಥೆಯಲ್ಲಿ ದಾಖಲಾದ ಮಕ್ಕಳ ಕಲಿಕೆಯ ಮಟ್ಟವನ್ನು ಮೇಲ್ವಿಚಾರಣೆ ಮಾಡಲಿಲ್ಲ. ಸರಕಾರದ ನಿಯಂತ್ರಣದ ಹೊರಗೆ ಕಾರ್ಯನಿರ್ವಹಿಸುವ ಆನ್ ಲೈನ್ ಶಾಲೆಗಳು ಸರಕಾರದ ಶಾಲೆಯಲ್ಲಿ ನಡೆಯುವ ಶಿಕ್ಷಣ ವ್ಯವಸ್ಥೆಯನ್ನು ಬಲವಾಗಿ ವಿಭಜಿಸಿದ್ದರಿಂದ ವಿದ್ಯಾರ್ಥಿಗಳ ಮೇಲೆ ಪರಿಣಾಮ ಆಗಿದೆ. ಆನ್ ಲೈನ್ ಶಾಲೆಗಳ ಮೇಲೆ ಯಾವುದೇ ನಿಯಂತ್ರಣ ಇಲ್ಲದೇ ಇದ್ದುದರಿಂದ ರಾಜ್ಯದ ಶಿಕ್ಷಣ ಕಾಯ್ದೆಯ ನಿಬಂಧನೆಗಳು ಪಾಲನೆಯಾಗಲಿಲ್ಲ ಮತ್ತು ಕೋವಿಡ್ ಅವಧಿಯಲ್ಲಿ ತಮಗೆ ಬೇಕಾದಂತೆ ಶುಲ್ಕ ಹಾಗೂ ಬೋಧನೆ ಮಾಡಿದೆ ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ.