ಬುದ್ಧಿವಂತರ ಜಿಲ್ಲೆಯಲ್ಲಿ ದಂಧಾ ಹೈ ದಂಧಾ.! ಹೊಡೆಯೋ.. ದಮ್ಮು..! ಹೆಣ್ಣು ಮಕ್ಕಳ ನಶೆಯಾಟ..!

ಕರಾವಳಿ

ಮುಖದಲ್ಲೊಂದು ಕುರುಚಲು ಗಡ್ಡ, ಮುಖದಲ್ಲಿ ಗೆರೆ ಹಾಕಿರೋ ತರಹ ಮೀಸೆಗಳು, ಅರ್ಥನೇ ಇಲ್ಲದ ಹೇರ್ ಸ್ಟೈಲ್, ಸೊಂಟದಿಂದ ಕೆಳಗೆ ಜಾರುವ ಪ್ಯಾಂಟ್ ಗಳು. ಅದರ ಜೊತೆ ಕೈಯಲ್ಲೊಂದು ಸಿಗರೇಟು. ಇವೆಲ್ಲಾ ಇತ್ತೀಚಿನ ಹುಡುಗರ ಫ್ಯಾಶನ್ ಗಳು. ಡ್ರಗ್ಸ್ ಅಂದಕೂಡಲೇ ಕೇವಲ ಔಷಧಿಗಳೇ ಅಲ್ಲ. ಅಯೋಡೆಕ್ಸ್ ನ್ನು ಬ್ರೆಡ್ ಜೊತೆ ತಿನ್ನುವುದು, ವೈಟ್ನರ್ ಅನ್ನು ಮೂಸಿ ನೋಡುವುದು. ಕೆಮ್ಮಿನ ಸಿರಪನ್ನು ಕುಡಿಯುವುದು. ಅವತಾರ್ ಎಂಬ ಸೀಸೆಯನ್ನು ಚೀಪುವುದು, ಪಂಕ್ಚರ್ ಗೆ ಉಪಯೋಗಿಸುವ ಟ್ಯೂಬ್ ಅನ್ನು ಬ್ರೆಡ್ ಜೊತೆ ತಿನ್ನುವುದು ಹಾಗೂ ಮಾಮೂಲಿ.. ಟ್ಯಾಬ್ಲೆಟ್, ಅಫೀಮು, ಗಾಂಜಾ ಇವೆಲ್ಲಾ ಡ್ರಗ್ಸ್ ಗಳೇ. ಇದನ್ನು ತಿಂದ್ರೆ ಏನಾಗುತ್ತೆ ಅನ್ನುವ ಪ್ರಶ್ನೆಗೆ ಇದನ್ನು ತಿಂದ ತಕ್ಷಣ ನಮ್ಮ ಮೆದುಳು ಜಾಗೃತವಾಗುತ್ತೆ. ನಾವು ಸ್ವರ್ಗ ಲೋಕದಲ್ಲೇ ತೇಲಾಡುತ್ತೇವೆ. ಸುಖದ ಪರಾಕಾಷ್ಠೆಗೆ ತಲುಪುತ್ತೇವೆ. ಅದು ಇಲ್ಲ ಅಂದರೆ ಬೇರೆ ಏನೂ ಇಲ್ಲ ಎಂಬೆಲ್ಲಾ ಅನುಭವಕ್ಕೆ ಬರುತ್ತೆ ಅಂತ ಡ್ರಗ್ಸ್ ಉಪಯೋಗಿಸುವವರೇ ಹೇಳುತ್ತಾರೆ.

ಕರಾವಳಿ ಅಂದರೆ ಶಿಕ್ಷಣಕ್ಕೆ ಹೆಸರುವಾಸಿ. ಇಲ್ಲಿರುವ ಶಿಕ್ಷಣ ಸಂಸ್ಥೆಗಳು ತಮ್ಮ ಅತ್ಯುತ್ತಮ ಮೌಲ್ಯಯುತ ಶಿಕ್ಷಣಕ್ಕೆ ಹೆಸರುವಾಸಿ. ಹೀಗಾಗಿ ರಾಜ್ಯ, ಹೊರ ರಾಜ್ಯದ ವಿದ್ಯಾರ್ಥಿಗಳು ಉಡುಪಿ, ಮಣಿಪಾಲ, ಮಂಗಳೂರು ನಗರಗಳತ್ತ ಮುಖ ಮಾಡುತ್ತಿದ್ದಾರೆ. ವರ್ಷಂಪ್ರತಿ ಸಹಸ್ರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಇನ್ನು ಡ್ರಗ್ಸ್, ಗಾಂಜಾ, ಮದ್ಯಪಾನ ಹೀಗೆ ಹಲವು ಕೆಟ್ಟ ಚಟಗಳು ಯುವಕರ ಜೀವನವನ್ನು ಬಲಿ ಪಡೆಯುತ್ತಿದೆ. ಆ ಮೂಲಕ ನಗರದ ಸ್ವಾಸ್ಥ್ಯ ಹಾಳಾಗುತ್ತಿದೆ. ಇಂದು ಬುದ್ಧಿವಂತರ ಜಿಲ್ಲೆಯಲ್ಲಿ ಯುವಕರು ಹಾಳಾಗುತ್ತಿದ್ದು ಮುಂದೆ ಯಾವ ಮಟ್ಟಕ್ಕೆ ಪರಿಣಾಮ ಬೀರುತ್ತೆ ಅನ್ನುವುದು ದೊಡ್ಡ ಆತಂಕಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ನಶಾ ಲೋಕದಲ್ಲಿ ತೇಲಾಡುವುದು ರಾತ್ರಿ ಆದರೆ ಸಾಕು ನಗರಗಳಲ್ಲಿ ಕಾಣಸಿಗುವ ಸಾಮಾನ್ಯ ದೃಶ್ಯವಾಗಿದೆ.

ನಗರ ಪ್ರದೇಶ ಮಾತ್ರವಲ್ಲದೆ, ನಗರದ ಹೊರವಲಯದಲ್ಲೂ ಡ್ರಗ್ಸ್ ಹಾವಳಿ ಮಿತಿ ಮೀರುತ್ತಿದೆ. ಡ್ರಗ್ಸ್, ಮಾದಕ ದ್ರವ್ಯ ಸೇವಿಸುವ ಯುವಕರ ಸಂಖ್ಯೆ ಜಾಸ್ತಿಯಾಗುತ್ತಿದೆ. ಎಳೆ ಯುವಕರು ಮಾದಕ ವ್ಯಸನಿಗಳು ಆಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ವಿದೇಶಿಗರು ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ಹಣದ ಆಮಿಷ ತೋರಿಸಿ ಡ್ರಗ್ಸ್ ಪೂರೈಕೆ ಮಾಡುತ್ತಿದೆ. 19, 20 ವರ್ಷದ ವಿದ್ಯಾರ್ಥಿಗಳ ಕೈಗೆ ಸಿಗುವ ಡ್ರಗ್ ಡೀಲರ್ ಗಳು ಪೊಲೀಸರ ಕೈಗೆ ಸಿಗೋದಿಲ್ಲ ಅನ್ನುವುದು ನಿಜಕ್ಕೂ ಆಶ್ಚರ್ಯಪಡುವಂತಹ ವಿಷಯ. ಹೆಣ್ಣು ಮಕ್ಕಳು ಕೂಡಾ ನಶೆಯ ಚಟಕ್ಕೆ ಬೀಳುತ್ತಿರುವುದು ಆತಂಕಪಡುವಂತದ್ದು. ಕಾಲೇಜು ವಿದ್ಯಾರ್ಥಿನಿಯರು ಡ್ರಗ್ಸ್ ವ್ಯಾಮೋಹಕ್ಕೆ ಬಲಿಯಾಗಿ ತಮ್ಮ ಭವಿಷ್ಯವನ್ನು ತಾವೇ ಹಾಳು ಮಾಡುತ್ತಿದ್ದಾರೆ. ರಾತ್ರಿ ಇಡೀ ಕಾರ್ಯಾಚರಿಸುವ ಪಬ್, ಬಾರ್ ಗಳು ಕೂಡಾ ಅನೈತಿಕ ಚಟುವಟಿಕೆ ಎಗ್ಗಿಲ್ಲದೆ ನಡೆಯುವುದಕ್ಕೆ ಕಾರಣವಾಗಿದೆ.

ಇನ್ನು ಕೆಲವು ಕಾಲೇಜು ಹುಡುಗರನ್ನೇ ಸೆಟ್ ಮಾಡಿಕೊಳ್ಳುವ ಗಾಂಜಾ ಗ್ಯಾಂಗ್ ಗಳು ಯೂನಿಫಾರ್ಮ್ ಧರಿಸಿದ ಹುಡುಗರ ಸ್ಕೂಲ್ ಬ್ಯಾಗಿನೊಳಗಿನಿಂದಲೇ ವ್ಯವಸ್ಥಿತವಾಗಿ ಗಾಂಜಾ ರವಾನೆ ಮಾಡಿಬಿಡುತ್ತಾರೆ. ಕೇವಲ ಗಾಂಜಾ ಮಾತ್ರವೇ ಅಲ್ಲ, ಭಯಾನಕವಾದ ಅಮಲು ಪದಾರ್ಥಗಳೂ ಅದರಲ್ಲಿ ಸೇರಿರುತ್ತವೆ. ಕೆಲವು ಹುಡುಗರಿಗೆ ಟ್ಯಾಬ್ಲೆಟ್ ಪೂರೈಕೆ ಮಾಡುವ ತಂಡಗಳೂ ಇವೆ. ಅಂತಹವುಗಳನ್ನು ಮಾರಾಟ ಮಾಡುವ ಮೆಡಿಕಲ್ ಶಾಪ್ ಗಳು ಇವೆ. ಕಾಲೇಜುಗಳ ಆವರಣಗಳು, ಕಾಲೇಜು ಸುತ್ತಮುತ್ತಲಿನ ಸಣ್ಣ ಪುಟ್ಟ ಅಂಗಡಿಗಳು, ಗಂಜಿ ಹೋಟೆಲ್ ಗಳು, ವಸತಿಗೃಹಗಳು ಡ್ರಗ್ಸ್ ಅಡ್ಡೆಗಳಾಗಿ ಪರಿವರ್ತನೆಯಾಗಿವೆ. ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದಕ್ಕೆ ಪ್ರಮುಖ ಗಿರಾಕಿಗಳಾಗಿರುವುದು ಆತಂಕದ ಸಂಗತಿ. ದೂರ ದೂರುಗಳಿಂದ ಇಲ್ಲಿ ಕಲಿಯಲೆಂದು ಬರುವ ವಿದ್ಯಾರ್ಥಿಗಳು ಹೆತ್ತವರ ಕಟ್ಟುಪಾಡುಗಳಿಲ್ಲದೆ ಎಲ್ಲೆ ಮೀರಿ ವರ್ತಿಸುತ್ತಾರೆ. ಇವರಿಗೆ ಮಜಾ ಮಾಡಲು ಸಾಕಷ್ಟು ಹಣ ಕೂಡಾ ಸಿಗುತ್ತದೆ. ಇವರ ಜೊತೆ ಸ್ಥಳೀಯ ವಿದ್ಯಾರ್ಥಿಗಳೂ ಸೇರುತ್ತಾರೆ. ಹಣ ಮತ್ತು ಹುಡುಗಿಯರನ್ನು ದುರ್ಬಳಕೆ ಮಾಡಿಕೊಳ್ಳುವ ಉದ್ದೇಶದ ಹುಡುಗರು ಸ್ವಲ್ಪ ಸ್ವಲ್ಪವೇ ಅಮಲು ನೀಡಿ ವ್ಯಸನಿಗಳಾಗಿಸುತ್ತಾರೆ.

ಕರಾವಳಿಯಲ್ಲಿ ಹಲವು ಸಂಘಟನೆಗಳು ಕಾರ್ಯಾಚರಿಸುತ್ತಿದ್ದರೂ ಡ್ರಗ್ಸ್ ವಿರುದ್ಧವಾಗಿ ಯಾವುದೇ ಸಂಘಟನೆಗಳು ಸೊಲ್ಲೆತ್ತದಿರುವುದು ಬೇಸರದ ಸಂಗತಿ. ಮತೀಯ ವಿಷಯಕ್ಕೆ ತಾ ಮುಂದು ನಾ ಮುಂದು ಎಂದು ಮುಗಿ ಬೀಳುವ ಸಂಘಟನೆಗಳು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಡ್ರಗ್ಸ್ ವಿರುದ್ಧ ಹೋರಾಟಕ್ಕೆ ಮುಂದಾಗದಿರುವುದು ಆಶ್ಚರ್ಯವೇ ಸರಿ. ಡ್ರಗ್ಸ್ ವಿರುದ್ಧ ರಾಜಕೀಯ ನಾಯಕರುಗಳು, ಧಾರ್ಮಿಕ ಮುಂದಾಳುಗಳು, ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳು ಪ್ರಬಲ ಜನಾಭಿಪ್ರಾಯ ಮೂಡಿಸುವ ಕೆಲಸಕ್ಕೆ ಮುಂದಾಗಬೇಕಿದೆ. ಪೋಷಕರ ಜವಾಬ್ದಾರಿಯೂ ಬಹಳಷ್ಟಿದೆ. ಆಂಟಿ ಡ್ರಗ್ಸ್ ಸ್ಕ್ವಾಡ್ ಇನ್ನಷ್ಟು ಬಲಯುತವಾಗಬೇಕಿದೆ. ಹಾಗಾದರೆ ಮಾತ್ರ ಸಮಾಜದ ಸ್ವಾಸ್ಥ್ಯ ಕೆಡಿಸುವ ಡ್ರಗ್ಸ್ ದಂಧೆಯನ್ನು ಮಟ್ಟ ಹಾಕಬಹುದಾಗಿದೆ.