ಕುಖ್ಯಾತ ಅಂತರಾಜ್ಯ ಮನೆ ಕಳ್ಳತನ ಆರೋಪಿ ಬಂಧಿಸಿದ ಪುತ್ತೂರು ಗ್ರಾಮಾಂತರ, ವಿಟ್ಲ ಮತ್ತು ಕಡಬ ಪೊಲೀಸರ ಜಂಟಿ ವಿಶೇಷ ತಂಡವು ಚಿನ್ನಾಭರಣ ಸಹಿತ 21ಲಕ್ಷ ಮೌಲ್ಯದ ಸೊತ್ತು ವಶಕ್ಕೆ ಪಡೆದಿದೆ. ಕಾಸರಗೋಡು ಜಿಲ್ಲೆಯ ಹೊಸಂಗಡಿ ಗ್ರಾಮದ ಮೂಡಂಬೈಲು ನವಿಲುಗಿರಿ ನಿವಾಸಿ ಕುಮಾರ ಎಂಬವರ ಪುತ್ರ ಸೂರಜ್(36)ಬಂಧಿತ ಆರೋಪಿ.

ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಮಂಕುಡೆ ಕಲ್ಕಾಜೆ, ಕುಂಟುಕುಡೇಲು, ಕಾಡುಮಠ, ಮಂಚಿ ಸಮೀಪದ ಇರಾ, ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಸರ್ವೆ ಗ್ರಾಮದ ಭಕ್ತಕೋಡಿ ಮತ್ತು ಕಡಬ ಠಾಣಾ ವ್ಯಾಪ್ತಿಯ ಆಲಂಗಾರು ಗ್ರಾಮದ ಕಲ್ಲೇರಿಯಲ್ಲಿ ನಡೆದಿದ್ದ ಒಟ್ಟು ಏಳು ಮನೆ ಕಳ್ಳತನ ಪ್ರಕರಣ ಈತನ ಬಂಧನದಿಂದಾಗಿ ಬಯಲಾಗಿವೆ. ಹಗಲು ಹೊತ್ತಿನಲ್ಲೇ ಮನೆಯವರಿಲ್ಲದ ಸಂದರ್ಭ ಹಿಂಬಾಗಿಲು ಮುರಿದು ಒಳನುಗ್ಗುವುದೇ ಈತನ ಹವ್ಯಾಸವಾಗಿದೆ.
ಜಿಲ್ಲಾ ಎಸ್ಪಿಯವರ ಮಾರ್ಗದರ್ಶನದಲ್ಲಿ ನಡೆದ ವಿಶೇಷ ಪೊಲೀಸ್ ತಂಡದ ಕಾರ್ಯಾಚರಣೆ ಇಲಾಖೆಯ ಮೇಲಿನ ಜನರ ವಿಶ್ವಾಸ ಮತ್ತು ನಂಬಿಕೆಯನ್ನು ಇಮ್ಮಡಿಗೊಳಿಸಿದೆ.