ಮಂಗಳೂರು : ನಗರದ ಬೀದಿ ವ್ಯಾಪಾರ ವಲಯ ಶಾಸಕ ವೇದವ್ಯಾಸ ಕಾಮತ್ ಬೀದಿ ವ್ಯಾಪಾರಿಗಳಿಗೆ ಮುಂಗೈಗೆ ಬೆಲ್ಲ ಹಚ್ಚಿ ಬಡ ಬೀದಿ ವ್ಯಾಪಾರಿಗಳಿಗೆ ಸಂಕಷ್ಟ ತಂದೊಡ್ಡಿದ್ದಾರೆ. ಬೀದಿ ವ್ಯಾಪಾರ ವಲಯ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಆರೋಪಿಸಿದರು ಅವರು ಇಂದು ನಗರದ ಬೀದಿ ವ್ಯಾಪಾರ ವಲಯದ ಎದುರು ಅವೈಜ್ಞಾನಿಕ, ಅಸುರಕ್ಷಿತ ಮತ್ತು ಅಸಮರ್ಪಕ ಬೀದಿ ವ್ಯಾಪಾರ ವಲಯದಲ್ಲಿ ವ್ಯಾಪಾರ ಮಾಡಲು ಬಲವಂತ ಮಾಡುತ್ತಿರುವ ನಗರ ಪಾಲಿಕೆ ಅಧಿಕಾರಿಗಳ ದಬ್ಬಾಳಿಕೆ ಖಂಡಿಸಿ ನಡೆದ ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡುತ್ತಿದ್ದರು.

ಬೀದಿ ವ್ಯಾಪಾರಿಗಳ ಹೋರಾಟ ಹತ್ತಿಕ್ಕಲಿಕ್ಕಾಗಿ ಬೀದಿ ವ್ಯಾಪಾರಿಗಳ ಐಕ್ಯತೆಯನ್ನು ಒಡೆದು ಅವರನ್ನು ಅತಂತ್ರಗೊಳಿಸಿ ಬಡ ಬೀದಿ ವ್ಯಾಪಾರಿಗಳನ್ನು ಸಂಕಷ್ಟಕ್ಕೆ ತಳ್ಳುವುದೇ ಶಾಸಕ ಕಾಮತ್ ಅವರ ಸಾಧನೆ ಎಂದು ಟೀಕಿಸಿದ ಅವರು ಬೀದಿ ವ್ಯಾಪಾರಿಗಳ ಹಕ್ಕುಗಳನ್ನು ರಕ್ಷಣೆ ಮಾಡಲು ಹೋರಾಟವನ್ನು ತೀವ್ರಗೋಳಿಸುತ್ತೇವೆ ಎಂದು ಸುನಿಲ್ ಕುಮಾರ್ ತಿಳಿಸಿದರು.

ಸಂಘದ ಗೌರವಧ್ಯಕ್ಷರಾದ ಬಿಕೆ ಇಮ್ತಿಯಾಜ್ ಮಾತನಾಡುತ್ತಾ ನಗರದ ಹೃದಯ ಭಾಗದಲ್ಲಿರುವ ಬೀದಿ ವ್ಯಾಪಾರ ನಾಲ್ಕು ವಾರ್ಡ್ ಗಳಲ್ಲಿ ಹರಡಿಕೊಂಡಿದೆ ಕೇವಲ ಒಂದು ವಾರ್ಡಿನ ಬೀದಿ ವ್ಯಾಪಾರಿಗಳನ್ನು ವಲಯದ ಒಳಗೆ ಕಳುಹಿಸಿ ಅವರನ್ನು ನಷ್ಟಕ್ಕೆ ತಳ್ಳಿ ಬಿಜೆಪಿ ಸಾಧನೆ ಎಂದು ಬಿಂಬಿಸಲು ಹೊರಟಿದೆ. ರಾಜ್ಯದ ವಿವಿಧ ನಗರಗಳಲ್ಲಿ ನಿರ್ಮಾಣಗೊಂಡಿರುವ ವ್ಯಾಪಾರ ವಲಯ ಒಂದೇ ಸೂರಿನಡಿಯಲ್ಲಿ ಹಣ್ಣು ತರಕಾರಿ ಮತ್ತು ಆಹಾರ ಮತ್ತಿತರ ವ್ಯಾಪಾರಿಗಳಿಗೆ ಪ್ರತ್ಯೇಕ ವಿಭಾಗಗಳನ್ನು ಮಾಡಿ ನಿರ್ಮಿಸಲಾಗಿದೆ.
ಮಂಗಳೂರಿನ ವ್ಯಾಪಾರ ವಲಯದಲ್ಲೇ ಆಹಾರ ತಯಾರಿಸಿ ಮಾರಾಟ ಮಾಡಲು ಅವಕಾಶ ನೀಡಿರುವುದರಿಂದ ಗ್ಯಾಸ್ ಅವಘಡ ಸಂಭವಿಸಿದರೆ ಅನಾಹುತಕ್ಕೆ ಯಾರು ಹೊಣೆ ಎಂದು ಇಮ್ತಿಯಾಜ್ ಪ್ರಶ್ನಿಸಿದರು.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಿಐಟಿಯು ಮುಖಂಡರಾದ ಯೋಗೀಶ್ ಜಪ್ಪಿನಮೊಗರು ಮಾತನಾಡಿದರು.

ಸಂಘದ ಮುಖಂಡರಾದ ವಿಜಯ ಜೈನ್, ಸಿಕಂದರ್ ಬೇಗ್, ಹಂಝ, ಶಿವಪ್ಪ, ಹಸನ್ ಕುದ್ರೋಳಿ, ರಫೀಕ್, ಮೇಬಲ್ ಡಿ ಸೋಜ, ಫೀಲೋಮಿನ, ಅಬ್ದುಲ್ ಖಾದರ್, ಹನೀಫ್ ಬೆಂಗ್ರೆ, ಗುಡ್ಡಪ್ಪ, ಮುತ್ತುರಾಜ್, ಗಂಗಮ್ಮ, ಮುಂತಾದವರು ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿ ವಂದಿಸಿದರು