ಟ್ಯಾಕ್ಸಿ ಡ್ರೈವರ್ ಗಳ ಬದುಕಿಗೆ ಬೆಳಕು ನೀಡುವ, ಸಂಕಷ್ಟಕ್ಕೆ ಮಿಡಿಯುವ, ಚಾಲಕರ ಪಾಲಿಗೆ ಆಪದ್ಭಾಂಧವ ಕರುಣ ಟ್ಯಾಕ್ಸಿ ಡ್ರೈವರ್ ಅಸೋಸಿಯೇಷನ್ (ರಿ)

ರಾಜ್ಯ

ವಿಭಿನ್ನ ಕಾನ್ಸೆಪ್ಟ್ ಮೂಲಕ ಗಮನ ಸೆಳೆಯುತ್ತಿರುವ ಸಂಸ್ಥೆಯ ಎರಡನೇ ವಾರ್ಷಿಕೋತ್ಸವ ಜನವರಿ 21 ರಂದು ಬಜಪೆಯಲ್ಲಿ

ಟ್ಯಾಕ್ಸಿ ಡ್ರೈವರ್ ಗಳೆಲ್ಲ ಸೇರಿ ಕರುಣ ಟ್ಯಾಕ್ಸಿ ಡ್ರೈವರ್ ಅಸೋಸಿಯೇಷನ್ (ರಿ) ಎಂಬ ಸಂಸ್ಥೆಗಳನ್ನು ಹುಟ್ಟು ಹಾಕಿ ಹಲವಾರು ವರ್ಷಗಳಿಂದ ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ವಾಟ್ಸಾಪ್ ನಲ್ಲಿ ಹೆಲ್ಪ್ ಲೈನ್ ಹೆಸರಿನಲ್ಲಿ ಟ್ಯಾಕ್ಸಿ ಡ್ರೈವರ್ ಗಳೆಲ್ಲ ಒಟ್ಟು ಸೇರಿ ಕಾರ್ಯಾಚರಿಸುತ್ತಿದ್ದು, ಹಲವು ಜನಪರ ಕಾರ್ಯಕ್ರಮಗಳನ್ನು ಕೈಗೊಂಡ ಹೆಗ್ಗಳಿಕೆ ಈ ಸಂಸ್ಥೆಗಿದೆ. ಕಳೆದ ವರ್ಷ ಆಗಸ್ಟ್ 7, 2023 ರಂದು ಟ್ಯಾಕ್ಸಿ ಡ್ರೈವರ್ ಅಸೋಸಿಯೇಷನ್ ನವರು ಒಟ್ಟು ಸೇರಿ ಕರ್ನಾಟಕ ಪ್ರವಾಸ ಕೈಗೊಂಡಿದ್ದು, ಈ ಪ್ರವಾಸಕ್ಕೆ ರಾಜ್ಯ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ರವರು ಚಾಲನೆ ನೀಡಿದ್ದರು.

ಈ ಸಂಸ್ಥೆಯ ವಿಶೇಷತೆ ಎಂದರೆ, ಇಡೀ ದೇಶದ ಟ್ಯಾಕ್ಸಿ ಡ್ರೈವರ್ ಗಳನ್ನು ಒಟ್ಟು ಸೇರಿಸುವ ಮಹತ್ವದ ಕಾರ್ಯಕ್ಕೆ ಇಳಿದಿದ್ದು, ಈಗಾಗಲೇ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ಮತ್ತು ಕೇರಳ ಸೇರಿದಂತೆ ಆರು ರಾಜ್ಯಗಳಲ್ಲಿ ಕರುಣ ಟ್ಯಾಕ್ಸಿ ಡ್ರೈವರ್ ಅಸೋಸಿಯೇಷನ್ ನಲ್ಲಿ ಸದಸ್ಯರಿದ್ದಾರೆ. ಕೇವಲ ವಿವಿಧ ರಾಜ್ಯಗಳ ಸದಸ್ಯರು ಮಾತ್ರವಲ್ಲ ಅವರ ಸಂಕಷ್ಟಗಳಿಗೆ ಮಿಡಿಯುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಕರ್ನಾಟಕದ ಟ್ಯಾಕ್ಸಿ ಕೇರಳಕ್ಕೆ ಹೋದಾಗ ಅಲ್ಲಿ ಆಕಸ್ಮಿಕವಾಗಿ ಏನಾದರೂ ತೊಂದರೆ ಅನುಭವಿಸಿದಾಗ, ಆತ ಈ ವಾಟ್ಸಾಪ್ ಗ್ರೂಪಿಗೆ ಮೆಸೇಜ್ ಹಾಕಿದರೆ ಸಾಕು, ಆ ರಾಜ್ಯದಲ್ಲಿರುವ ಈ ಗ್ರೂಪಿನ ಮೆಂಬರ್ಸ್ ಗಳು ತಕ್ಷಣ ಇವರ ಸಂಕಷ್ಟಕ್ಕೆ ಧಾವಿಸಿ ಬರುತ್ತಾರೆ.

ಅಪಘಾತ ಸಂಭವಿಸಿದಾಗ ಬೇಕಾದ ತುರ್ತು ಅಗತ್ಯಗಳು, ಸಂಬಂಧಿಸಿದ ಸೇವೆಯನ್ನು ಕೂಡ ಮಾಡುತ್ತಾರೆ. ಕೊನೆಯವರೆಗೂ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ವಿವಿಧ ರಾಜ್ಯಗಳಿಗೆ ಕೆಲಸದ ನಿಮಿತ್ತ ಹೋದ ಚಾಲಕರು ಅಲ್ಲಿ ಆಪಾಯ ಸಂಭವಿಸಿದಾಗ ನಮಗೆ ಯಾರೂ ಇಲ್ಲಿ ನೆರವಿಗೆ ಬರಲ್ಲ, ದಿಕ್ಕು ತೋಚದೇ ಇದ್ದಾಗ ಕರುಣ ಟ್ಯಾಕ್ಸಿ ಮೆಂಬರ್ಸ್ ಗಳು ಆಪದ್ಬಾಂಧವರಾಗಿ ಬರುತ್ತಾರೆ. ಇದೇ ಈ ಸಂಸ್ಥೆಯ ಕಾರುಣ್ಯ ಯೋಜನೆಯಾಗಿದೆ. ಅದಲ್ಲದೆ ಚಾಲಕರಿಗೆ ಏನಾದರೂ ಅಪಾಯ ಎದುರಾದರೂ ಅವರ ಸಂಕಷ್ಟಕ್ಕೆ ಮಿಡಿಯುವ ಕೆಲಸವನ್ನು ಮಾಡುತ್ತಾರೆ.

ಟ್ಯಾಕ್ಸಿ ಡ್ರೈವರ್ ಗಳ ಬದುಕಿಗೆ ಬೆಳಕಾದ ಕರುಣ ಅಸೋಸಿಯೇಷನ್ ಈ ವರ್ಷ ಎರಡನೇ ವಾರ್ಷಿಕೋತ್ಸವ ಸಮಾರಂಭವನ್ನು ಬಜಪೆ ಕರಂಬಾರು ಗಾರ್ಡನ್ ನಲ್ಲಿ ಜನವರಿ 21 ರಂದು ಹಮ್ಮಿಕೊಳ್ಳಲಾಗಿದೆ. ಅಂದು ವಾರ್ಷಿಕೋತ್ಸವ ಮತ್ತು ಮಹಾಸಭೆಯು ಜರುಗಲಿದೆ. ಈ ಸಂಸ್ಥೆಯ ವಿಶೇಷತೆ ಎಂದರೆ, ಯಾವೊಂದು ಕಾರ್ಯಕ್ರಮಗಳಲ್ಲೂ ರಾಜಕೀಯ ವ್ಯಕ್ತಿಗಳನ್ನು ವೈಭವೀಕರಿಸುವ ಕೆಲಸ ಮಾಡುತ್ತಿಲ್ಲ. ಜನಸಾಮಾನ್ಯರ ದಿನನಿತ್ಯದ ಸಮಸ್ಯೆಗಳಿಗೆ ಸ್ಪಂದಿಸುವ ಆರ್ ಟಿ ಒ ಅಧಿಕಾರಿಗಳು, ಪೊಲೀಸ್, ಟ್ರಾಫಿಕ್ ಅಧಿಕಾರಿಗಳು, ಸಿಬ್ಬಂದಿಗಳು, ಮೆಸ್ಕಾಂ, ವೈದ್ಯರು, ಅಂಚೆ ಪಾಲಕರು, ನಿವೃತ್ತ ಸೈನಿಕರು, ನಿವೃತ್ತ ಜೀವನ ನಡೆಸುವ ಹಿರಿಯ ಚಾಲಕರು ಅತಿಥಿಗಳು, ಅವರನ್ನು ಸನ್ಮಾನಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಪ್ರತಿ ವರ್ಷ ವಿಭಿನ್ನ ಕಾನ್ಸೆಪ್ಟ್ ಮೂಲಕ ಕರುಣ ಟ್ಯಾಕ್ಸಿ ಡ್ರೈವರ್ ಅಸೋಸಿಯೇಷನ್ ವಿಭಿನ್ನ ಕಾರ್ಯದಲ್ಲಿ ತೊಡಗಿಕೊಂಡಿದೆ.