ಖಾಸಗಿ ಪುಡ್ ಫೆಸ್ಟ್ ಕಾರ್ಯಕ್ರಮಕ್ಕೆ ಮೂರು ದಿನ ಮುಂಚಿತವೇ ಕರಾವಳಿ ಉತ್ಸವಕ್ಕೆ ತೆರೆ.!
ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆಯುತ್ತಿರುವ ಕರಾವಳಿ ಉತ್ಸವ ಜನವರಿ 19 ರವರೆಗೆ ನಡೆಯಲಿದೆ ಎಂದು ಈ ಹಿಂದೆ ಘೋಷಿಸಲಾಗಿತ್ತು. ಆದರೆ ಜನವರಿ 16 (ಇಂದು) ಮುಕ್ತಾಯಗೊಳ್ಳಲಿದೆ ಅನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಅಲ್ಲಿ ಕಾರ್ಯಾಚರಿಸುವ ಸ್ಟಾಲ್ ವ್ಯಾಪಾರಿಗಳಿಗೆಗಳಿಗೆ ಮೌಖಿಕವಾಗಿ ಈ ಬಗ್ಗೆ ಆದೇಶ ನೀಡಲಾಗಿದೆ ಅನ್ನಲಾಗಿದೆ. ಜನವರಿ 19 ಕ್ಕೆ ಮುಕ್ತಾಯವಾಗಬೇಕಿದ್ದ ಕರಾವಳಿ ಉತ್ಸವ ದಿಢೀರನೆ ಮೂರು ದಿನ ಮುಂಚಿತವಾಗಿ ಮುಕ್ತಾಯಗೊಳ್ಳಲಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಕರಾವಳಿ ಉತ್ಸವ ಗ್ರೌಂಡ್ ನಲ್ಲಿ ಹಲವಾರು ಸ್ಟಾಲ್ ಗಳು ತೆರೆದಿದ್ದು, ಶನಿವಾರ ಹಾಗೂ ಭಾನುವಾರ ಮಾತ್ರ ಇಲ್ಲಿ ಜನಜಂಗುಳಿ ಇರಲಿದೆ. ಆದರೆ ಈ ಬಾರಿ ಅಧಿಕೃತ ದಿನಾಂಕದ ಮೊದಲೇ ಮುಕ್ತಾಯಗೊಳ್ಳಲಿರುವುದು ಇದರ ಹಿಂದೆ ಖಾಸಗಿ ಲಾಬಿಯ ಕೈವಾಡವಿದೆ ಅನ್ನುವ ಮಾತುಗಳು ಇದೀಗ ಕೇಳಿ ಬರುತ್ತಿದೆ.

ಕರಾವಳಿ ಉತ್ಸವ ಮೈದಾನದ ಪಕ್ಕದಲ್ಲೇ ಇರುವ ಲೇಡಿ ಹಿಲ್ ಬಳಿ ಶಾಸಕರ ನೇತೃತ್ವದಲ್ಲಿ, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಮಂಗಳೂರು ಫುಡ್ ಫೆಸ್ಟಿವಲ್ ನಡೆಯಲಿರುವುದು, ಇದಕ್ಕಾಗಿ ಜಿಲ್ಲಾಡಳಿತ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನೇ ಎತ್ತಂಗಡಿ ಮಾಡಲಾಗುತ್ತಿದೆ ಅನ್ನಲಾಗುತ್ತಿದೆ. ವಾಣಿಜ್ಯ ಉದ್ದೇಶಕ್ಕಾಗಿ ನಡೆಯಲಿರುವ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ವತಿಯಿಂದ ನಡೆಯುತ್ತಿರುವ ಸರಕಾರಿ ಕಾರ್ಯಕ್ರಮವನ್ನೇ ನಿಲ್ಲಿಸುವುದು ಎಷ್ಟರ ಮಟ್ಟಿಗೆ ಸರಿ? ಸರಕಾರದ ಬೊಕ್ಕಸಕ್ಕೆ ನಷ್ಟವಲ್ಲವೇ? ಶನಿವಾರ, ಆದಿತ್ಯವಾರ ಹೆಚ್ಚಿನ ಜನಸಂದಣಿ ಸೇರುವುದರಿಂದ ಇದನ್ನೇ ನಂಬಿಕೊಂಡು ಸ್ಟಾಲ್ ಹಾಕಿರುವ ವ್ಯಾಪಾರಿಗಳಿಗೆ ಇದರಿಂದ ತೊಂದರೆಯಾಗುತ್ತಿಲ್ಲವೇ? ಇದಕ್ಕೆ ಯಾರು ಹೊಣೆ?

ಇನ್ನು ಶುಕ್ರವಾರ ಕಾರ್ಯಕ್ರಮ ನಿಮಿತ್ತ ಮುಖ್ಯಮಂತ್ರಿಯವರು ಮಂಗಳೂರಿಗೆ ಆಗಮಿಸಲಿದ್ದು, ಇದಕ್ಕಾಗಿ ಕರಾವಳಿ ಉತ್ಸವವನ್ನು ಅಧಿಕೃತ ದಿನಾಂಕದ ಮೊದಲೇ ಮುಗಿಸಲಾಗುತ್ತದೆ ಎಂದು ಕಾರ್ಯಕ್ರಮ ಆಯೋಜಕರು ನೆಪ ಹೇಳುತ್ತಿದ್ದಾರಂತೆ. ಮಂಗಳೂರು ಫುಡ್ ಫೆಸ್ಟಿವಲ್ ಗಾಗಿ ಸರಕಾರಿ ಕಾರ್ಯಕ್ರಮವನ್ನೇ ತರಾತುರಿಯಲ್ಲಿ ಮುಗಿಸುತ್ತಿರುವುದು ಯಾವ ನ್ಯಾಯ? ಜಿಲ್ಲಾಧಿಕಾರಿ ಈ ಬಗ್ಗೆ ಸ್ಪಷ್ಟನೆ ಕೊಡಬೇಕಾಗಿ ಆಗ್ರಹಗಳು ಕೇಳಿ ಬರುತ್ತಿದೆ.