ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್ ಆನಂದ್ ವರ್ಗಾವಣೆ; ರವಿಚಂದ್ರ ನಾಯಕ್ ನೂತನ ಆಯುಕ್ತರಾಗಿ ಆದೇಶ

ಕರಾವಳಿ

ಭ್ರಷ್ಟಾಚಾರಿಗಳ ಪಾಲಿಗೆ ಪರಮಾನಂದರಾಗಿದ್ದ, ಕೋಟಿ, ಕೋಟಿ ಡೀಲ್ ಮಾಸ್ಟರ್ ಗೆ ಎತ್ತಂಗಡಿ

ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಸಿ.ಎಲ್ ಆನಂದ್ ಅವರನ್ನು ವರ್ಗಾಯಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಸರಕಾರ ಆದೇಶಿಸಿದೆ.

ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಆನಂದ್ ಭ್ರಷ್ಟಾಚಾರಿಗಳ ಪಾಲಿಗೆ ಪರಮಾನಂದರಾಗಿದ್ದರು. ಕೋಟಿ ಕೋಟಿ ಡೀಲ್ ಪುರಾಣದಲ್ಲಿ ಭಾಗಿಯಾಗಿದ್ದರು ಅನ್ನುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸ್ಪೆಷಲ್ ನ್ಯೂಸ್ ಮೀಡಿಯಾ ಸಮಗ್ರವಾಗಿ ವರದಿ ಮಾಡಿತ್ತು. ಮಹಾನಗರ ಪಾಲಿಕೆಯಲ್ಲಿ ಕಳೆದ 10, 20 ವರ್ಷಗಳಿಂದ ಮೂಲೆ ಸೇರಿದ್ದ ಅಕ್ರಮ ಕಟ್ಟಡದ ಫೈಲ್ ಗಳು ‘ಆನಂದ’ ಕೃಪೆಯಿಂದ ಸಕ್ರಮಗೊಳ್ಳುತ್ತಿದ್ದವು. ಕೋಟಿ ಕೋಟಿ ಡೀಲ್ ಗಳು ನಡೆಯುತ್ತಿದ್ದವು. ಆಯುಕ್ತರ ಮಣ್ಣಗುಡ್ಡೆ ಕ್ವಾಟ್ರಸ್ ನಲ್ಲಿ ಎಲ್ಲಾ ಡೀಲ್ ಗಳು ನಡೆಯುತ್ತಿದ್ದವು. ಉದ್ಯಮಪತಿಗಳ ಟಿ.ಡಿ.ಆರ್ ಫೈಲ್ ದೊಡ್ಡ ಸುದ್ಧಿ ಮಾಡಿತ್ತು. ಲೋಕಾಯುಕ್ತ ರೈಡ್ ಕೂಡಾ ನಡೆದಿತ್ತು. ಮಹಾನಗರ ಪಾಲಿಕೆಯ ಹಿರಿಯ ಕಾಂಗ್ರೆಸ್ ಸದಸ್ಯರೊಬ್ಬರು ಆಯುಕ್ತರ ಡೀಲ್ ಪುರಾಣದ ಬಗ್ಗೆ ಪಾಲಿಕೆ ಸಭೆಯಲ್ಲೇ ಗುಡುಗಿದ್ದರು.

ಬೆಂದೂರ್ ವೆಲ್ ನ ಪ್ರತಿಷ್ಠಿತ ಉದ್ಯಮಿಯೊಬ್ಬರಿಗೆ ಸೇರಿದ ಅಪಾರ್ಟ್ ಮೆಂಟ್ ಕುಸಿದಾಗ ಶೋಕಾಸ್ ನೋಟಿಸ್ ನೀಡಿದ ಕಾರಣಕ್ಕಾಗಿ ಈ ಹಿಂದೆಯೇ ವರ್ಗಾವಣೆ ಆದೇಶ ಬಂದಿತ್ತು. ಆದರೆ ಬೆಂಗಳೂರಿಗೆ ತೆರಳಿ ಆದೇಶ ರದ್ದುಪಡಿಸಿದ್ದರು. ಆಯುಕ್ತರಾಗಿದ್ದ ಸಂದರ್ಭ ಭ್ರಷ್ಟಾಚಾರಿಗಳ ಪಾಲಿಗೆ ಮಹಾನಗರ ಪಾಲಿಕೆ ಮೃಷ್ಟಾನ್ನ ಭೋಜನ ಆಗಿತ್ತು. ಇದೀಗ ಆನಂದ್ ರವರನ್ನು ಮಂಗಳೂರಿನಿಂದ ವರ್ಗಾಯಿಸಲಾಗಿದೆ.

ಇದೀಗ ಆನಂದ್ ಅವರ ಜಾಗಕ್ಕೆ ಶಿವಮೊಗ್ಗ ತುಂಗಾ ಮೇಲ್ದಂಡೆ ಯೋಜನೆ ಭೂಸ್ವಾಧೀನಾಧಿಕಾರಿ ರವಿಚಂದ್ರ ನಾಯಕ್ ಅವರನ್ನು ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಆದೇಶ ಹೊರಡಿಸಲಾಗಿದೆ. ರವಿಚಂದ್ರ ನಾಯಕ್ ಮಂಗಳೂರಿನಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಮಂಗಳೂರು ಎ.ಸಿ (ಸಹಾಯಕ ಕಮೀಷನರ್) ಆಗಿದ್ದ ಸಂದರ್ಭ ಇಲಾಖೆಗೆ ಉತ್ತಮ ಹೆಸರು ತಂದುಕೊಟ್ಟಿದ್ದರು. ದಕ್ಷ ಅಧಿಕಾರಿ ಅನ್ನುವ ಹಿರಿಮೆ ಇದೆ.