ಮೂಡಾ ದಿಗ್ಬಂಧನ ಸ್ಥಿತಿ: ‘ಭೂ’ನಗರೀಕರಣ ದಾಖಲೆಗಳ ಪ್ರಮುಖ ಕೇಂದ್ರ; ಮೂಡಾ ಆಯುಕ್ತರು ಸಾರ್ವಜನಿಕ ಸ್ಪಷ್ಟೀಕರಣ ನೀಡಲಿ.

ಕರಾವಳಿ

ಮಂಗಳೂರು: ಜಿಲ್ಲೆಯ ಪ್ರಮುಖ ಭೂನಗರೀಕರಣ ದಸ್ತಾವೇಜುಗಳ ಪ್ರಮುಖ ಕೇಂದ್ರ, ನಗರ ಯೋಜನೆಗೆ ಪೂರಕ ಸುಗಮ ರಸ್ತೆ ಮೀಸಲು, ನಗರ ಸುಂದರೀಕರಣ, ನಿರ್ಮಾಣ ವರ್ಗೀಕರಣ ವಲಯ ಮೀಸಲು, ಕರಾವಳಿ ಅಭಿವೃದ್ಧಿ ಯೋಜನೆ ಇತ್ಯಾದಿ ವಿಷಯಗಳ ಬಗ್ಗೆ ಅಭಿವೃದ್ಧಿ ಅಪೇಕ್ಷಿತ ‘ಭೂ’ ವರ್ಗಾವಣೆಗೆ ಪೂರಕವಾದ ದಾಖಲೆಗಳನ್ನು ಶಿಫಾರಸುಗೊಳಿಸುವ ಪ್ರಮುಖ ಇಲಾಖೆಯ ಭಾಗವಾದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಇಂದು ಸಾರ್ವಜನಿಕ ಪ್ರವೇಶ ನಿರ್ಭಂದಿತ ಕಚೇರಿ ಆಗಿ ಮಾರ್ಪಟ್ಟು ನಿಂತಿದೆ.

ಸಾರ್ವಜನಿಕರು ಏಕ ನಿವೇಶನ ಅನುಮೋದನೆ, ಭೂ ಅನ್ಯಕ್ರಾಂತ, ವಲಯ ದೃಡೀಕರಣ ಇತ್ಯಾದಿ ಸವಲತ್ತುಗಳಿಗೆ ಸಂಪರ್ಕಿಸಿ ಸರಳವಾಗಿ ಪಡೆಯಬೇಕಾಗಿದ್ದ ಇಲಾಖೆ, ತನ್ನ ಸಿಬ್ಬಂದಿ, ಅಧಿಕಾರಿಗಳ ಭ್ರಷ್ಟಾಚಾರ ವ್ಯವಸ್ಥೆ, ಬ್ರೋಕರ್ ಮಧ್ಯವರ್ತಿಗಳ ಲಾಭಿ, ರಾಜಕಾರಣಿಗಳ ಹಸ್ತಕ್ಷೇಪ, ಅಕ್ರಮ ಕಡತ ಸೃಷ್ಟಿ, ನಕಲಿ ಭೂ ದಾಖಲೆ ಸಲ್ಲಿಕೆ ಇತ್ಯಾದಿ ಕಾರಣದಿಂದ ಪ್ರವೇಶ ದಿಗ್ಬಂಧನ ಸ್ಥಿತಿಗೆ ತಲುಪಿದೆ. ಸರಕಾರಕ್ಕೆ ಕಂದಾಯ ಸೃಷ್ಟಿಸುವ ಪ್ರಮುಖ ಪ್ರಾಧಿಕಾರ ಇಂದು ತನ್ನ ಕಚೇರಿಯಲ್ಲಿರುವ ಯಾವ ಕಡತ ಅಸಲಿ ಯಾವ ಕಡತ ನಕಲಿ ಎಂದು ದುರ್ಭಿನು ಹಿಡಿದು ಪರೀಕ್ಷೆಗೆ ಒಳಪಡಿಸುವ ಸ್ಥಿತಿ ನಿರ್ಮಾಣ ಆಗಿದೆ. ಕಳೆದ ಹತ್ತು ವರ್ಷಗಳಲ್ಲಿ ಈ ಪ್ರಾಧಿಕಾರ ಬಿಡುಗಡೆಗೊಳಿಸಿದ ದೃಢೀಕೃತ ಶಿಫಾರಸು ಪತ್ರಗಳ ನೈಜತೆಯನ್ನು ಪ್ರಶ್ನಿಸುವ ಹಂತಕ್ಕೆ ತಲುಪಿದೆ. ಈಗಾಗಲೇ ಬಿಡುಗಡೆ ಗೊಳಿಸಿದ ಶಿಫಾರಸು ಪತ್ರಗಳ ಆಧಾರದಲ್ಲಿ ಅಭಿವೃದ್ಧಿಗೊಂಡ ಸ್ತಿರಾಸ್ತಿಗಳ ದಸ್ತಾವೇಜುಗಳ ಕಾನೂನಾತ್ಮಕ ಮಾನ್ಯತೆ ಪ್ರಶ್ನಾರ್ಹ.

ಮೂಡದ ಏಕ ನಿವೇಶನ ಮತ್ತು ಅಧಿಕ ವಿಸ್ತೀರ್ಣ ವಿಭಜನೆ ಕಡತ ಪ್ರಕ್ರಿಯೆಗಳಲ್ಲಿ ಶುಲ್ಕ ಸೋರಿಕೆ, ರಶೀದಿಗಳ ಬಹು ಬಳಕೆ ಅಕ್ರಮವಾದ ಬಗ್ಗೆ ತೀವ್ರ ಗುಮಾನಿ ಇದ್ದು ಸಿಬ್ಬಂಧಿ ಮತ್ತು ಅಧಿಕಾರಿಗಳು ನೇರ ಶಾಮೀಲು ಆದ ಬಗ್ಗೆ ತೀವ್ರ ಸಂಶಯವಿದೆ. ಕಳೆದ ಹಲವು ವರ್ಷಗಳ ಲೆಕ್ಕ ಪತ್ರಗಳನ್ನು ಮರು ಪರಿಶೋಧನೆ ಮಾಡುವ ಅಗತ್ಯವಿದೆ.

ಮೂಡಾ ಸೇರಿದಂತೆ ಜಿಲ್ಲೆಯ ಹಲವು ಇಲಾಖೆಗಳಲ್ಲಿ ಮಧ್ಯವರ್ತಿಗಳು, ಅರೆ ಕಂದಾಯ ವೃತ್ತಿದಾರರು, ರಾಜಕಾರಣಿಗಳ ಚೇಲಾಗಳು ನಕಲಿ ನಕಾಶೆ, ನಕಲಿ ಭೂ ಪರಿವರ್ತನೆ ಆದೇಶ, ಅಲಭ್ಯ ಪ್ರಮಾಣ ಪತ್ರ, ಇತ್ಯಾದಿಗಳನ್ನು ಉಪಯೋಗಿಸಿ, ಅದನ್ನು ತಿದ್ದಿ, ಸರಕಾರದ ವಿವಿಧ ಇಲಾಖೆಗಳಿಗೆ ಸಲ್ಲಿಸಿ ಅನುಮೋದನೆ ಪಡೆದು ವಲಯ ನಿರ್ಬಂಧಿತ ಭೂಮಿಗಳಿಗೆ ಹೊಂದಾಣಿಕೆಗೊಳಿಸಿ, ಅನುಮೋದನೆ ಪಡೆದು, ನಕಲಿ ಸೃಷ್ಠಿಸಿ ಹುಟ್ಟಿರುವ ಅದೆಷ್ಟೋ ಕಡತಗಳು ಇಲಾಖೆಯಲ್ಲಿ ಪ್ರಕ್ರಿಯೆ ಗೊಂಡಿದೆ. ಈ ಬಗ್ಗೆ ಹಲವಾರು ಬಾರಿ ಸ್ಪೆಷಲ್ ನ್ಯೂಸ್ ಮೀಡಿಯಾ ಸುದ್ದಿ ಪ್ರಕಟಣೆ ಮಾಡಿ ಅಧಿಕಾರಿಗಳನ್ನು ಎಚ್ಚರಿಸುತ್ತಾ ಬಂದಿತ್ತು. ಆದರೆ ಅಮೇಧ್ಯ ತಿಂದು ಮಧವೇರಿದ ಅಧಿಕಾರಿಗಳು ಕಣ್ಣು ಮುಚ್ಚಿ ಸಹಕರಿಸಿದ ಕಾರಣ ಇಂದು ಮೂಡಾ ಕಛೇರಿಗೆ ನುಗ್ಗಿ ದಾಖಲೆಗಳನ್ನೇ ತಿದ್ದುವ ಮಟ್ಟಕ್ಕೆ ಬೆಳೆದಿದ್ದಾರೆ ರಾಜಕಾರಣಿಗಳ ಚೇಲಾಗಳು. ಸಾರ್ವಜನಿಕ ಹಿತ ದೃಷ್ಟಿಯಿಂದ ಸ್ಪೆಷಲ್ ನ್ಯೂಸ್ ಮೀಡಿಯಾ ಮಾಡಿರುವ ವರದಿಯ ಬಗ್ಗೆ ಗಮನ ಹರಿಸಿದ್ದಿದ್ದರೆ ಮೂಡಾಗೆ ಇಂದು ಈ ರೀತಿ ಸಾರ್ವಜನಿಕ ಪ್ರವೇಶ ದಿಗ್ಬಂಧನ ಸ್ಥಿತಿ ಬರುತ್ತಿರಲಿಲ್ಲ.

ಮೂಡಾ ಸಿಬ್ಬಂದಿ ಅಧಿಕಾರಿಗಳು ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳಲ್ಲಿ ಕೆಲವರು ನಾವು ಜಿಲ್ಲೆಯ ಪ್ರಭಾವಿ ರಾಜಕಾರಣಿಯ ಆಪ್ತರು ಎಂದು ತಮ್ಮನ್ನು ತಾವೇ ಬಿಂಬಿಸಿ ನಕಲಿಗಳನ್ನೇ ಸೃಷ್ಠಿಸಿ, ಕೊಟ್ಯಾಂತರ ರೂಪಾಯಿ ಕಮಾಯಿ ಮಾಡಿದ ವ್ಯಕ್ತಿಗಳ ನಿರಂತರ ಅವ್ಯವಹಾರದಿಂದಾಗಿ ಮೂಡದಲ್ಲಿ ಇಂದು ತನಿಖಾಧಿಕಾರಿಗಳು ಅಗೆದಷ್ಟೂ ನಿಲ್ಲದ ಅಕ್ರಮ ಕಡತಗಳು ಲಭ್ಯವಾಗುತ್ತಿದೆ. ಅದೆಷ್ಟೋ ನಕಲಿ.. ನಿರಾಕ್ಷೇಪಣಾ ಕಡತಗಳು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಹಂಚಿಕೆ ಆಗಿದೆ. ಈ ರೀತಿ ಹಂಚಿಕೆ ಆಗಿ ಹೋದ ಮೂಡಾ ದಾಖಲೆಗಳ ಬಗ್ಗೆ ಜನರ ಸಂಶಯವನ್ನು ನಿವಾರಿಸಲು ಹಾಲಿ ಮೂಡದಲ್ಲಿ ನಡೆಯುತ್ತಿರುವ ತನಿಖೆಯ ಬಗ್ಗೆ ಆಯುಕ್ತರು ಸಾರ್ವಜನಿಕ ಸ್ಪಷ್ಟೀಕರಣ ನೀಡಬೇಕಿದೆ ಮಾತ್ರವಲ್ಲದೆ ಈ ಬಗ್ಗೆ ತನಿಖೆ ನಡೆಸಲು ಒಂದು ತನಿಖಾ ತಂಡವನ್ನೂ ರಚಿಸಬೇಕಾಗಿದೆ. ಮೂಡಾ ಅಕ್ರಮದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರು ಯಾರೆಂದು ಸಾರ್ವಜನಿಕರಿಗೆ ತಿಳಿಯ ಪಡಿಸಬೇಕಿದೆ. ಇಲ್ಲದಿದ್ದಲ್ಲಿ ಆಯುಕ್ತರಿಗೆ ಕಳಂಕ ತಪ್ಪಿದ್ದಲ್ಲ.! ಜಿಲ್ಲೆಯ ಸಂಬಂಧ ಪಟ್ಟ ಎಲ್ಲಾ ಇಲಾಖೆಗಳು ಈಗಾಗಲೇ ಆನ್ ಲೈನ್ ಪ್ರಕ್ರಿಯೆ ಆರಂಭಗೊಳಿಸಿದ್ದು ಮೂಡಾ ಯಾಕೆ ಈ ಬಗ್ಗೆ ಇನ್ನೂ ಮೌನ ಇದೆ ಎಂಬುದು ಬಹಿರಂಗ ವಾಗಬೇಕಿದೆ.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಈ ಹಿಂದಿನ ಆಯುಕ್ತರಾಗಿದ್ದ ಮನ್ಸೂರ್ ಅಲಿ ಯವರು ದುಡ್ಡು ಕೊಡದ ನೂರಾರು ಫೈಲ್ ಗಳನ್ನು ವಿಲೇವಾರಿ ಮಾಡದೆ ಹಾಗೆಯೇ ಇಟ್ಟಿದ್ದರು. ಪ್ರಮುಖ ಉದ್ಯಮಿಯೊಬ್ಬರಿಗೆ ಸೇರಿದ ಟಿಡಿಆರ್ ಫೈಲ್ ಸಖತ್ ಸುದ್ಧಿಯನ್ನಂತೂ ಮಾಡಿತ್ತು. ಇದೇ ಕಾರಣಕ್ಕಾಗಿ ಲೋಕಾಯುಕ್ತ ರೈಡ್ ಗೆ ಸಿಲುಕಿ ಜೈಲು ಪಾಲಾಗಿದ್ದರು. ಮಾತ್ರವಲ್ಲ ಅಂದಿನ ಆಯುಕ್ತರು ಮಧ್ಯವರ್ತಿಗಳಿಗೆ ದುಡ್ಡಿನ ಗಂಟನ್ನು ನೀಡುತ್ತಿದ್ದಾರಂತೆ. ಅದನ್ನು ಈ ದಲ್ಲಾಳಿಗಳು ಹಿಂದಿರುಗಿಸದೆ ಮೂರು ನಾಮ ಹಾಕಿದ್ದು ಕೂಡ ಇದೆ. ಮಧ್ಯವರ್ತಿಗಳ ಪಾಲಿಗೆ ಈ ಮೂಡಾ ಪರಮ ಭ್ರಷ್ಟಾಚಾರ ಎಸಗುವ ತಾಣವಾಗಿ ಪರಿವರ್ತನೆಗೊಂಡಿತ್ತು. ಲಂಚ ತಿನ್ನುವ ಅಧಿಕಾರಿಗಳು ಇವರಿಗೆ ಸಾಥ್ ಕೊಟ್ಟಿದ್ದರು. ಆನಂತರ ಬಂದ ಆಯುಕ್ತೆ ಮೊದಮೊದಲು ಭಾರೀ ಸ್ಟ್ರಿಕ್ಟ್ ಅನ್ನುವ ಪೋಸು ಕೊಟ್ಟಿದ್ದರು. ಆದರೆ ಮೂರೇ ತಿಂಗಳಲ್ಲಿ ಅಸಲಿಯತ್ತು ಬಹಿರಂಗಗೊಂಡಿತ್ತು. ಹಿಂದಿನ ಆಯುಕ್ತರಿಗೆ ಫೈಟ್ ಕೊಡುವಂತೆ ದಲ್ಲಾಳಿಗಳಿಗೆ ಮುಕ್ತ ಅವಕಾಶವನ್ನೇ ಕೊಟ್ಟಿದ್ದರು. ಅಧಿಕಾರಿಗಳು ಇಲ್ಲದಿದ್ದಾಗ ನೇರವಾಗಿಯೇ ಕಚೇರಿಗೆ ನುಗ್ಗಿ ಫೈಲ್ ತಿದ್ದುವಷ್ಟರ ಮಟ್ಟಿಗೆ ಪರ್ಮೀಶನ್ ದೊರಕಿತ್ತು. ಎಲ್ಲರೂ ಉಂಡೆದ್ದು ಮೇಲೆ ಈಗ ಸಾರ್ವಜನಿಕರಿಗೂ ಪ್ರವೇಶ ನಿರಾಕರಣೆಯಂತಹ ಮಟ್ಟಿಗೆ ನಗರಾಭಿವೃದ್ಧಿ ಬಂದು ತಲುಪಿದೆ. ಇದೆಂತಹ ವಿಚಿತ್ರ ಅಲ್ಲವೇ?

ಈ ಹಿಂದೆ ಮೂಡಾ ಹಾಗೂ ಇನ್ನಿತರ ಇಲಾಖೆಯಲ್ಲಿ ನಡೆದ, ನಡೆಸಿದ, ಅಧಿಕಾರಿಗಳು ಶಾಮೀಲಾಗಿದ್ದ ನಕಲಿ ಹಾವಳಿ ಬಗ್ಗೆ ಸಂಕ್ಷಿಪ್ತ ವರದಿ ಮತ್ತು ಮಾಹಿತಿಯನ್ನು ಸ್ಫೆಷಲ್ ನ್ಯೂಸ್ ಮೀಡಿಯಾದಲ್ಲಿ ಹಲವಾರು ಬಾರಿ ನೀಡಲಾಗಿತ್ತು. ಹಾಗಿದ್ದೂ ಇಂದು ಇಲಾಖೆಗಳು ಸಾರ್ವಜನಿಕ ನಿರ್ಭಂದ ಸ್ಥಿತಿಗೆ ಕಾರಣವಾದದ್ದು ನಕಲಿ ದಂಧೆಯ ಅಸಲಿಯತ್ತು ಎಂಬುದು ಸಾಬೀತಾಗಿದೆ. ಸರಕಾರಿ ಇಲಾಖೆಯ ದೃಢೀಕೃತ ದಾಖಲೆಗಳನ್ನು ನಕಲಿ ಗೊಳಿಸುವಷ್ಟು ಮುಂದುವರಿದ ಈ ಪ್ರತಿಭೆಗಳ, ಅಧಿಕಾರಿಗಳ ಕೈ ಚಳಕಕ್ಕೆ ನೈಜ ವಕೀಲರು ಅದೆಷ್ಟೋ ಬಾರಿ ಮೂರ್ಖರಾದದ್ದು ಇದೆ. ಮೂಡಾ ಸಿಬ್ಬಂದಿಗಳು, ಅಧಿಕಾರಿಗಳು ಕುಳ ತಿಮಿಂಗಿಲ ಸ್ಥಿತಿಗೆ ತಲುಪಲು ಬಿಲ್ಡರ್ ಲಾಭಿ ಪ್ರಮುಖ ಕಾರಣ. ಅದೆಷ್ಟೋ ಅಧಿಕಾರಿಗಳು ಈ ಹಿಂದೆಯೇ ಸಖತ್ ಸಫಲು ಕೊಯ್ದು ಜಾಗ ಖಾಲಿ ಮಾಡಿದ್ದು, ಅವರ ಅಕ್ರಮ ಇಂದು ಪೋಸ್ಟ್ ಮಾರ್ಟಮ್ ಸ್ಥಿತಿಯಲ್ಲಿದೆ. ವೇತನಕ್ಕಿಂತ ಮೀರಿದ ವರಮಾನ ಹೊಂದಿದ ಅದೆಷ್ಟೋ ಅಧಿಕಾರಿಗಳು ಇಂದು ತಮ್ಮ ಸುಖಾ ಜೀವನವನ್ನು ಆಸ್ವಾದಿಸುತ್ತಿದ್ದಾರೆ. ಈ ಮಧ್ಯೆ ಸಾಮಾನ್ಯ ಜನರು ಮನೆ ನಿರ್ಮಾಣ ಮಾಡುವುದು ಎಲ್ಲಿಯ ಮಾತು, ತಮ್ಮ ಒಂದು ಪೀಳಿಗೆಯನ್ನು ಭೂದಾಖಲೆ ಪಡೆಯಲು ವ್ಯಯ ಗೊಳಿಸಬೇಕಾಗುತ್ತದೆ.