ಬಹುಸಂಸ್ಕೃತಿ ಉತ್ಸವ ಕೋಮು ಶಕ್ತಿ ಮಣಿಸಲು.! ಕೋಮು ಶಕ್ತಿಗಳೊಂದಿಗೆ ‘ಕೈ’ ಜೋಡಿಸಿದ ಸೋಕಾಲ್ಡ್ ನಾಯಕರು.!

ಕರಾವಳಿ

ಖಾಲಿ ಕುರ್ಚಿಯೆಂದು ಮುಖ್ಯಮಂತ್ರಿಗೆ ಆಂತರಿಕ ವರದಿ ರವಾನೆ ಮಾಡಿದ ನಾ(ಲಾ)ಯಕರು ಯಾರು..?

ಉಂಡು ಹೋದ.. ಕೊಂಡು ಹೋದ.. ಹುಳಿ ಹಿಂಡಿದ, ಯಾರೀತ.?

ಮಂಗಳೂರು ಪುರಭವನದಲ್ಲಿ ಜನವರಿ 17 ರಂದು ಜರುಗಿದ ತುಳು, ಕೊಂಕಣಿ, ಬ್ಯಾರಿ, ಅರೆಭಾಷೆ,ಕೊಡವ ಮತ್ತು ಯಕ್ಷಗಾನ ಅಕಾಡೆಮಿ ಜಂಟಿ ಸಹಭಾಗಿತ್ವದಲ್ಲಿ ಜರುಗಿದ ಬಹು ಸಂಸ್ಕೃತಿ ಉತ್ಸವ ವಿವಾದ ದಿನದಿಂದ ದಿನಕ್ಕೆ ವಿವಿಧ ಆಯಾಮಗಳನ್ನು ಪಡೆಯುತ್ತಿದೆ. ಕಾಂಗ್ರೆಸ್ ಸರಕಾರವೇ ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷ, ಸದಸ್ಯರನ್ನು ನೇಮಿಸಿತ್ತು . ಇದೀಗ ಕಾಂಗ್ರೆಸ್ ನ ಕೆಲವು ಪುಡಿ ನಾಯಕರು ಅಕಾಡೆಮಿಯ ಬಗ್ಗೆನೇ, ಅದರ ಅಸ್ತಿತ್ವ ಬಗ್ಗೆನೇ ವಿವಿಧ ತರಹೇವಾರಿ ಬರಹಗಳನ್ನು ಬರೆಯುತ್ತಿದ್ದು ಒಟ್ಟಾರೆಯಾಗಿ ಬಹು ಸಂಸ್ಕೃತಿ ಉತ್ಸವ ಮುಗಿದರೂ ಬಹಳ ಸದ್ದು ಮಾಡುತ್ತಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಒಳಪಟ್ಟ ಆರು ಅಕಾಡೆಮಿಗಳು ಒಟ್ಟು ಸೇರಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಎರಡೆರಡು ಬಾರಿ ಈ ಕಾರ್ಯಕ್ರಮ ಮುಂದೂಡುತ್ತಲೇ ಬಂದಿದ್ದರು. ಮುಖ್ಯಮಂತ್ರಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆನ್ನುವ ಇರಾದೆಯಿಂದ ಸಂಘಟಕರು ದಿನಾಂಕವನ್ನು ಮುಂದೂಡುತ್ತಲೇ ಇದ್ದರು. ಆದರೆ ಜನವರಿ 17 ರಂದು ಮುಖ್ಯಮಂತ್ರಿ ಮಂಗಳೂರು ಭೇಟಿ ನಿಗದಿಯಾಗಿದ್ದರಿಂದ ಅದೇ ದಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯಮಂತ್ರಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಬೇಕಿತ್ತು . ಆದರೆ ಮಂಗಳೂರು, ಬಾವುಟಗುಡ್ಡೆ, ಮೇರಿಹಿಲ್ ಬಳಿ ಮುಖ್ಯಮಂತ್ರಿಯವರು ಬೆಳಿಗ್ಗೆಯಿಂದ ಸಂಜೆಯವರೆಗೂ ಇದ್ದರೂ, ಇದರ ಅನತಿ ದೂರದಲ್ಲಿದ್ದ ಪುರಭವನಕ್ಕೆ ಸಮಯ ನಿಗದಿಪಡಿಸಲು ಸಾಧ್ಯವಾಗಿಲ್ಲ ಅನ್ನುವುದು ದುರಂತ ಎನ್ನದೇ ಬೇರೆ ವಿಧಿಯಿಲ್ಲ.

ಬಹುಸಂಸ್ಕೃತಿ ಉತ್ಸವ ಅನ್ನುವುದೇ ಇಲ್ಲಿನ ಕೋಮು ಶಕ್ತಿಗಳನ್ನು ಮಣಿಸುವ ಉದ್ದೇಶದಿಂದ ನಡೆಸಲ್ಪಟ್ಟ ಕಾರ್ಯಕ್ರಮ. ಕರಾವಳಿ ಭಾಗದಲ್ಲಿ ಕೋಮು ಶಕ್ತಿಗಳು ವಿಜೃಂಭಿಸುತ್ತಿದ್ದರೂ, ಜಾತ್ಯತೀತ ಶಕ್ತಿಗಳು ಮೌನಕ್ಕೆ ಜಾರಿ ಅಕ್ಷರಶಃ ಶರಣಾಗಿದೆ ಅಂದರೆ ತಪ್ಪಲ್ಲ. ಆದರೆ ವಿವಿಧ ಅಕಾಡೆಮಿಗಳ ಪ್ರಗತಿಪರ ಚಿಂತನೆ ಉಳ್ಳವರು ಎಲ್ಲಾ ಅಕಾಡೆಮಿಗಳನ್ನು ಒಟ್ಟು ಸೇರಿಸಿ ಕರಾವಳಿಯ ಬಹು ಸಂಸ್ಕೃತಿಯನ್ನು ವಿವಿಧ ಸಮುದಾಯಕ್ಕೆ ಪರಿಚಯಿಸುವ ಮಹತ್ತರ ಉದ್ದೇಶ ಹೊಂದಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜವಾದದ ಹಿನ್ನಲೆಯಿಂದ ಬಂದವರಾಗಿದ್ದರಿಂದ ಇದನ್ನು ಅವರ ಕೈಯಾರೆ ಉದ್ಘಾಟಿಸಿದರೆ ತಳಮಟ್ಟಕ್ಕೂ ಇದು ರೀಚ್ ಆಗುತ್ತಿತ್ತು. ವಿವಿಧ ಚಿಂತಕರು, ಪ್ರಗತಿಪರರು, ಜಾತ್ಯಾತೀತ ಮನೋಭಾವನೆ ಉಳ್ಳ ಸಮಾನ ಮನಸ್ಕರೆಲ್ಲಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಳೆದ ಚುನಾವಣೆಯಲ್ಲಿ ಇವರೆಲ್ಲ ಬಿಜೆಪಿ ವಿರುದ್ಧ ಆಂದೋಲನ ನಡೆಸಿದ್ದ ಪ್ರಮುಖರೇ ಕೆಲವರು ಆಗಿದ್ದರು. ಆದರೆ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಅವರ ಸಂದೇಶಗಳು ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಕಾಂಗ್ರೆಸ್ ಗೆಲುವಿಗೆ ತಮ್ಮ ಕೊಡುಗೆಯನ್ನು ನೀಡಿದ್ದರು. ಸಂಖ್ಯೆಗಿಂತ ಅಲ್ಲಿ ಅವರ ವೈಚಾರಿಕತೆ ಬಹಳಷ್ಟು ಜನರಿಗೆ ತಲುಪಿತ್ತು. ಆದರೆ ಕಾಂಗ್ರೆಸಿನ ಕೆಲ ಮಂದಿ ನಾಯಕರಿಗೆ ಜಿಲ್ಲೆಯಲ್ಲಿ ಕೋಮು ತಣಿಯಬಾರದು ಎಂಬ ದುರುದ್ದೇಶವಿದೆ ಮಾತ್ರವಲ್ಲದೆ ಅ ಬೆಂಕಿಯಲ್ಲು ಅವರು ಚಳಿಕಾಯಿಸುತ್ತಾರೆ. ಬಹು ಸಂಸ್ಕ್ರತಿಯಿಂದ ಜಿಲ್ಲೆಯಲ್ಲಿ ಶಾಂತಿ ಸ್ಥಾಪನೆಯಾಗುವುದು ಅವರಿಗೆ ಇಷ್ಟವಿಲ್ಲ.

ಮುಖ್ಯಮಂತ್ರಿಯವರು ಬಹು ಸಂಸ್ಕೃತಿ ಉತ್ಸವ ಉದ್ಘಾಟಿಸುವುದು ಪಕ್ಕಾ ಆಗಿತ್ತು. ಪೊಲೀಸ್ ಇಲಾಖೆ, ಶ್ವಾನದಳ ಎರಡೆರಡು ಬಾರಿ ಪುರಭವನ ಆಸುಪಾಸು ತಪಾಸಣೆ ಮಾಡಿತ್ತು. ಆದರೆ ಮುಖ್ಯಮಂತ್ರಿಯವರು ಹೆಲಿಪ್ಯಾಡ್ ನಲ್ಲಿ ಇಳಿದ ನಂತರವೇ ಅಲ್ಲೊಂದು ಚಮತ್ಕಾರ ನಡೆದಿತ್ತು. ಪುರಭವನದಲ್ಲಿ ಕುರ್ಚಿಗಳು ಖಾಲಿ.. ಖಾಲಿ ಉದ್ಘಾಟನೆಗೆ ಹೋಗದಂತೆ ಕಾಂಗ್ರೆಸ್ಸಿನ ಕೆಲವು ಜಾತ್ಯಾತೀತ ನಾ(ಲಾ)ಯಕರು ಗುಳ್ಳೆಬ್ಬಿಸಿ ಕಿವಿ ಊದಿದರಂತೆ. ಇವರು ಬೆಳಿಗ್ಗೆ ಕಾಂಗ್ರೆಸ್, ರಾತ್ರಿ ಚಡ್ಡಿ ಹಾಕುವವರು, ಇಲ್ಲಿನ ಕೋಮು ಶಕ್ತಿಗಳನ್ನು ಮಣಿಸದೆ ಅದನ್ನು ನೀರು, ಗೊಬ್ಬರ ಹಾಕಿ ಪೋಷಿಸುವವರು. ಸರಕಾರ ಬಂದಾಗ ಇಂತಹ ಗೋಮುಖ ವ್ಯಾಘ್ರಗಳಿಗೆ ಆಯಕಟ್ಟಿನ ಹುದ್ದೆಯಂತೂ ಕಟ್ಟಿಟ್ಟ ಬುತ್ತಿ.

ಬೆಳಿಗ್ಗೆ 8.00 ಕ್ಕೆ ಅಕಾಡೆಮಿಯ ಅಧ್ಯಕ್ಷರೊಬ್ಬರಿಗೆ ಕಾಂಗ್ರೆಸ್ ನ ಪ್ರಚಾರಪ್ರಿಯ ನಾಯಕನೊಬ್ಬ ಪೋನ್ ಕರೆ ಮಾಡಿ ಪುರಭವನದಲ್ಲಿ ಖಾಲಿ ಖಾಲಿ ಕುರ್ಚಿ ಇದೆಯಂತೆ ಎಂದು ಪೋನ್ ಕರೆ ಮಾಡಿದ್ದಾರಂತೆ. ಅದಕ್ಕೆ ಅಧ್ಯಕ್ಷರು ಕಾರ್ಯಕ್ರಮ ಆರಂಭಗೊಳ್ಳುವುದೇ ಬೆಳಿಗ್ಗೆ 9.30 ಕ್ಕೆ ಆಗ ಜನ ಸೇರುತ್ತಾರೆ ಎಂದು ಉತ್ತರಿಸಿದ್ದಾರಂತೆ. ಆದರೆ ಅವರೆಲ್ಲರೂ ಮುಖ್ಯಮಂತ್ರಿಯವರು ಆಗಮಿಸುತ್ತಾರೆ ಎಂದು ಕಾದು ಕಾದು ಸುಸ್ತಾದರೇ ಹೊರತು ಕಾರ್ಯಕ್ರಮ ಉದ್ಘಾಟಿಸಲು ಮುಖ್ಯಮಂತ್ರಿಯವರು ಇತ್ತ ತಲೆ ಹಾಕಲೇ ಇಲ್ಲ. ಇದರ ಹಿಂದೆ ಕೆಲವು ಕಾಂಗೈನ ನಾ(ಲಾ)ಯಕರ ಕೈವಾಡ ಇರುವುದಂತೂ ಸುಳ್ಳಲ್ಲ. ಈ ಕಾರ್ಯಕ್ರಮಕ್ಕೆ ಬಿಡುವು ಮಾಡಿಕೊಂಡು ಸಭಾಧ್ಯಕ್ಷರು ಆಗಮಿಸಿದ್ದರು. ಪುರಭವನ ಆ ಸಮಯದಲ್ಲಿ ಜನರಿಂದ ತುಂಬಿ ತುಳುಕಿತ್ತು. ಕಾಂಗ್ರೆಸಿನ ನಾ(ಲಾ)ಯಕರ ಅಸಮಾಧಾನಕ್ಕೆ ಉತ್ತರ ಕೊಡಲೋ ಏನೋ.. ತುಳು ಅಕಾಡೆಮಿ ಅಧ್ಯಕ್ಷರು, ಸಭಿಕರೆಲ್ಲ ಎದ್ದು ನಿಂತು ಸಭಾಧ್ಯಕ್ಷರಿಗೆ ಗೌರವ ಚಪ್ಪಾಳೆ ತಟ್ಟಿ ಎಂದು ಮನವಿ ಮಾಡಿಕೊಂಡಿದ್ದರು. ಸಭಿಕರೆಲ್ಲ ಎದ್ದು ನಿಂತು ಗೌರವ ಸೂಚಿಸಿದ್ದರು. ಪುರಭವನ ತುಂಬೆಲ್ಲ ಜನರ ರಾಶಿಯೇ ಇತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನಾದರೂ ಮನವರಿಕೆ ಮಾಡಿ ಸಿದ್ದಣ್ಣನ ಗಮನಕ್ಕೆ ತರಬಹುದಿತ್ತು ಆದರೆ ಅ ಕೆಲಸವಾಗಲಿಲ್ಲ. ಮಾತ್ರವಲ್ಲ ಸಂಘಟಕರು ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಿದ್ದರು. ಒಟ್ಟು ಅಂದಾಜು 2,250 ಮಂದಿ ಊಟ ಮಾಡಿದ್ದರಂತೆ. ಕಾರ್ಯಕ್ರಮದ ಸಂಘಟಕರು 1,500 ಮಂದಿಗೆ ಊಟದ ವ್ಯವಸ್ಥೆ ಮಾಡಿದ್ದರು. ಆದರೆ ಅದು ಸಾಕಾಗದೆ ಇದ್ದಾಗ 750 ಮಂದಿಗೆ ಬೇಕಾದ ಊಟದ ವ್ಯವಸ್ಥೆಯನ್ನು ಹೆಚ್ಚುವರಿಯಾಗಿ ತರಿಸಿದ್ದರು.

ಪ್ರಶ್ನೆ ಮೂಡುವುದು ಎಂದರೆ ಮುಖ್ಯಮಂತ್ರಿ ಬರುವ ಕಾರ್ಯಕ್ರಮಕ್ಕೆ ಇಷ್ಟೊಂದು ಜನ ಸಾಕಾಗಲ್ವೇ.? ಲಕ್ಷಗಟ್ಟಲೆ ಜನರನ್ನು ಸೇರಿಸಲು ಇದೇನೂ 500,1000 ರೂಪಾಯಿ ಕೊಟ್ಟು ಬಾಡಿಗೆ ಜನ ತರುವ ಸಮಾವೇಶವಲ್ಲ. ಪ್ರಗತಿಪರ ಚಿಂತಕರು, ಸಾಹಿತಿಗಳು, ಪತ್ರಕರ್ತರು, ವಿದ್ಯಾರ್ಥಿಗಳು ಸೇರಿರುವ ಕಾರ್ಯಕ್ರಮ. ಇವರೆಲ್ಲ ಕೋಮು ಶಕ್ತಿ ಮಣಿಸಲು ಸ್ವ ಇಚ್ಛೆಯಿಂದ ಸೇರಿದ ಜನಸಮುದಾಯ. ಒಬ್ಬೊಬ್ಬ ಬರಹಗಾರ ಸಾವಿರಾರು ಜನರ ಮನಪರಿವರ್ತಿಸುವ ಕೆಫಾಸಿಟಿ ಉಳ್ಳವರಾಗಿದ್ದರು. ಆದರೆ ಸೋಕಾಲ್ಡ್ ಮುಖಂಡರಿಗೆ ಜೈಕಾರ ಹೇಳುವವರು, ಭಟ್ಟಂಗಿಗಳು ಮಾತ್ರ ಇದ್ದರಷ್ಟೇ ಅದು ಸಮಾವೇಶ ಅಂದುಕೊಂಡಿದರೋ ಏನೋ.. ಉಳ್ಳಾಲ ಭಾಗದ ಕಾಂಗ್ರೆಸ್ ಮಾಧ್ಯಮ ವಕ್ತಾರರೊಬ್ಬರು ಅಲ್ಲಿ ಖಾಲಿ ಕುರ್ಚಿ ಇತ್ತು, ಹೋಗದೆ ಇದ್ದದ್ದೇ ಒಳ್ಳೆಯದಾಯಿತು. ಬಾಡೂಟ ಸವಿದ ಮನೆಯಲ್ಲಿ ನೂರಾರು ಜನರಿದ್ದರು ಅನ್ನುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಗೀಚಿಕೊಂಡಿದ್ದಾರೆ. ಕೋಮು ಶಕ್ತಿಗಳ ವಿರುದ್ಧ ಒಂದು ಅಕ್ಷರ ಬರೆಯುವ ಕೆಫಾಸಿಟಿ ಇಲ್ಲದ ನಾಲಾಯಕರು ಮಾಧ್ಯಮ ವಕ್ತಾರರಾಗಿದ್ದಾರೆ. ಮತ್ತೆ ಪಕ್ಷ ಹೇಗೆ ಗೆಲ್ಲುವುದು. ಇಲ್ಲಿನ ಕೆಲವು ಅಂಡೆ ಪಿರ್ಕಿ ನಾಯಕರ ತಲೆಯಲ್ಲಿ ಅಡರಿದ ಮಧವಿದೆ. ನಾವೇ ಗೆಲ್ಲಬೇಕು.. ನಮಗೇನೇ ಅಧಿಕಾರಬೇಕು ಎಂದು. ಆದರೆ ಒಂದು ನೆನಪಿಡಿ ಎಲ್ಲದ್ದಕ್ಕೂ ಕಾಲವೇ ಉತ್ತರಿಸುತ್ತದೆ ಕಾದುನೋಡೋಣ.