ಯಡಿಯೂರಪ್ಪ ಹೇಳಿದ ಟಾಪ್ ಸೀಕ್ರೆಟ್; ಮಿಂಚಿ ಮರೆಯಾದ ಕು.ಬಂಗಾರಪ್ಪ
✍️. ಆರ್. ಟಿ. ವಿಠ್ಠಲಮೂರ್ತಿ
ಕಳೆದ ವಾರ ಪಕ್ಷದ ಕಚೇರಿಯಲ್ಲಿ ಜಿಲ್ಲಾ ನಾಯಕರ ಸಭೆ ನಡೆಸಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಚಿಂತೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿಯವರು ಪದೇ ಪದೇ ಕರ್ನಾಟಕಕ್ಕೆ ಬರುವುದು ಅಷ್ಟು ಸೇಫ್ ಅಲ್ಲ ಎಂದಿದ್ದಾರೆ.
ಹೀಗೆ ಏಕಾಏಕಿಯಾಗಿ ದೊಡ್ಡ ಗೌಡರು ಇಂತಹ ಮಾತುಗಳನ್ನಾಡಿದಾಗ ಸಭೆಯಲ್ಲಿದ್ದ ನಾಯಕರು ಬೆಚ್ಚಿಬಿದ್ದಿದ್ದಾರೆ. ಅಷ್ಟೇ ಅಲ್ಲ. ಅವರೇಕೆ ಇಂತಹ ಮಾತುಗಳನ್ನಾಡಿದರು ಎಂದು ತಿಳಿಯದೆ ಮೌನಕ್ಕೆ ಜಾರಿದ್ದಾರೆ.
ತಾವಾಡಿದ ಮಾತಿಗೆ ಸಭೆ ಮೌನವಾಗಿದ್ದನ್ನು ಕಂಡ ದೇವೇಗೌಡರು ತಮ್ಮ ಮಾತಿನ ಅರ್ಥವೇನೆಂದು ಸಭೆಗೆ ವಿವರಿಸಿದ್ದಾರೆ.
‘ಅಲ್ರೀ..ಕುಮಾರಸ್ವಾಮಿ ಅವರೀಗ ಕೇಂದ್ರ ಸಚಿವರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇವರ ಮೇಲೆ ತುಂಬು ವಿಶ್ವಾಸವಿಟ್ಟು ಉಕ್ಕು ಮತ್ತು ಕೈಗಾರಿಕೆಯಂತಹ ಮಹತ್ವದ ಖಾತೆ ಕೊಟ್ಟಿದ್ದಾರೆ. ಹೀಗೆ ಗುರುತರವಾದ ಖಾತೆಯನ್ನು ಕುಮಾರಸ್ವಾಮಿ ಅವರಿಗೆ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಸುಮ್ಮನಿರುತ್ತಾರಾ? ನೋ ಚಾನ್ಸ್. ಅರ್ಥಾತ್, ಇಂತಹ ಮಹತ್ವದ ಖಾತೆಯನ್ನು ಕುಮಾರಸ್ವಾಮಿಯವರು ಹೇಗೆ ನಿರ್ವಹಿಸುತ್ತಿದ್ದಾರೆ. ಅದಕ್ಕಾಗಿ ಎಷ್ಟು ಸಮಯ ಕೊಡುತ್ತಿದ್ದಾರೆ ಅಂತ ನೋಡುತ್ತಲೇ ಇರುತ್ತಾರೆ.
ಹೀಗಾಗಿ ಕುಮಾರಸ್ವಾಮಿಯವರು ಇನ್ನು ಮುಂದೆ ಪದೇ ಪದೇ ಕರ್ನಾಟಕಕ್ಕೆ ಬರುವುದು, ಇಲ್ಲೇ ಹೆಚ್ಚು ಸಮಯ ಕಳೆಯುವುದು ಸರಿಯಲ್ಲ. ಹಾಗಂತ ಅವರು ಪದೇ ಪದೇ ಕರ್ನಾಟಕಕ್ಕೆ ಬರುತ್ತಿರುವುದು ತಪ್ಪು ಅಂತ ನಾನು ಹೇಳುತ್ತಿಲ್ಲ. ಯಾಕೆಂದರೆ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಬಲಗೊಳಿಸುವ ಉದ್ದೇಶದಿಂದ ಅವರು ಪದೇ ಪದೇ ಬರುತ್ತಿದ್ದಾರೆ. ಆದರೆ ಇನ್ನು ಮುಂದೆ ಪಕ್ಷ ಕಟ್ಟಲು ಉಳಿದವರು ಹೆಚ್ಚು ಕೆಲಸ ಮಾಡಬೇಕು. ಕುಮಾರಸ್ವಾಮಿಯವರು ದಿಲ್ಲಿಯಲ್ಲೇ ತಮ್ಮ ಗಮನ ಕೇಂದ್ರೀಕರಿಸಿ ಪ್ರಧಾನಿಯವರ ನಿರೀಕ್ಷೆಯಂತೆ ಕೆಲಸ ಮಾಡಬೇಕು’ ಅಂತ ದೇವೇಗೌಡರು ವಿವರಿಸಿದಾಗ ಸಭೆಯಲ್ಲಿದ್ದ ನಾಯಕರಿಗೆ ಒಂದು ವಿಷಯ ಸ್ಪಷ್ಟವಾಗಿದೆ. ಅದೆಂದರೆ ಕುಮಾರಸ್ವಾಮಿ ದಿಲ್ಲಿಗೆ, ನಿಖಿಲ್ ಕುಮಾರಸ್ವಾಮಿ ಇಲ್ಲಿಗೆ ಎಂದು ಸ್ಪಷ್ಟವಾಗಿದೆ.

ಹಾಗಂತ ನಿಖಿಲ್ ಅವರು ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷರಾಗಲಿದ್ದಾರೆ ಎಂಬುದು ಹೊಸ ವಿಷಯವೇನಲ್ಲ. ಆದರೆ ಏಪ್ರಿಲ್ ಹೊತ್ತಿಗೆ ನಿಖಿಲ್ ಅಧ್ಯಕ್ಷರಾಗುವ ಕಾಲಕ್ಕೆ ಕುಮಾರಸ್ವಾಮಿ ಅವರು ರಾಷ್ಟ್ರ ರಾಜಕಾರಣದ ಮೇಲೆ ತಮ್ಮ ಸಂಪೂರ್ಣ ಗಮನ ಹರಿಸಲಿ ಎಂಬುದು ದೇವೇಗೌಡರ ಇಚ್ಚೆ.
ಯಾಕೆಂದರೆ ಕುಮಾರಸ್ವಾಮಿ ಅವರು ರಾಷ್ಟ್ರ ರಾಜಕಾರಣದ ಮೇಲೆ ಗಮನ ನೆಡದೆ ಹೋದರೆ, ಇಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಪೂರ್ತಿಯಾಗಿ ನೀರಿಗೆ ಧುಮುಕುವುದು ಯಾವಾಗ ಎಂಬುದು ದೊಡ್ಡ ಗೌಡರ ಚಿಂತೆ.
ಕುತೂಹಲದ ವಿಷಯವೆಂದರೆ ಪಕ್ಷದ ನಾಯಕರ ಸಭೆಯಲ್ಲಿ ಯಾವಾಗ ದೇವೇಗೌಡರು ಈ ಆತಂಕ ವ್ಯಕ್ತಪಡಿಸಿದರೋ? ಇದಾದ ನಂತರ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕರ್ನಾಟಕಕ್ಕೆ ಬರುವುದನ್ನು ಕಡಿಮೆ ಮಾಡಿದ್ದಾರೆ. ಅದೇ ರೀತಿ ಬಂದಾಗಲೆಲ್ಲ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಹರಿಹಾಯುವುದನ್ನು ಕಡಿಮೆ ಮಾಡಿದ್ದಾರೆ.
ಕೆಪಿಸಿಸಿ ಪಟ್ಟಕ್ಕೆ ಅಪ್ಪಾಜಿ.?
ಈ ಮಧ್ಯೆ ರಾಜ್ಯ ಕಾಂಗ್ರೆಸ್ ನ ಗೊಂದಲಕ್ಕೆ ಬ್ರೇಕ್ ಹಾಕಲು ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬಂದಿದ್ದರಲ್ಲ? ಅವರು ಬಂದ ನಂತರ ಕರ್ನಾಟಕದಲ್ಲಿ ಅಧಿಕಾರ ಹಂಚಿಕೆಯ ಮಾತಿಗೆ ಬ್ರೇಕ್ ಬಿದ್ದಿರುವುದೇನೋ ನಿಜ. ಆದರೆ ಅದೇ ಕಾಲಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸು ಮಾತ್ರ ಬಿರುಸಾಗಿಯೇ ಮುಂದುವರಿದಿದೆ.
ಈ ರೇಸಿಗೆ ಹೊಸತಾಗಿ ಸೇರ್ಪಡೆಯಾಗಿರುವುದು ಅಪ್ಪಾಜಿ ನಾಡಗೌಡರ ಹೆಸರು. ವಾಸ್ತವವಾಗಿ ಅರ್ಹತೆ ಮತ್ತು ಹಿರಿತನದ ಕಾರಣಕ್ಕಾಗಿ ಯಾವತ್ತೋ ದೊಡ್ಡ ದೊಡ್ಡ ಸ್ಥಾನಗಳನ್ನು ಪಡೆಯಬೇಕಿದ್ದ ಅಪ್ಪಾಜಿ ನಾಡಗೌಡರು ಸ್ವಭಾವತ: ಸಜ್ಜನ. ಹೀಗಾಗಿ ಅಧಿಕಾರಕ್ಕಾಗಿ ಲಾಬಿ-ಗೀಬಿ ಮಾಡದ ಅವರು ಸಿಕ್ಕ ಸ್ಥಾನಮಾನಗಳನ್ನು ಗೌರವದಿಂದ, ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಆದರೆ ಯಾವಾಗ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸಿನಲ್ಲಿ ಸತೀಶ್ ಜಾರಕಿಹೊಳಿ, ಡಿ.ಕೆ.ಸುರೇಶ್, ಈಶ್ವರ ಖಂಡ್ರೆ, ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಹಲವು ಹೆಸರುಗಳು ಕಾಣಿಸಿಕೊಂಡವೋ? ಇದಾದ ನಂತರ ಸ್ವತ: ಸಿಎಂ ಸಿದ್ಧರಾಮಯ್ಯ ಅವರು ಈ ರೇಸಿಗೆ ಅಪ್ಪಾಜಿ ನಾಡಗೌಡರ ಹೆಸರನ್ನು ತಂದು ನಿಲ್ಲಿಸಿದ್ದಾರೆ.
ಕುತೂಹಲದ ಸಂಗತಿ ಎಂದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ನಾಯಕ ಎಂ.ಬಿ.ಪಾಟೀಲ್ ಬರಲಿ ಅಂತ ಮೊನ್ನೆ ಮೊನ್ನೆಯ ತನಕ ಸಿದ್ಧರಾಮಯ್ಯ ಬಯಸಿದ್ದರು.
ಹೇಗಿದ್ದರೂ ಅಹಿಂದ ವರ್ಗಗಳ ಸೈನ್ಯ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಜತೆ ನಿಂತಿದೆ. ಇಂತಹ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲ್ ಬಂದರೆ ಅಹಿಂದ ಪ್ಲಸ್ ಲಿಂಗಾಯತ ಶಕ್ತಿ ಒಂದಾದ ಹಾಗಾಗುತ್ತದೆ. ಆ ಮೂಲಕ ಕಾಂಗ್ರೆಸ್ ಶಕ್ತಿ ಹಿಗ್ಗುತ್ತದೆ ಎಂಬುದು ಸಿದ್ಧರಾಮಯ್ಯ ಲೆಕ್ಕಾಚಾರ. ಆದರೆ ಅವರ ಲೆಕ್ಕಾಚಾರ ಏನೇ ಇದ್ದರೂ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಕೆಪಿಸಿಸಿ ಅಧ್ತಕ್ಷ ಸ್ಥಾನದ ಬಗ್ಗೆ ಉತ್ಸುಕತೆಯಿಲ್ಲ. ಯುದ್ದ ಕಾಲದಲ್ಲಿ ಪಕ್ಷದ ಅಧ್ಯಕ್ಷರಾಗುವುದು ಬೇರೆ. ಆದರೆ ಇದು ಶಾಂತಿ ಕಾಲ. ಹೀಗಾಗಿ ಪಕ್ಷದ ಅಧ್ಯಕ್ಷರಾಗುವುದಕ್ಕಿಂತ ಸಚಿವರಾಗಿ ಕೆಲಸ ಮಾಡುವುದು ಸೂಕ್ತ ಎಂಬುದು ಅವರ ಯೋಚನೆ.
ಹಾಗಂತ ಅವರು ಸಿದ್ದರಾಮಯ್ಯ ಅವರಿಗೆ ಹೇಳಿದ ನಂತರ ಇದ್ದಕ್ಕಿದ್ದಂತೆ ಮತ್ತೊಬ್ಬ ಲಿಂಗಾಯತ ನಾಯಕರಾದ ಅಪ್ಪಾಜಿ ನಾಡಗೌಡರ ಹೆಸರು ರೇಸಿಗೆ ಬಂದಿದೆ.

ಮೂಲಗಳ ಪ್ರಕಾರ, ಹಾಲಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಎಷ್ಟು ಕಾಲ ಮುಂದುವರಿಯುತ್ತಾರೋ ಮುಂದುವರಿಯಲಿ. ಅವರು ಕೆಳಗಿಳಿದ ನಂತರ ಅಪ್ಪಾಜಿ ನಾಡಗೌಡರು ಕೆಪಿಸಿಸಿ ಪಟ್ಟಕ್ಕೆ ಬರಲಿ ಅಂತ ಸಿದ್ದರಾಮಯ್ಯ ಅವರು ವರಿಷ್ಟರಿಗೂ ಹೇಳಿದ್ದಾರೆ.
ಯಡಿಯೂರಪ್ಪ ಹೇಳಿದ ಟಾಪ್ ಸೀಕ್ರೆಟ್
ಈ ಮಧ್ಯೆ ಬಿಜೆಪಿಯ ಕೆಲ ನಾಯಕರು ಮೊನ್ನೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಅವರು ಪಕ್ಷದೊಳಗಿನ ಭಿನ್ನಮತದ ಬಗ್ಗೆ ಪ್ರಸ್ತಾಪಿಸಿದ್ದಾರೆ.
‘ಸಾರ್, ಇದೇನಿದು? ಪಕ್ಷದೊಳಗಿನ ಭಿನ್ನಮತಕ್ಕೆ ವರಿಷ್ಟರಿಂದ ಮದ್ದು ಅರೆಯುವ ಕಾರ್ಯ ನಡೆಯುತ್ತಿಲ್ಲ.
ಯತ್ನಾಳ್ ಮತ್ತಿತರರ ಬಗ್ಗೆ ನೀವು ಪದೇ ಪದೇ ಹೇಳಿದರೂ ವರಿಷ್ಟರೇಕೆ ಸುಮ್ಮನಿದ್ದಾರೆ? ದಿನ ಬೆಳಗಾದರೆ ಇಂತಹ ಗೊಂದಲವಾಗುತ್ತಿದ್ದರೆ ಪಕ್ಷ ಸಂಘಟನೆಯ ಕೆಲಸಕ್ಕೆ ಹಿನ್ನಡೆ ಆಗುವುದಿಲ್ಲವೇ? ‘ಅಂತ ಕೇಳಿದ್ದಾರೆ.
ಇಷ್ಟೇ ಅಲ್ಲದೆ ಮಾತು ಮುಂದುವರಿಸಿದ ಈ ನಾಯಕರು: ಎಷ್ಟೇ ದೂರು ಕೊಟ್ಟರೂ ವರಿಷ್ಟರು ಕ್ರಮ ಕೈಗೊಳ್ಳುತ್ತಿಲ್ಲ ಎಂದರೆ ಯತ್ನಾಳ್ ಮತ್ತಿತರರಿಗೆ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಒತ್ತಾಸೆ ಇರುವಂತೆ ಕಾಣುತ್ತಿದೆ.
ಮೊನ್ನೆ ಪಕ್ಷದ ಕಚೇರಿಯಲ್ಲಿ ಸಭೆ ಕರೆದಿದ್ದ ಸಂತೋಷ್ ಅವರು ಅಂಬೇಡ್ಕರ್ ಅವರ ಬಗ್ಗೆ ರಾಜ್ಯಾದ್ಯಂತ ಸ್ವಪಕ್ಷೀಯರು ಕಾರ್ಯಕ್ರಮ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕೆಲ ನಾಯಕರು ಸಂತೋಷ್ ಅವರ ಬಳಿ ಹೋಗಿ ಪಕ್ಷದ ಭಿನ್ನಮತೀಯರ ಬಗ್ಗೆ ಪ್ರಸ್ತಾಪಿಸಿದರೆ: ಯೇ ಹೋಗ್ರೀ. ಮೊದಲು ನಾವು ಹೇಳಿದಷ್ಟನ್ನು ಮಾಡ್ರೀ. ಯಾರು ಯಾರು ಏನು ಮಾತಾಡ್ತಾರೆ ಅಂತ ನೀವೇಕೆ ತಲೆಕೆಡಿಸಿಕೊಳ್ತೀರಿ? ಇವತ್ತಿನ ಸಭೆಯಲ್ಲಿ ಅಂಬೇಡ್ಕರ್ ಅವರ ವಿಷಯ ಬಿಟ್ಟರೆ ಬೇರೆ ವಿಷಯದ ಬಗ್ಗೆ ನಾತಾಡ್ಬೇಡಿ ಅಂತ ಗದರಿಸಿದ್ದಾರೆ.

ಅಂದ ಹಾಗೆ ಬೇರೆ ವಿಷಯಗಳ ಬಗ್ಗೆ ಕಟ್ ಅಂಡ್ ಥ್ರೂಟ್ ಆಗಿ ಮಾತನಾಡುವ ಸಂತೋಷ್ ಅವರು ಕರ್ನಾಟಕದ ಭಿನ್ನಮತೀಯರಿಗೆ ಖಡಕ್ ಸೂಚನೆ ನೀಡಿದ್ದರೆ ಆಟವೇ ಬೇರೆ ಇರುತ್ತಿತ್ತು. ಆದರೆ ಸಂತೋಷ್ ಅವರು ಈ ವಿಷಯದಲ್ಲಿ ಉತ್ಸುಕತೆ ತೋರಿಸುತ್ತಿಲ್ಲ. ಅರ್ಥಾತ್, ಕರ್ನಾಟಕದ ಭಿನ್ನಮತೀಯರಿಗೆ ಸಂತೋಷ್ ಅವರ ಒತ್ತಾಸೆ ಇದೆ ಎಂದಿದ್ದಾರೆ. ಯಾವಾಗ ಅವರು ಈ ಮಾತನಾಡಿದರೋ? ಆಗ ಯಡಿಯೂರಪ್ಪ ಅವರು ಎದುರಿಗಿದ್ದ ನಾಯಕರಿಗೆ ಒಂದು ಟಾಪ್ ಸೀಕ್ರೆಟ್ ಹೇಳಿದ್ದಾರೆ.
ಅದೆಂದರೆ ಫೆಬ್ರವರಿ ಹದಿನೈದರ ವೇಳೆಗೆ ಕರ್ನಾಟಕದಲ್ಲಿ ಭಿನ್ನಮತೀಯರ ಬಾಯಿ ಮುಚ್ಚಿಸುತ್ತೇವೆ. ಇಲ್ಲದಿದ್ದರೆ ಹಲವರಿಗೆ ಪಕ್ಷದಿಂದಲೇ ಗೇಟ್ ಪಾಸ್ ಕೊಡುತ್ತೇವೆ ಅಂತ ವರಿಷ್ಟರು ಹೇಳಿದ್ದಾರೆ ಎಂಬುದು. ಹೀಗೆ ಯಡಿಯೂರಪ್ಪ ಅವರು ಹೇಳಿದ ಟಾಪ್ ಸೀಕ್ರೇಟನ್ನು ಕೇಳಿದ ನಾಯಕರು ಸಮಾಧಾನದಿಂದ ಹಿಂತಿರುಗಿದ್ದಾರಾದರೂ ಮುಂದೇನು?ಎಂಬ ಸಣ್ಣ ಅನುಮಾನ ಅವರಲ್ಲಿ ಉಳಿದುಕೊಂಡೇ ಇದೆ.
ಮಿಂಚಿ ಮರೆಯಾದ ಕು.ಬಂಗಾರಪ್ಪ
ಈ ಮಧ್ಯೆ ರಾಜ್ಯ ಬಿಜೆಪಿ ಪಾಳಯದಲ್ಲಿ ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರ ಕುಮಾರ್ ಬಂಗಾರಪ್ಪ ಅವರ ಹೆಸರು ಮಿಂಚಿನಂತೆ ಕಾಣಿಸಿಕೊಂಡು ಅಷ್ಟೇ ಬೇಗ ತೆರೆಯ ಹಿಂದೆ ಸರಿದಿದೆ.
ಬಿಜೆಪಿ ಮೂಲಗಳ ಪ್ರಕಾರ: ಕೆಲ ದಿನಗಳ ಹಿಂದೆ ದಿಲ್ಲಿಗೆ ಹೋಗಿದ್ದ ಯತ್ನಾಳ್, ರಮೇಶ್ ಜಾರಕಿಹೊಳಿ ಮತ್ತಿತರರು ಪಕ್ಷದ ವರಿಷ್ಟರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಬೇಡಿಕೆಯನ್ನು ಮಂಡಿಸಿದ ಈ ನಾಯಕರು: ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬೇಡಿ. ಯಾಕೆಂದರೆ ಈಗ ಜಿಲ್ಲಾಧ್ಯಕ್ಷರಾಗಿರುವ ಬಹುತೇಕರು ಯಡಿಯುರಪ್ಪ-ವಿಜಯೇಂದ್ರ ಅವರ ಆಸಕ್ತಿಯಿಂದ ನೇಮಕಗೊಂಡವರು.
ನಾಳೆ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆದರೆ ಇವರು ವಿಜಯೇಂದ್ರ ಅವರನ್ನೇ ಬೆಂಬಲಿಸುತ್ತಾರೆ. ಮಂಡಲ ಅಧ್ಯಕ್ಷರ ನೇಮಕಾತಿ ಪೆಂಡಿಂಗ್ ಇದೆಯಾದರೂ ಈಗಿರುವ ಬಹುತೇಕರು ಯಡಿಯೂರಪ್ಪ-ವಿಜಯೇಂದ್ರ ಕ್ಯಾಂಪಿನವರು.
ಹೀಗಾಗಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆಸುವ ಬದಲು ವಿಜಯೇಂದ್ರ ಅವರ ಜಾಗಕ್ಕೆ ಬೇರೊಬ್ಬರನ್ನು ನೇಮಕ ಮಾಡಿ. ಈ ವಿಷಯ ಬಂದಾಗ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರ ಕುಮಾರ್ ಬಂಗಾರಪ್ಪ ಅವರ ಹೆಸರನ್ನು ಪರಿಗಣಿಸಿ. ಎಷ್ಟೇ ಆದರೂ ಅವರು ಹಿಂದುಳಿದ ವರ್ಗದ ಪವರ್ ಫುಲ್ ಈಡಿಗ ಕಮ್ಯುನಿಟಿಯವರು.
ವಾಸ್ತವವಾಗಿ ಕರ್ನಾಟಕದಲ್ಲಿ ಒಕ್ಕಲಿಗ-ಲಿಂಗಾಯತ ಸಮುದಾಯ ಬಿಜೆಪಿ ಮಿತ್ರಕೂಟದ ಜತೆಗಿದೆ. ಹೀಗಾಗಿ ನಮಗೆ ಅಗತ್ಯವಾಗಿರುವುದು ಹಿಂದುಳಿದ ವರ್ಗಗಳ ಮತ ಬ್ಯಾಂಕು.
ಈಗ ಕುಮಾರ್ ಬಂಗಾರಪ್ಪ ಅವರನ್ನು ಪಕ್ಷಾಧ್ಯಕ್ಷ ಸ್ಥಾನಕ್ಕೆ ತಂದರೆ ಹಿಂದುಳಿದ ವರ್ಗಗಳಿಗೆ ಸಮಾಧಾನವಾಗುತ್ತದೆ. ಎಷ್ಟೇ ಆದರೂ ಬಿಜೆಪಿಗೆ ಒಂದು ಪವರ್ ಫುಲ್ ಮತ ಬ್ಯಾಂಕಿನ ಬೆಂಬಲ ದೊರಕಿಸಿಕೊಟ್ಟವರು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ.
ಅವರು 2004 ರಲ್ಲಿ ಬಿಜೆಪಿಗೆ ಬಂದ ಕಾರಣಕ್ಕಾಗಿ ಪಕ್ಷ 79 ಸ್ಥಾನಗಳನ್ನು ಪಡೆದು ಕರ್ನಾಟಕದ ನೆಲೆಯಲ್ಲಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿತು. ಈಗ ಅವರ ಪುತ್ರ ಕುಮಾರ್ ಬಂಗಾರಪ್ಪ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಂದರೆ ಬೆಸ್ಟು ಅಂತ ವಿವರಿಸಿದ್ದಾರೆ.

ಹೀಗೆ ಯತ್ನಾಳ್ ಗ್ಯಾಂಗು ದೆಹಲಿಗೆ ಹೋಗಿ ಈ ಪ್ರಸ್ತಾಪ ಮಂಡಿಸಿ ಬಂದಿದ್ದೇ ತಡ, ವಿಷಯ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಕಿವಿಗೆ ತಲುಪಿದೆ. ಯಾವಾಗ ಈ ವಿಷಯ ತಮ್ಮ ಕಿವಿಗೆ ಬಿತ್ತೋ?ಆಗ ತಡ ಮಾಡದ ಯಡಿಯೂರಪ್ಪ-ವಿಜಯೇಂದ್ರ ಅವರು ತಮ್ಮ ಬೆಂಬಲಿಗರ ಸಭೆ ಕರೆದು ತುರ್ತು ಠರಾವು ಪಾಸು ಮಾಡಿದ್ದಾರೆ.
ಅವರು ಪಾಸು ಮಾಡಿಸಿದ ಠರಾವು: ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯಲೇಬೇಕು. ಆ ಮೂಲಕ ಆಯ್ಕೆಯಾದ ಅಧ್ಯಕ್ಷರ ನೇತೃತ್ವದಲ್ಲೇ ಪಕ್ಷ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸಬೇಕು ಅಂತ ವರಿಷ್ಟರನ್ನು ಆಗ್ರಹಿಸಿದೆ. ಯಾವಾಗ ಈ ಠರಾವು ದಿಲ್ಲಿಗೆ ತಲುಪಿತೋ? ಮತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ವರಿಷ್ಟರು ಚುನಾವಣೆ ನಡೆಸುವುದು ಕನ್ ಫರ್ಮ್ ಆಯಿತೋ? ಆಗ ಕುಮಾರ್ ಬಂಗಾರಪ್ಪ ಅವರ ಹೆಸರು ಅಧ್ಯಕ್ಷ ಸ್ಥಾನದ ರೇಸಿನಿಂದ ಇದ್ದಕ್ಕಿದ್ದಂತೆ ಹಿಂದೆ ಸರಿದಿದೆ. ಅಷ್ಟೇ ಅಲ್ಲ.ಈಗ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ನಾನೇ ಕತ್ತಿ ಎತ್ತುತ್ತೇನೆ ಅಂತ ಯತ್ನಾಳ್ ಘೋಷಿಸುವ ಸ್ಥಿತಿ ಬಂದಿದೆ.
ಆರ್.ಟಿ.ವಿಠ್ಠಲಮೂರ್ತಿ