ದರೋಡೆಗೆ ಇಂಚಿಂಚೂ ಮಾಹಿತಿ ನೀಡಿದ್ದ ನಾರ್ಶ ಸಿರಾಜ್, ಮಟನ್ ಇಕ್ಬಾಲ್, ಅಳಪೆ ಅನ್ಸಾರ್ ಅಂದರ್
ಬಂಟ್ವಾಳ ಬೋಳಂತೂರು ನಾರ್ಶದ ಉದ್ಯಮಿ ಸಿಂಗಾರಿ ಬೀಡಿ ಮಾಲಕರಾದ ಸುಲೈಮಾನ್ ಹಾಜಿ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕೃತ್ಯದಲ್ಲಿ ಸ್ಥಳೀಯರು ಸೇರಿದಂತೆ ಮಲಯಾಳಿ ಎಎಸ್ ಐ ಯೊಬ್ಬನಿಗೆ ಕೋಳ ತೊಡಿಸುವಲ್ಲಿ ಜಿಲ್ಲೆಯ ಪೊಲೀಸರು ಸಫಲರಾಗಿದ್ದಾರೆ.
ಜನವರಿ 3 ರಂದು ಇ.ಡಿ ಅಧಿಕಾರಿಗಳೆಂದು ನಂಬಿಸಿ ಸಿಂಗಾರಿ ಬೀಡಿ ಮಾಲಿಕರ ಮನೆಗೆ ನುಗ್ಗಿ ಹಣ ಲೂಟಿ ಮಾಡಿ ದರೋಡೆಕೋರರು ಪರಾರಿಯಾಗಿದ್ದರು. ಆದರೆ ಈ ದರೋಡೆ ಹಿಂದೆ ಆಪ್ತ ಬಳಗವೇ ಕೈಯಾಡಿಸಿರುವ ಬಗ್ಗೆ ಸ್ಪೆಷಲ್ ನ್ಯೂಸ್ ಮೀಡಿಯಾ ವಿಸ್ತೃತ ವರದಿಯನ್ನು ಬಿತ್ತರಿಸಿತ್ತು.

ವಿಟ್ಲ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿದ್ದ ಕೇರಳದ ಕೊಟ್ಟಾಯಂನ ಅನಿಲ್ ಫೆರ್ನಾಂಡಿಸ್, ಸಚಿನ್ ಮತ್ತು ಶಬಿನ್ ಎಂಬವರನ್ನು ಈ ಹಿಂದೆಯೇ ಬಂಧಿಸಿತ್ತು. ಆದರೆ ಇದರ ಹಿಂದಿರುವ ಸ್ಥಳೀಯರನ್ನು ಪತ್ತೆ ಹಚ್ಚಲು ಪೊಲೀಸರು ವಿಫಲರಾಗಿದ್ದರು.
ಉದ್ಯಮಿ ಸುಲೈಮಾನ್ ಅವರು ಬಿ.ಸಿ ರೋಡಿನ ಸಮೀಪವಿರುವ ತನ್ನ ಜಾಗವನ್ನು ಕೋಟಿ ಕೋಟಿಗೆ ವಹಿವಾಟು ನಡೆಸಿ, ಆ ಹಣವನ್ನು ಮನೆಗೆ ತರದೆ ತನ್ನ ಆಪ್ತರೊಬ್ಬರಲ್ಲಿ ನೀಡಿದ್ದರು . ದರೋಡೆಯಾಗುವ ಕೆಲವು ಗಂಟೆ ಮುಂಚೆಯಷ್ಟೇ ಆ ಹಣ ಸುಲೈಮಾನ್ ಹಾಜಿಯವರ ಮನೆ ಸೇರಿತ್ತು. ಶನಿವಾರದಂದು ಬೀಡಿ ಕಾರ್ಮಿಕರಿಗೆ ಬಟವಾಡೆ ನೀಡಲು ಇಟ್ಟಿದ್ದ ಕೋಟಿಗೂ ಅಧಿಕ ಮೊತ್ತ ಹಣವೂ ಇವರ ಬಳಿಯಿತ್ತು.

ಜಾರಿ ನಿರ್ದೇಶನಾಲಯ ಅಧಿಕಾರಿಯೆಂದು ಮನೆ ಪ್ರವೇಶಿಸಿ ಹಣ ಲೂಟಿದ ದರೋಡೆಕೋರರ ತಂಡ ಬೀಡಿ ಕಾರ್ಮಿಕರಿಗೆ ಬಟವಾಡೆ ಮಾಡುವ ಹಣ ಮಾತ್ರವಲ್ಲ, ಜಾಗ ಮಾರಾಟದ ಹಣ ಎಲ್ಲಿದೆ ಎಂದು ನೇರವಾಗಿ ಕೇಳಿದ್ದರು . ಸುಲೈಮಾನ್ ಹಾಜಿ ಅವರ ಮನೆಗೆ ಈ ಹಿಂದೆಯೊಮ್ಮೆ incom Tex ಅಧಿಕಾರಿಗಳು ದಾಳಿ ನಡೆಸಿದ್ದರು. ಆದರೆ ಅವತ್ತು ಅಧಿಕಾರಿಗಳು ಕೇಸ್ ಮಾಡದೆ ಸೆಟ್ಲ್ ಮೆಂಟ್ ನಡೆಸಿ ಅಲ್ಲಿಂದ ತೆರಳಿದ್ದರಂತೆ. ಆದರೆ ಇದೀಗ ದಾಳಿ ನಡೆಸಿದ ಅಧಿಕಾರಿಗಳು ಹಿಂದಿನ ಕೇಸ್ ಅನ್ನು ರೀ ಓಪನ್ ಮಾಡುತ್ತೇವೆ, ತಮ್ಮ ಮಗನ ಮೇಲೆ ಪ್ರಕರಣ ದಾಖಲಿಸುತ್ತೇವೆ ಎಂದು ಬೆದರಿಸಿದ ಕಾರಣ ಉದ್ಯಮಿ ಸೇಫಾಗಿ ಇಟ್ಟಿದ್ದ ಜಾಗ ಮಾರಾಟದ ಹಣವನ್ನು ತಂದು ತೋರಿಸಿದ್ದಾರಂತೆ. ನಕಲಿ ಅಧಿಕಾರಿಗಳು ಚಿನ್ನ, ಒಡವೆಗಳನ್ನು ಅಲ್ಲಿಯೇ ಬಿಟ್ಟು ತಮಗೆ ಬೇಕಾದಷ್ಟು ಹಣ ಸಿಕ್ಕಿದ ಕಾರಣ ಅಲ್ಲಿಂದ ಪರಾರಿಯಾಗಿದ್ದಾರೆ. ಬಲ್ಲ ಮೂಲಗಳ ಪ್ರಕಾರ 5 ಕೋಟಿಗೂ ಅಧಿಕ ಹಣ ಡರೋಡೆಗೈಯ್ಯಲಾಗಿದೆ ಎಂಬ ಶಂಕೆ ಇದ್ದು, ಪೊಲೀಸ್ ದೂರಿನಲ್ಲಿ ಕೇವಲ 30 ಲಕ್ಷ ರೂಪಾಯಿ ದರೋಡೆಯಾಗಿರುವುದಾಗಿ ತಿಳಿಸಲಾಗಿದೆ.
ಈ ತನಿಖೆಯ ಜಾಡು ಹಿಡಿದು ಹೋದ ಪೊಲೀಸರು ಕೊಡುಂಗಲ್ಲೂರು ಎಎಸ್ಐ ಶಹೀರ್ ಬಾಬು ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಂಗಾರಿ ಬೀಡಿ ಮಾಲಿಕರ ದರೋಡೆ ಕೃತ್ಯದ ಮಾಸ್ಟರ್ ಮೈಂಡ್ ರಿಯಲ್ ಪೊಲೀಸ್ ಆಗಿದ್ದು, ಆರೋಪಿಗಳನ್ನು ಇ.ಡಿ ಅಧಿಕಾರಿಯಾಗಿ ನಟಿಸಲು ತರಬೇತಿ ಕೊಟ್ಟಿದ್ದೇ ಈತ. ದರೋಡೆಯ ನಂತರ ತನ್ನ ಪಾಲಿನ ಹಣವನ್ನು ತೆಗೆದುಕೊಂಡು ಹೋಗಿ ಕರ್ತವ್ಯಕ್ಕೆ ಹಾಜರಾಗಿದ್ದ. ಯಾರಿಗೂ ಅನುಮಾನ ಬಾರದಂತೆ ವರ್ತಿಸಿದ್ದ. ಆದರೆ ಕೊನೆಗೆ ಪೊಲೀಸಪ್ಪನನ್ನೇ ಪೊಲೀಸರು ಬಂಧಿಸಿದರು. ಇದರ ಜೊತೆಗೆ ಕೃತ್ಯದಲ್ಲಿ ಭಾಗಿಯಾಗಿದ್ದ ಪರ್ಲಿಯಾ ಇಕ್ಬಾಲ್, ಸಿರಾಜುದ್ದೀನ್ ನಾರ್ಶ, ಅಳಪೆ ಅನ್ಸಾರ್ ನನ್ನು ಬಂಧಿಸಲಾಗಿದೆ. ನಾರ್ಶದ ಸಿರಾಜುದ್ದೀನ್ ಸಿಂಗಾರಿ ಬೀಡಿ ಮಾಲಿಕರೊಂದಿಗೆ ಅತ್ಯಂತ ಆತ್ಮೀಯ ಒಡನಾಟ ಹೊಂದಿದ್ದ. ಮನೆಯ ಲೋಕೇಶನ್, ಇಂಚಿಂಚೂ ಮಾಹಿತಿ ದರೋಡೆ ತಂಡಕ್ಕೆ ನೀಡಿದ್ದ. ಇನ್ನು ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಹೊಂದಿರುವ ಪರ್ಲಿಯಾ ಇಕ್ಬಾಲ್ ಸ್ಥಳೀಯವಾಗಿ ಮಟನ್ ಇಕ್ಬಾಲ್ ಎಂದು ಕುಖ್ಯಾತಿ ಪಡೆದಿದ್ದಾನೆ.